ತಿರುವನಂತಪುರ: ಕೇರಳದ ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ಇತ್ತೀಚೆಗೆ ಲವ್ ಜಿಹಾದ್ ಹೆಸರಿನಲ್ಲಿ ಭಾರೀ ಸದ್ದು ಮಾಡಿದ್ದ ಡಿವೈಎಫ್ಐ ಕಾರ್ಯಕರ್ತನಾದ ಶೆಜಿನ್ ಹಾಗೂ ಕ್ರೈಸ್ತ ಯುವತಿಯ ಮದುವೆಯಲ್ಲಿ ತಾನು ಮಧ್ಯ ಪ್ರವೇಶಿಸುವುದಿಲ್ಲ ಎಂದು ಕೇರಳ ಹೈಕೋರ್ಟ್ ಸ್ಪಷ್ಟಪಡಿಸಿದೆ.
ಸೌದಿ ಅರೇಬಿಯಾದಲ್ಲಿ ಶುಶ್ರೂಷಕಿಯಾಗಿ ಸೇವೆ ಸಲ್ಲಿಸುತ್ತಿರುವ ತನ್ನ ಮಗಳನ್ನು ಡಿವೈಎಫ್ಐ ಸಂಘಟನೆಯ ಕಾರ್ಯಕರ್ತನಾದ ಶೆಜಿನ್ ಅಪಹರಿಸಿ, ಆಕೆಯ ಮೇಲೆ ಒತ್ತಡ ಹೇರಿ ಮದುವೆಯಾಗಿದ್ದಾನೆಂದು ಯುವತಿಯ ತಂದೆ ಜೋಸೆಫ್, ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠದ ಮುಂದೆ ಹೇಳಿಕೆ ನೀಡಿದ ಯುವತಿ, ತನ್ನನ್ನು ಯಾರೂ ಅಪಹರಿಸಿಲ್ಲ ಅಥವಾ ಒತ್ತಡ ಹೇರಿಲ್ಲ ಎಂದಿದ್ದಾಳೆ. ಜೊತೆಗೆ, ಶೆಜಿನ್‌ನನ್ನು ಸ್ವಯಂ ಇಚ್ಛೆಯಿಂದ ಮದುವೆಯಾಗಿದ್ದಾಗಿ ತಿಳಿಸಿದ್ದಾಳೆ. ಇನ್ನು, ಈ ಸಂದರ್ಭದಲ್ಲಿ ತನ್ನ ಮನೆಯವರೊಂದಿಗೆ ಮಾತನಾಡಲು ತನಗೆ ಇಷ್ಟವಿಲ್ಲವೆಂದು ಹೇಳಿದ್ದಾಳೆ.
ಇದನ್ನೂ ಓದಿ:ಪಕ್ಷ ಸಿದ್ದಾಂತ, ನಾಯಕತ್ವ ಇಲ್ಲದ ಕಾಂಗ್ರೆಸ್ ದೇಶವನ್ನೇ ಗೆಲ್ಲಲು ಹೊರಟಿದೆ : ಸಿಎಂ ವ್ಯಂಗ್ಯ
ಯುವತಿಯ ಹೇಳಿಕೆಗಳನ್ನು ದಾಖಲಿಸಿಕೊಂಡ ಹೈಕೋರ್ಟ್, ವಧುವಿನ ವಯಸ್ಸು 26 ಆಗಿರುವುದರಿಂದ ಆಕೆಯ ಸ್ವಯಂ ನಿರ್ಧಾರಕ್ಕೆ ಕಾನೂನಿನ ಮಾನ್ಯತೆಯಿದೆ. ಹಾಗಾಗಿ, ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.