Advertisement

ಗಡಿಯಲ್ಲಿ ಸಮರ ಯೋಜನೆ; ಸೇನಾ ಸಿದ್ಧತೆ ಪರಿಶೀಲಿಸಿದ ಭೂಸೇನೆ, ವಾಯುಸೇನೆ ಮುಖ್ಯಸ್ಥರು

01:28 AM Sep 04, 2020 | mahesh |

ಲಡಾಖ್‌: ಗಡಿಯಲ್ಲಿ ಚೀನದ ಉದ್ಧಟ ವರ್ತನೆ ಮುಂದುವರಿದಿರುವಂತೆಯೇ ಭೂಸೇನಾ ಮುಖ್ಯಸ್ಥ ಜ| ಎಂ. ನರವಾಣೆ ಅವರು ಎರಡು ದಿನಗಳ ಭೇಟಿಗಾಗಿ ಲೇಹ್‌ಗೆ ಆಗಮಿಸಿದ್ದು, ಸೇನಾ ಸಿದ್ಧತೆ ಪರಿಶೀಲನೆ ನಡೆಸಿದ್ದಾರೆ. ವಾಯುಸೇನಾ ಮುಖ್ಯಸ್ಥ ಆರ್‌ಕೆಎಸ್‌ ಭದೌರಿಯಾ ಅವರೂ ಜತೆಗೆ ತೆರಳಿರುವುದು ಪರಿಸ್ಥಿತಿ ಗಂಭೀರವಾಗಿದೆ ಎಂಬುದನ್ನು ಬಿಂಬಿಸುತ್ತಿದೆ. ದಿಲ್ಲಿಯಲ್ಲಿ ಮಾತನಾಡಿರುವ ಮೂರೂ ಪಡೆಗಳ ಮುಖ್ಯಸ್ಥ ಜ| ಬಿಪಿನ್‌ ರಾವತ್‌, ಚೀನ ಮತ್ತು ಪಾಕ್‌ ಎರಡಕ್ಕೂ ಪಾಠ ಕಲಿಸುವಷ್ಟು ಶಕ್ತಿ ಭಾರತೀಯ ಸೇನೆಗಿದೆ ಎಂದು ಗುಡುಗಿದ್ದಾರೆ.

Advertisement

ಆಗಸ್ಟ್‌ ಅಂತ್ಯದಿಂದ ಆರಂಭಗೊಂಡು ಸೆಪ್ಟಂಬರ್‌ ಆರಂಭದ ವರೆಗೂ ಗಡಿಯಲ್ಲಿ ಚೀನ ಉಪಟಳ ನೀಡುತ್ತಲೇ ಇದೆ. ಪ್ರತೀ ಬಾರಿಯೂ ಅದಕ್ಕೆ ತಕ್ಕ ಪ್ರತ್ಯುತ್ತರವನ್ನು ಭಾರತೀಯ ಸೇನೆಯು ನೀಡಿದೆ. ಆದರೂ ಚೀನವನ್ನು ನಂಬುವಂತಿಲ್ಲ ಎಂಬ ಕಾರಣದಿಂದಲೇ ಭೂಸೇನಾ ಮುಖ್ಯಸ್ಥರು ಲೇಹ್‌ಗೆ ತೆರಳಿದ್ದಾರೆ ಎನ್ನಲಾಗುತ್ತಿದೆ. ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ)ಯ ಸೇನಾ ವಿನ್ಯಾಸದಲ್ಲಿ ಸೈ ಎನಿಸಿಕೊಂಡಿರುವ ಜ| ನರವಾಣೆ ಎಂದರೆ ಚೀನಕ್ಕೆ ಭೀತಿ. 1962ರ ಯುದ್ಧದಲ್ಲಿ ಚೀನ ವಶಪಡಿಸಿಕೊಂಡಿದ್ದ ಶಿಖರಗಳನ್ನು ಆ. 29, 30ರಂದು ಒಂದೇ ಒಂದು ಬುಲೆಟ್‌ ಹಾರಿಸದೆ ಬಾಚಿಕೊಂಡಿರುವ ಭಾರತೀಯ ಭೂಸೇನೆಗೆ ದಂಡನಾಯಕನ ಭೇಟಿ ನೂರಾನೆ ಬಲ ತಂದಿದೆ.

ಗೃಹ ಸಚಿವಾಲಯದ “ಹೈ ಅಲರ್ಟ್‌’, ರಕ್ಷಣ ಸಚಿವರ ತುರ್ತು ಸಭೆಯ ರಹಸ್ಯಗಳನ್ನು ಗಡಿತುದಿಗೆ ಮುಟ್ಟಿಸಲು ಜ| ನರವಾಣೆ ಭೇಟಿ ಅತ್ಯಂತ ನಿರ್ಣಾಯಕವಾಗಿದೆ. ಲಡಾಖ್‌ ವಲಯದ ಹಿರಿಯ ಫೀಲ್ಡ್‌ ಕಮಾಂಡರ್‌ಗಳು ಎಲ್‌ಎಸಿಯ ಸದ್ಯದ ಸ್ಥಿತಿಯನ್ನು ಸೇನಾ ಮುಖ್ಯಸ್ಥರ ಮುಂದಿಡಲಿದ್ದಾರೆ.

ಲೇಹ್‌ಗೆ ಜ| ಭದೌರಿಯಾ ವಾಯುಪಡೆ ಮುಖ್ಯಸ್ಥ ಜ| ಆರ್‌ಕೆಎಸ್‌ ಭದೌರಿಯಾ ಪೂರ್ವ ಲಡಾಖ್‌ನ ಮುಂಚೂಣಿ ನೆಲೆಗಳಲ್ಲಿ ನಿರಂತರ ಮೀಟಿಂಗ್‌ ನಡೆಸುತ್ತಿದ್ದಾರೆ. ಲೇಹ್‌ ಸುತ್ತಮುತ್ತಲಿನ ನೆಲೆಗಳಲ್ಲಿ ಸನ್ನದ್ಧವಾಗಿರುವ ಸುಖೋಯ್‌ 30 ಎಂಕೆಐ, ಜಾಗ್ವಾರ್‌, ಮಿರಾಜ್‌ 2000 ವಿಮಾನಗಳ ಮುಂದಿನ ಕಾರ್ಯಯೋಜನೆ ನಿರ್ಧಾರಗೊಳ್ಳಲಿದೆ. ಅಗತ್ಯ ಬಿದ್ದರೆ ರಫೇಲ್‌ ಯುದ್ಧವಿಮಾನಗಳ ನಿಯೋಜನೆಗೂ ಯೋಜನೆ ಸಿದ್ಧಗೊಳ್ಳಲಿದೆ. ಅಕ್ಸಾಯ್‌ ಚಿನ್‌ ವಲಯದಲ್ಲಿ ಚೀನದ ಸೇನೆ (ಪಿಎಲ್‌ಎ) ಹೆಲಿಕಾಪ್ಟರ್‌ಗಳ ನಿರಂತರ ಹಾರಾಟದ ಮೇಲೆ ಐಎಎಫ್ ನಿಗಾ ಮುಂದುವರಿದಿದೆ ಎಂದು ಸೇನೆಯ ಮೂಲಗಳು ತಿಳಿಸಿವೆ.

ಮುಂಚೂಣಿಯಲ್ಲಿ ಎಸ್‌ಎಸ್‌ಎಫ್
ಪಿಎಲ್‌ಎ ಪಡೆಗಳ ಚಲನಾವಲನಗಳನ್ನು ಚುರುಕಾಗಿ ಗ್ರಹಿಸಬಲ್ಲ ವಿಶೇಷ ಗಡಿನಾಡು ಪಡೆ (ಎಸ್‌ಎಸ್‌ಎಫ್)ಯ ಮತ್ತಷ್ಟು ತುಕಡಿಗಳನ್ನು ಎಲ್‌ಎಸಿಯಲ್ಲಿ ನಿಲ್ಲಿಸಲಾಗಿದೆ. 1962ರ ಯುದ್ಧದ ಅನಂತರ ಎಲ್‌ಎಸಿ ರಕ್ಷಣೆಗೆಂದೇ ಮೀಸಲಾದ ಈ ಪಡೆ, ಪಿಎಲ್‌ಎ ಕುತಂತ್ರಗಳನ್ನು ಹಲವು ಬಾರಿ ಭೇದಿಸಿದೆ ಎಂದು ಮೂಲಗಳು ತಿಳಿಸಿವೆ.

Advertisement

“ಹೈವೇ- 219′ ಮೇಲೆ ನಿಗಾ
ಡೆಮಾcಕ್‌ ಮತ್ತು ಚುಮಾರ್‌ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಸ್ತ್ರಸಜ್ಜಿತ ಸೈನಿಕರು ಸಕ್ರಿಯರಾಗಿದ್ದಾರೆ. ಪಿಎಲ್‌ಎಯ ಕಾಲಾಳುಪಡೆ, ಮಿಲಿಟರಿ ಉಪಕರಣಗಳನ್ನು ಹೊತ್ತ ವಾಹನಗಳು ಆಗಮಿಸುವುದೇ ಲಾಸಾ- ಕಾಸ್ಗರ್‌ (219) ಹೆದ್ದಾರಿ ಮೂಲಕ. ಚುಶುಲ್‌ನಲ್ಲಿ ನಿಯೋ ಜನೆಗೊಂಡಿರುವ ತುಕಡಿ ಸಂಪೂರ್ಣವಾಗಿ ಈ ಹೈವೇ ಮೇಲೆ ಹದ್ದುಗಣ್ಣು ಇರಿಸಲಿದೆ.

ಅರುಣಾಚಲಕ್ಕೆ ಬಲ
ಸಶಸ್ತ್ರ ಸೀಮಾ ಬಲ (ಎಸ್‌ಎಸ್‌ಬಿ)ದ ಹಲವು ಕಂಪೆನಿಗಳನ್ನು ಅರುಣಾಚಲ ಪ್ರದೇಶದ ಎಲ್‌ಎಸಿಗೆ ತೆರಳಲು ಸೂಚಿಸಲಾಗಿದೆ. ಬುಧವಾರ ರಾತ್ರಿಯಿಂದಲೇ ಲಡಾಖ್‌ನ ಎಲ್‌ಎಸಿ ಉದ್ದಕ್ಕೂ ಹೆಚ್ಚುವರಿ ಸೈನಿಕರನ್ನು ನಿಯೋಜಿಸುವ ಪ್ರಕ್ರಿಯೆಯೂ ಆರಂಭಗೊಂಡಿದೆ. ಕಾಶ್ಮೀರ ಸಹಿತ ಇತರ ಭಾಗಗಳಲ್ಲಿದ್ದ ಸೈನಿಕರನ್ನು ಲಡಾಖ್‌ಗೆ ಸ್ಥಳಾಂತರಿಸಲಾಗುತ್ತಿದೆ.

ಡಿಜಿಟಲ್‌ ಸ್ಟ್ರೈಕ್‌ಗೆ ಉರಿದ ಚೀನ
ಪಬ್‌ಜಿ ಸಹಿತ 118 ಚೀನೀ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದ ಭಾರತದ ನಿಲುವು ಚೀನದ ಉರಿಯನ್ನು ಹೆಚ್ಚಿಸಿದೆ. ಭಾರತದ ಕ್ರಮ ಚೀನದ ಹೂಡಿಕೆದಾರರು ಮತ್ತು ಸೇವಾ ಪೂರೈಕೆದಾರರ ಕಾನೂನು ಹಿತಾಸಕ್ತಿಗಳನ್ನು ಉಲ್ಲಂ ಸುತ್ತದೆ. ಭಾರತ ತನ್ನ ಪ್ರಮಾದವನ್ನು ಸರಿಪಡಿಸಿಕೊಳ್ಳ ಬೇಕು ಎಂದು ಚೀನ ಹೇಳಿದೆ.

“ಚೀನ, ಪಾಕ್‌ಗೆ ಜತೆಯಾಗಿ ಪಾಠ’
ಚೀನ ಮತ್ತು ಪಾಕ್‌ ಒಟ್ಟಾಗಿ ಬಂದರೂ ಎದುರಿಸುವ ಸಾಮರ್ಥ್ಯ ನಮ್ಮ ಸೇನೆಗೆ ಇದೆ ಎಂದು ದಿಲ್ಲಿಯಲ್ಲಿ ಮೂರೂ ಪಡೆಗಳ ಮುಖ್ಯಸ್ಥ ಜ| ಬಿಪಿನ್‌ ರಾವತ್‌ ಎಚ್ಚರಿಕೆ ನೀಡಿದ್ದಾರೆ.  ಯುಎಸ್‌- ಇಂಡಿಯಾ ಸ್ಟ್ರಾಟೆಜಿಕ್‌ ಪಾಟ್ನರ್‌ಶಿಪ್‌ ಫೋರಂ ಆಯೋಜಿಸಿದ್ದ ಸೆಮಿನಾರ್‌ನಲ್ಲಿ ಅವರು ಚೀನದ ಗಡಿ ದುರ್ವರ್ತನೆ, ಪಾಕ್‌ನ ಉಗ್ರವಾದ ಕುಮ್ಮಕ್ಕಿನ ದುಬುìದ್ಧಿಗೆ ಒಂದೇ ವಾಗ್ಬಾಣದಲ್ಲಿ ಪ್ರತ್ಯುತ್ತರ ನೀಡಿದರು. ಭಾರತ ಈ ದಿನಗಳಲ್ಲಿ ಅತ್ಯಂತ ಸಂಕೀರ್ಣವಾದ ಬೆದರಿಕೆ, ಸವಾಲುಗಳನ್ನು ಎದುರಿಸುತ್ತಿದೆ. ಅಣ್ವಸ್ತ್ರದಿಂದ ಪರೋಕ್ಷ ಯುದ್ಧದ ವರೆಗೆ ಪರಿಪೂರ್ಣ ಸವಾಲುಗಳು ರಾಷ್ಟ್ರದ ಮುಂದಿವೆ. ಅವುಗಳೆಲ್ಲವನ್ನೂ ಸೇನೆ ಸಮರ್ಥವಾಗಿ ನಿಭಾಯಿಸಲಿದೆ. ಅದರಲ್ಲೂ ಚೀನ ತೋರುವ ದುರ್ವರ್ತನೆಗಳಿಗೆ ಸೂಕ್ತ ರೀತಿಯಲ್ಲಿ ಉತ್ತರಿಸಲು ಮೂರೂ ಪಡೆಗಳು ಸಿದ್ಧವಾಗಿವೆ ಎಂದು ಎಚ್ಚರಿಸಿದರು.

ಸೇನಾ ಮರುವಿನ್ಯಾಸ, ಚೀನ ತಬ್ಬಿಬ್ಬು
ಭಾರತೀಯ ಸೇನೆಯು ಚೀನದ ಊಹೆಗೂ ನಿಲುಕದಂತೆ ಸೇನಾ ತುಕಡಿಗಳ ಮರುವಿನ್ಯಾಸ ಮಾಡಿ, ಪಿಎಲ್‌ಎ ಲೆಕ್ಕಾಚಾರಗಳನ್ನೆಲ್ಲ ತಬ್ಬಿಬ್ಬು ಮಾಡುತ್ತಿದೆ. ಡೆಪ್ಸಾಂಗ್‌, ಚುಮಾರ್‌ ಪ್ರದೇಶದಲ್ಲಿ ಶಸ್ತ್ರಸಜ್ಜಿತ ಮತ್ತು ಯಾಂತ್ರೀಕೃತ ಅಂಶಗಳನ್ನು ಆಧರಿಸಿ ತುಕಡಿಗಳನ್ನು ನಿಯೋಜಿಸಿದೆ. ಪಿಎಲ್‌ಎಯ ಯಾವುದೇ ಅತಿಕ್ರಮಣವನ್ನು ಮುಂಚಿತವಾಗಿ ಗುರುತಿಸಿ, ಎಲ್‌ಎಸಿಯ ಎಲ್ಲ ಜಾಗಗಳನ್ನು ಸುರಕ್ಷಿತಗೊಳಿಸುವ ಸಲುವಾಗಿ ಸೇನೆಯ ಮರುಜೋಡಣೆ ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತ ವಿರೋಧಿ ಪ್ರತಿಭಟನೆಗೆ ಚೀನ ಹಣ
ಭಾರತದ ಸಂಯಮ ಕೆರಳಿಸುವ ಚೀನ ಪಿತೂರಿಗಳು ನೇಪಾಲಕ್ಕೂ ವಿಸ್ತರಿಸಿವೆ. ಮಿಲಿಟರಿ ಪ್ರಚೋದನೆಯ ಅನಂತರ ಈಗ ನೇಪಾಲದ ಗಡಿಯಲ್ಲಿ ಭಾರತ ವಿರೋಧಿ ಪ್ರತಿಭಟನೆಗಳಿಗೆ ಚೀನ ಹಣ ನೀಡುತ್ತಿದೆ ಎಂಬ ಸಂಗತಿಯನ್ನು ಗುಪ್ತಚರ ಮೂಲಗಳು ತಿಳಿಸಿವೆ.
ನೇಪಾಲದ ಹಲವು ಸಂಘಟನೆಗಳಿಗೆ 2.5 ಕೋಟಿ ರೂ.ಗಳನ್ನು ಚೀನ ಪಾವತಿಸಿದೆ ಎಂದು ಗುಪ್ತಚರ ಹೇಳಿಕೆ ಆಧರಿಸಿ “ಐಎಎನ್‌ಎಸ್‌’ ವರದಿ ಮಾಡಿದೆ.

ಸಂಘರ್ಷಕ್ಕೆ ಚೀನವೇ ಕಾರಣ
ಚೀನ ಜತೆಗೆ ಕಳೆದ ನಾಲ್ಕು ತಿಂಗಳಿಂದ ನಡೆಯುತ್ತಿರುವ ಸಂಘರ್ಷಕ್ಕೆ ಆ ದೇಶವೇ ಕಾರಣ ಎಂದು ವಿದೇಶಾಂಗ ಇಲಾಖೆ ಹೇಳಿದೆ. ಭಾರತದ ವಿರುದ್ಧ ಗೂಬೆ ಕೂರಿಸಲು ಯತ್ನಿಸುತ್ತಿರುವ ಚೀನಕ್ಕೆ ತಿರುಗೇಟು ನೀಡಿರುವ ಇಲಾಖೆಯ ವಕ್ತಾರ ಅನುರಾಗ್‌ ಶ್ರೀವಾಸ್ತವ, ಭಾರತ ಇಂದಿಗೂ ಮಾತುಕತೆಯ ಮೇಲೆಯೇ ನಂಬಿಕೆ ಇರಿಸಿದೆ. ಆದರೆ ಚೀನವೇ ಸಂಘರ್ಷದ ಹಾದಿ ಹಿಡಿದಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next