Advertisement
ಮ್ಯಾರೇಜ್ ಈಸ್ ದ ಓನ್ಲಿ ವಾರ್, ವೇರ್ ಯು ಸ್ಲಿಪ್ ವಿತ್ ದಿ ಎನಿಮಿ.
ಎಂಬ ಒಂದು ಕೋಟೇಷನನ್ನು ಇತ್ತೀಚೆಗೆ ಎಲ್ಲೋ ಓದಿದೆ. ನನಗೆ ಫಕ್ಕನೆ ನನ್ನಜ್ಜಿ ನೆನಪಾದಳು. ಅಜ್ಜಿ ಎಂದರೆ ತಾಯಿಯ ತಾಯಿ. ಅಜ್ಜಿ ಸಣ್ಣೋರಿದ್ದಾಗ ಬಹಳ ಸುಂದರವಾಗಿದ್ದರಂತೆ. ಸಣ್ಣ ಹುಟ್ಟು, ಕೋಮಲ ದೇಹ ಸೌಷ್ಟವ, ಗೌರವರ್ಣ. ಆ ಕಾಲಕ್ಕೆ ಎಲ….ಎಸ್. ಅಂದರೆ ಎಂಟನೇ ತರಗತಿ ವರೆಗೆ ಓದಿದ್ದರಂತೆ. ಮುಂದೆ ಓದಬೇಕೆಂಬ ಆಸೆಯಿದ್ದರೂ ಅವರ ಅಪ್ಪ ಓದಿಸಲಿಲ್ಲ. ಹೆಣ್ಣುಮಕ್ಕಳಿಗೆ ಅಷ್ಟು ವಿದ್ಯೆ ಯಾಕೆ ಅಂತ. ಆದರೆ ಅಜ್ಜಿ ಬೇರೆ ವಿಷಯಗಳಲ್ಲೂ ಜಾಣೆ. ಒಂದು ರಂಗೋಲಿ ಹಾಕುವುದು, ಅಡಿಗೆ ಮಾಡುವುದು, ಕಸೂತಿ ಬಿಡಿಸುವುದು, ದೇವರನಾಮ ಹೇಳುವುದು- ಹೀಗೆ ಎಲ್ಲದರಲ್ಲೂ ಅಚ್ಚುಕಟ್ಟು ಮತ್ತು ಬಹಳ ನೀಟ….
ಈಗಿನ ಕಾಲದಂತೆ ಯಾರನ್ನಾದರೂ ಪ್ರೀತಿಸುವುದು ಹಿರಿಯರ ಒಪ್ಪಿಗೆಯಿಲ್ಲದಿದ್ದರೂ ಪ್ರೀತಿಸಿದವನೊಂದಿಗೆ ಓಡಿ ಹೋಗಿ ಮದುವೆಯಾಗುವುದು ಇವೆಲ್ಲಾ ಆಗ ಇರಲಿಲ್ಲ. ಆ ಕಲ್ಪನೆಯೇ ಇರಲಿಲ್ಲ. ದೊಡ್ಡವರು ಹುಡುಕಿದ ಸಂಬಂಧವನ್ನು ಇಷ್ಟವೋ ಇಷ್ಟವಿಲ್ಲವೋ ಬಾಯಿ ಮುಚ್ಚಿಕೊಂಡು ತಲೆತಗ್ಗಿಸಿ ತಾಳಿ ಕಟ್ಟಿಸಿಕೊಳ್ಳಬೇಕಿತ್ತು. ಈಗ ಹಾರಾಡ್ತಾಳೆ ನಾಳೆ ಎರಡು ಮಕ್ಕಳಾದರೆ ಸರಿಹೋಗ್ತಾಳೆ ಎಂಬುದೇ ಎಲ್ಲ ಹಿರಿಯರೂ ಯೋಚಿಸುತ್ತಿದ್ದ ಕಾಮನ್ ವಿಚಾರ. ನಿಜ ಎರಡು ಮಕ್ಕಳಾದ ಮೇಲೆ ಇನ್ನೇನು ನಮ್ಮ ಕಾಲ ಆಯಿತು ಇನ್ನೇನಾಗಬೇಕಿದೆ, ಇನ್ನು ಮಕ್ಕಳ ಭವಿಷ್ಯ ತಾನೆ ಮುಖ್ಯ ಎಂದು ಈ ರೀತಿಯ ಹೆಣ್ಣುಗಳು ತಮ್ಮ ಮನಸ್ಸಿನಲ್ಲಿ ಉಕ್ಕುವ ಭಾವನೆಗಳನ್ನು ನಿಯಂತ್ರಿಸಿಕೊಂಡು ಬದುಕುತಿದ್ದರು. ಇಷ್ಟಕ್ಕೂ ಕೂಡು ಕುಟುಂಬದಲ್ಲಿ ಸ್ತ್ರೀಯರಿಗೆ ತಮ್ಮ ಬಗ್ಗೆ, ತಮ್ಮ ಆಸೆ-ಆಶೋತ್ತರಗಳ ಬಗ್ಗೆ, ತಮ್ಮ ಭಾವನೆಗಳ ಬಗ್ಗೆ ಯೋಚಿಸಲು ಪುರುಸೊತ್ತಾದರೂ ಎಲ್ಲಿತ್ತು?
Related Articles
Advertisement
ಸುಮಕೋಮಲೆಯಾದ ನಾಜೂಕಾದ ಹೆಣ್ಣುಮಗಳೊಬ್ಬಳು ಈ ರೀತಿ ತನ್ನ ಮನದ ನಿರಾಸೆ ಭುಗಿಲೆದ್ದಾಗ ಮನಸ್ಸಿನ ಸ್ಥಿಮಿತ ಕಳೆದುಕೊಂಡು ಬಿಟ್ಟಿದ್ದಳು. ಎಷ್ಟೇ ವೈದ್ಯ ಮಾಡಿಸಿದರೂ ಮಂತ್ರ ತಂತ್ರ ಏನೇ ಮಾಡಿಸಿದರೂ ಆ ಮೊದಲಿನ ಅಜ್ಜಿ ಯಾರಿಗೂ ಸಿಗಲಿಲ್ಲ. ಯಾವಾಗಲೂ ತಾತನನ್ನು ಬೈಯುವುದು, ಮಕ್ಕಳನ್ನು ಬೈಯುವುದು, “ಹೋ’ ಎಂದು ದೊಡ್ಡ ದನಿಯಲ್ಲಿ ಅಳುವುದು, ಹೊಳೆಗೆ ಹಾರಲು, ಬಾವಿಗೆ ಹಾರಲು ಹೋಗುವುದು- ಹೀಗೆ ತನ್ನ ಜೀವವನ್ನು ತಾನೇ ಬಹಳ ಕಷ್ಟಕ್ಕೆ ಈಡುಮಾಡಿಕೊಂಡಿದ್ದಳು. ಈ ಮಧ್ಯೆ ಕೆಲವು ದಿನಗಳು ಮನಸ್ಸು ಶಾಂತವಾಗಿದ್ದಾಗ ಗಂಡನೊಡನೆ ಸಂಸಾರ ಮತ್ತೆ ಮಕ್ಕಳು ಹೀಗೆ ನಡೆಯುತ್ತಿತ್ತು.
ಹಾಗಂತ ನಮ್ಮ ತಾತ ಏನೂ ಕೆಟ್ಟವರಲ್ಲ. ಬಡವರಾದರೂ ವಿದ್ಯೆ ಜಾಸ್ತಿ ಇಲ್ಲದಿದ್ದರೂ ವಿನಯವಂತರು ಹಾಗೂ ಸಂಸ್ಕಾರವಂತರು. ಹೆಂಡತಿ ಹೀಗೆ ಆಡುವುದು ಅವರಿಗೆ ನೋವಾದರೂ ಮಕ್ಕಳ ಎದುರು ತೋರಿಸಿಕೊಳ್ಳುತ್ತಿರಲಿಲ್ಲ. ಹಾಸ್ಯ ಸ್ವಭಾವದ ಅವರು ಎಲ್ಲವನ್ನೂ ಹಾಸ್ಯದಲ್ಲೇ ತೇಲಿಸಿಬಿಡುತ್ತಿದ್ದರು. ಕಷ್ಟಪಟ್ಟು ದುಡಿಯುತ್ತಿದ್ದರು. ಮಕ್ಕಳನ್ನು ತಂದೆಯೂ ಆಗಿ ತಾಯಿಯೂ ಆಗಿ ತಾವೇ ನೋಡಿಕೊಂಡಿದ್ದರು. ತಮ್ಮ ಕೈಲಾದ ವಿದ್ಯೆ ಕೊಡಿಸಿ ಎಲ್ಲರಿಗೂ ಅಚ್ಚುಕಟ್ಟಾಗಿ ಮದುವೆ ಮಾಡಿದ್ದರು. ಯಾರಲ್ಲೂ ಸಹಾಯ ಯಾಚಿಸಿದವರಲ್ಲ. ಮಹಾ ಸ್ವಾಭಿಮಾನಿ.
ಅಜ್ಜಿ ಕೊನೇವರೆಗೂ ಸುಧಾರಿಸಲೇ ಇಲ್ಲ. ಅವರಿಗೆ ತಾತನ ತಲೆ ಕಂಡರಾಗುತ್ತಿರಲಿಲ್ಲ. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು. ಅಜ್ಜಿಯ ಅಣ್ಣಂದಿರು, “ಬಾವ ನೀನೆ ಬೇರೆ ಮದುವೆ ಮಾಡಿಕೊಂಡು ಸುಖವಾಗಿರು ಇವಳು ಬದುಕಿರೋವರೆಗೂ ನಾವು ಹೇಗೋ ನೋಡಿಕೊಳುÉತ್ತೇವೆ’ ಎಂದರೂ ತಾತ ಕೇಳಲಿಲ್ಲ. “ಇದೇ ನನ್ನ ಹಣೆಬರಹ ಹೀಗೆಯೇ ನಡೆಯಲಿ’ ಎಂದರು. ಒಂದು ದಿನಕ್ಕೂ ಹೆಂಡತಿಯನ್ನು ಬೈಯಲಿಲ್ಲ. ದೂರಲಿಲ್ಲ ತಮ್ಮ ಹಣೆಬರಹಕ್ಕೆ ಯಾರು ಹೊಣೆ ಎಂದು ಕಾಣದ ದೇವರಿಗೆ ಎಲ್ಲವನ್ನೂ ಒಪ್ಪಿಸಿಬಿಟ್ಟಿದ್ದರು ತಾತ.
ಕೊನೆಯವರೆಗೆ ಹೀಗೇ ನಡೆದುಕೊಂಡು ಬಂತು. ಎಲ್ಲರೂ “ಬಂಗಾರದಂಥ ಗಂಡನ ಜೊತೆ ಚೆಂದಕ್ಕೆ ಸಂಸಾರ ಮಾಡಿಕೊಂಡು ಇರಬಾರದೇ ಯಾಕೆ ಹೀಗೆ ಹೊಟ್ಟೆ ಉರಿಸಿಕೊಳ್ಳುತ್ತಾಳ್ಳೋ’ ಎಂದು ಅಜ್ಜಿಯನ್ನೇ ಬೈಯುತ್ತಿದ್ದರೆ ವಿನಾ ತಾತ ಎಂದರೆ ದೇವರಂತೆ ನೋಡುತ್ತಿದ್ದರು, ಗೌರವಿಸುತ್ತಿದ್ದರು.
ನನಗೆ ಮಾತ್ರ ಈಗೀಗ ಯೋಚಿಸಿದರೆ ಇವರಿಬ್ಬರಲ್ಲಿ ಯಾರದ್ದೂ ತಪ್ಪಿಲ್ಲ. ಇಬ್ಬರಿಗೂ ಒಂದು ವೇಳೆ ಅವರವರ ಇಚ್ಛೆಗೆ ಅನುಕೂಲಕ್ಕೆ ತಕ್ಕಂತೆ ಬೇರೆ ಸಂಗಾತಿಗಳು ಸಿಕ್ಕಿದಿದ್ದರೆ ಇಬ್ಬರೂ ಅವರವರ ಬದುಕಿನಲ್ಲಿ ಸುಖವಾಗಿರುತ್ತಿದ್ದರು. ಆದರೆ ವಿಧಿ ಇಬ್ಬರನ್ನೂ ಗಂಟು ಹಾಕಿ ತಮಾಷೆ ನೋಡಿತ್ತು.
ಅಜ್ಜಿಯ ಮನಸ್ಸು ಸೂಕ್ಷ್ಮ. ಅದು ತನಗೆ ಇಷ್ಟವಿಲ್ಲದ ಗಂಡನನ್ನು ಕೊನೆವರೆಗೂ ಒಪ್ಪಿಕೊಂಡಿರಲಿಲ್ಲ. ಇಷ್ಟವಿಲ್ಲದ ಗಂಡ ಏನೇ ಮಾಡಿದರೂ ಅವರಿಗೆ ಅದು ತಪ್ಪಾಗಿಯೇ ಕಾಣುತ್ತಿತ್ತು. ತಾತನ ಪ್ರೀತಿ-ಕಾಳಜಿ ಅಜ್ಜಿಗೆ ಯಾವತ್ತೂ ಕುಜಕಢವೆನಿಸುತ್ತಿತ್ತು. ಗಂಡ ಎಂದರೆ ಕಾರ್ಕೋಟಕ ಸರ್ಪ ಎಂಬಂತೆ ನೋಡುತ್ತಿದ್ದರು. ಅಂತ ಭಾವನೆಯಲ್ಲಿ ಆ ಗಂಡನ ಜೊತೆ ದಾಂಪತ್ಯದಲ್ಲಿ ಏನು ಸುಖ ಅನುಭವಿಸಿರಬಹುದು ಎಂದು ನೆನೆಸಿಕೊಂಡರೆ ನನ್ನೆದೆ ಹಿಂಡಿದಂತಾಗುತ್ತದೆ.
ಅಜ್ಜಿಯ ಮನಸ್ಥಿತಿಗೆ ಅದು ಪ್ರತಿದಿನವೂ ಅತ್ಯಾಚಾರವೇ ಅಲ್ಲವೇ? ಎಷ್ಟು ರಾತ್ರಿಗಳು ಅಜ್ಜಿ ನೀರವವಾಗಿ ಕಣ್ಣಿರು ಸುರಿಸಿರಬಹುದು? ಸ್ನಾನಕ್ಕೆ ಹೋದರೆ ಗಂಟೆಗಟ್ಟಲೆ ಮಾಡುತ್ತಿದ್ದರಂತೆ. ಸ್ನಾನದ ಮನೆಯಲ್ಲಿ ಗಂಡನನ್ನು ಬೈಯುತ್ತಾ ಅಳುತ್ತಾ ಕಳೆಯುತ್ತಿದ್ದರಂತೆ. ಅದಕ್ಕೆಂದೇ ಮೊದಲು ಸ್ನಾನಕ್ಕೆ ಅವರನ್ನು ಕಳಿಸುತ್ತಲೇ ಇರಲಿಲ್ಲ. ಅವರಿಗೆ ಅಡಿಗೆ ಮಾಡಲೂ ಬಿಡುತ್ತಿರಲಿಲ್ಲ. ಮಕ್ಕಳೇ ಮಾಡುತ್ತಿದ್ದರು. ಇನ್ನು ತಾತನಿಗಾದರೂ ಅಷ್ಟೆ , ತನ್ನನ್ನು ಹೆಂಡತಿ ವಿಧಿಯಿಲ್ಲದೆ ಸಹಿಸಿಕೊಂಡಿದ್ದಾಳೆ ಎಂದರೆ ಯಾವ ಗಂಡಸಿಗೆ ಅದು ಹಿತ ಕೊಡುತ್ತೆ? ಹೀಗಾಗಿ ಇಬ್ಬರೂ ಸುಖವಂಚಿತರು. ಇಬ್ಬರೂ ಮೂಗುಬ್ಬಸ ಪಟ್ಟುಕೊಂಡೇ ಸಂಸಾರ ಮಾಡಿದರು.
ಈಗ ಕಾಲ ಬದಲಾಗಿದೆ…ಈಗಾದರೆ ಸರಿಹೋಗಲಿಲ್ಲ ಎನಿಸಿದ ಕ್ಷಣ ಬೇರೆ ವಾಸಿಸುತ್ತಾರೆ, ವಿಚ್ಛೇದನೆ ತೆಗೆದುಕೊಳ್ಳುತ್ತಾರೆ. ಕಾಂಪನ್ಸೇಷನ್ ಕೇಳುತ್ತಾರೆ. ಆಗ ಹಾಗೇನೂ ಇಲ್ಲದೆ ಹೇಗೆ ಒಂದೇ ಸೂರಿನಡಿ ವಾಸಿಸುತ್ತಿದ್ದರೋ ದೇವರೇ ಬಲ್ಲ. ಬಹುಶಃ ಆರ್ಥಿಕ ಸ್ವಾತಂತ್ರ್ಯದ ಕೊರತೆ, ವಿದ್ಯೆ ಹಾಗೂ ಧೈರ್ಯದ ಕೊರತೆ ಹಾಗೆ ಸಹಿಸಿಕೊಂಡು ಹೋಗುವುದನ್ನು ಕಲಿಸಿರಬಹುದು. ಇಷ್ಟವಿಲ್ಲದ ಸಂಗಾತಿಯೊಡನೆ ಹಾಸಿಗೆ ಹಂಚಿಕೊಳ್ಳುವುದು ಎಷ್ಟು ಹಿಂಸೆಯೋ ಅದು ಶತ್ರುಗಳ ಕೈಗೆ ಸಿಕ್ಕ ಸೈನಿಕನಿಗಿಂತಲೂ ಕಡೆಯಾದ ನರಕ. ಇಷ್ಟವಿಲ್ಲದ ಸಂಗಾತಿ ಶತ್ರುವೇ ಸರಿ. ಅದಕ್ಕೆ ಆ ಕಾಲ ಈ ಕಾಲ ಎಂಬುದಿಲ್ಲ. ಆಗ ಸ್ತ್ರೀಯರಿಗೆ ಸ್ವಾತಂತ್ರ್ಯವಿರುತ್ತಿರಲಿಲ್ಲ. ಸ್ವತಂತ್ರವಾಗಿ ಯೋಚಿಸುತ್ತಲೂ ಇರಲಿಲ್ಲ. ಆ ಅವಕಾಶವೇ ಇಲ್ಲದ ವಂಚಿತರು. ಗಂಡ ತಮಗೆ ಒಳ್ಳೆಯವನಾಗಿದ್ದರೆ ತಾವು ಇಷ್ಟ ಪಡುವಂಥವನಾಗಿದ್ದರೆ ಅದು ಪೂರ್ವ ಜನ್ಮದ ಸುಕೃತ. ಇಲ್ಲವಾದಲ್ಲಿ ಚಕಾರವೆತ್ತದೆ ಸಹಿಸಿಕೊಂಡು ಎಲ್ಲಿಯೂ ತಮ್ಮ ಮನದ ಭಾವನೆಗಳನ್ನು ತೋರಿಸದೆ ಸಂಸಾರ ಮಾಡಿಕೊಂಡು ಹೋಗುವುದಷ್ಟೆ ಅವರಿಗೆ ಗೊತ್ತಿದ್ದದ್ದು. ತವರು ಮನೆಯಲ್ಲೂ ಹಾಗೆ ತರಬೇತಿಯಾಗಿರುತ್ತಿತ್ತು. ಸುಂದರಿಯಾಗಿದ್ದ ಅಜ್ಜಿ ಗಂಡನಿಗೆ ತಮ್ಮ ದೇಹ ಆಕರ್ಷಕವಾಗಿ ಕಾಣಬಾರದು ಎಂದೋ ಏನೋ ದೇಹವನ್ನು ಬಹಳ ದಂಡಿಸುತ್ತಿದ್ದರು. ಹೊತ್ತಿಗೆ ಸರಿಯಾಗಿ ಊಟ ಮಾಡದೆ, ಕಷ್ಟಕರ ಕೆಲಸಗಳನ್ನು ತಾವೊಬ್ಬರೇ ಮಾಡುತ್ತ ಹಿಂಸೆ ಪಡುತ್ತಿದ್ದರಂತೆ. ಬರುಬರುತ್ತ ಕೃಶ ಶರೀರಿಯಾಗಿದ್ದರಂತೆ. ದೇಹದಲ್ಲಿ ಮೂಳೆ ಚರ್ಮ ಬಿಟ್ಟರೆ ಬೇರೆ ಏನೂ ಇರಲಿಲ್ಲವಂತೆ. ಆದರೂ ಕಾಯಿಲೆ ಎಂದು ಒಂದು ದಿನವೂ ನರಳಲಿಲ್ಲ. ಮನಸ್ಸಿಗೆ ಹಿಂಸೆ ಎನಿಸಿದಾಗ ಕೂಗಾಡುತ್ತಿದ್ದರು. ಬಾವಿಯಿಂದ ನೀರು ಸೇದಿ ಸೇದಿ ಹಂಡೆ ತೊಟ್ಟಿಗಳನ್ನು ತುಂಬಿಸಿ ನಂತರ ಚೆಲ್ಲುತ್ತಿದ್ದರು. ಮನೆಯಲ್ಲಿರುವ ಬಟ್ಟೆಗಳನ್ನೆಲ್ಲ ನೆನೆಸಿ ಒಗೆದು ಹಾಕುವುದು ಹೀಗೆಲ್ಲ ಮಾಡುತ್ತಿದ್ದರಂತೆ. ಮೈಮೇಲೆ ಪ್ರಜ್ಞೆಯೇ ಇರುತ್ತಿರಲಿಲ್ಲ. ಎಷ್ಟು ಕೆಲಸ ಮಾಡಿದರೂ ಉಸ್ಸೆನ್ನುತ್ತಿರಲಿಲ್ಲ. ಹಸಿವು ಎನ್ನುತ್ತಿರಲಿಲ್ಲ. ನನಗೆ ಅದೇ ಅಚ್ಚರಿಯಾಗುತ್ತದೆ. ಅವರ ಮನಸ್ಸು ಎಷ್ಟು ತೀವ್ರತರವಾದ ನೋವನ್ನು ಅನುಭವಿಸಿರಬೇಕು, ಆ ನೋವಿನ ಮುಂದೆ ದೈಹಿಕ ಶ್ರಮ ಅವರಿಗೆ ದೊಡ್ಡದು ಎನಿಸಿಯೇ ಇರಲಿಲ್ಲವೇನೋ? ಗಂಡಸಿಗೆ ಏಕತಾನತೆಯ ಬದುಕಿನಿಂದ ಬದಲಾವಣೆ ಸಿಗುತ್ತದೆ. ದುಡಿಯಲು ಹೊರಗೆ ಹೋಗುತ್ತಾನೆ, ಹೊರಗಿನ ಪ್ರಪಂಚದ ಅನುಭವಗಳು ಅವನಿಗೆ ಇರುತ್ತವೆ. ಆದರೆ ಹೆಣ್ಣು ಮನೆಯೇ ತನ್ನ ಪ್ರಪಂಚ ಗಂಡನೇ ತನ್ನ ಜೀವನ ಎಂದುಕೊಂಡವಳು. ಅಂಥವಳಿಗೆ ಗಂಡನ ಸಹವಾಸ ಕಷ್ಟವೆನಿಸಿದರೆ ಅಥವಾ ಇಷ್ಟವಿಲ್ಲದ ಗಂಡ ಸಿಕ್ಕಾಗ ಮನಸ್ಸು ಮುರುಟಿಹೋಗುತ್ತದೆ. ಮನಸ್ಸು ಮೈ ಅರಳಿ ತನ್ನ ಸಂಗಾತಿಗೆ ಸಮರ್ಪಣೆಯಾಗಬೇಕಾದವಳು, ಅವನ ಹೆಜ್ಜೆಯೊಂದಿಗೆ ಹಿಗ್ಗಿನಿಂದ ಹೆಜ್ಜೆಯಿಟ್ಟು ಅನುಸರಿಸಬೇಕಾದವಳು ಅದೊಂದು ಹಿಂಸೆ-ನರಕ ಎಂಬಂತೆ ಸಹಿಸಿಕೊಳ್ಳುವುದು ಎಷ್ಟು ಅಮಾನವೀಯ. ಇಂಥ ಸಂದರ್ಭದಲ್ಲಿ ಮೇಲಿನ ಕೊಟೇಷನ್ ನಿಜವೆನಿಸುತ್ತದೆ ಅಲ್ಲವೇ? – ವೀಣಾ