ಲಕ್ನೋ : ಸರಕಾರದ ಸವಲತ್ತುಗಳನ್ನು ಕೆಲ ಬಾರಿ ಅನರ್ಹರು ಸುಳ್ಳು ದಾಖಲೆಗಳನ್ನು ನೀಡಿ ಪಡೆಯುವುದು, ಪತಿ ಬದುಕಿದ್ದಾಗಲೇ ವಿಧವಾ ವೇತನ ಪಡಯುವ ಪ್ರಕರಣ ಗಳು ಆಗಾಗ ಬೆಳಕಿಗೆ ಬರುತ್ತವೆ. ಆದರೆ ಮದುವೆಯಾಗಿ ಮಗುವಿದ್ದರೂ ಸಾಮೂಹಿಕ ವಿವಾಹದಲ್ಲಿ ನಿಡಲಾಗುವ ಸಹಾಯಧನವನ್ನು ಪಡೆಯುವ ದುರಾಸೆಗೆ ಬಿದ್ದ ದಂಪತಿಗಳಿಬ್ಬರು ಸಿಕ್ಕಿ ಬಿದ್ದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ನಡೆದದ್ದೇನು ?
ಖುಷಿನಗರದ ನೆಬುವಾ ನೌರಂಗಿಯಾ ಎಂಬಲ್ಲಿ ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆ ಅಡಿ ಸಾಮೂಹಿಕ ವಿವಾಹವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಜಾತಶಂಕರ್ ತ್ರಿಪಾಠಿ ಅವರು ಭಾಗಿಯಾಗಿದ್ದರು.
ಮದುವೆಯಲ್ಲಿ ಭಾಗಿಯಾಗಿ ಆಗ ತಾನೇ ಮಾಂಗಲ್ಯ ಕಟ್ಟಿಸಿಕೊಂಡಿದ್ದ ವಧು ಬದಿಗೆ ಬಂದು ಅಳುತ್ತಿದ್ದ ಮಗುವಿಗೆ ಎದೆ ಹಾಲುಣಿಸುವುದನ್ನು ಕಂಡು ಹಲವರು ಜಿಜ್ಞಾಸೆಗೊಳಗಾಗಿದ್ದಾರೆ. ಅನುಮಾನ ಗೊಂಡು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಅಧಿಕಾರಿಗಳು ವಿಚಾರಣೆ ನಡೆಸಿದಾಗ, ಮಗು ನವ ವಧುವಿನದ್ದೇ ಎಂದು ತಿಳಿದು ಬಂದಿದೆ!. ಮಮತಾ ಎಂಬ ಆಕೆಗೆ 2 ವರ್ಷಗಳ ಹಿಂದೆ ಪ್ರದೀಪ್ ಎಂಬಾತನೊಂದಿಗೆ ವಿವಾಹವಾಗಿತ್ತು ಎನ್ನುವುದು ತಿಳಿದು ಬಂದಿದೆ.
ಅಧಿಕಾರಿಗಳು ವಂಚಕ ದಂಪತಿಗಳ ಖಾತೆಗೆ ಜಮಾವಣೆಗೊಂಡಿರುವ ಹಣವನ್ನು ಹಿಂಪಡೆಯುತ್ತೇವೆ. ಕಾನೂನಿನಲ್ಲಿ ಅವಕಾಶವಿದ್ದರೆ ಎಫ್ಐಆರ್ ಕೂಡ ದಾಖಲಿಸುವುದಾಗಿ ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆಯಡಿ ವಧುವಿನ ಖಾತೆಗೆ 20 ಸಾವಿರ ರೂಪಾಯಿ ಮತ್ತು 10 ಸಾವಿರ ರೂಪಾಯಿ ಮೌಲ್ಯದ ಉಡುಗೊರೆಗಳನ್ನು ಸರಕಾರದ ವತಿಯಿಂದ ನೀಡಲಾಗುತ್ತದೆ. ಆಯೋಜಕರಿಗೆ 6 ಸಾವಿರ ರೂಪಾಯಿ ನೆರವನ್ನೂ ನೀಡಲಾಗುತ್ತಿದೆ.