Advertisement

ಸಾಧನೆಗೆ ಅಂಕಗಳೇ ಮಾನದಂಡವಾಗದಿರಲಿ

02:43 AM Jun 01, 2020 | Team Udayavani |

ಇಂದಿನ ವೇಗದ ಬದುಕಿನಲ್ಲಿ ಪರೀಕ್ಷೆಯಲ್ಲಿ ಪಡೆದ ಅಂಕಗಳೆ ನಮ್ಮ ಮಾನದಂಡಗಳಾಗುತ್ತಿವೆ.

Advertisement

ಸಮಾಜ ನಿಂತಿರುವುದೇ ಅಂಕದ ಮೇಲೆ ಎಂದು ಎಲ್ಲರೂ ಭಾವಿಸಿದಂತಿದೆ.

ಮನೆಯಲ್ಲಿ ಹೆತ್ತವರ, ಶಾಲೆಯಲ್ಲಿ ಶಿಕ್ಷಕರ ಒತ್ತಡದಿಂದ ಪರೀಕ್ಷೆಯ ಅಂಕಕ್ಕಾಗಿ ಸಣ್ಣ ಸಣ್ಣ ಮಕ್ಕಳೂ ಪೈಪೋಟಿಗೆ ಬಿದ್ದಿದ್ದಾರೆ.

ಅಂಕಗಳೇ ಮುಂದಿನ ಭವಿಷ್ಯವನ್ನು ನಿರ್ಧರಿಸುತ್ತವೆ ಎಂಬ ಯೋಚನೆ ಹಲವರಲ್ಲಿ ಇದೆ. ಬದುಕಿನ ಪಾಠವನ್ನು ಅರಿಯದವನಿಗೆ ಹೆಚ್ಚು ಅಂಕ ಬಂದರೆ ಏನು ಪ್ರಯೋಜನ? ಹೀಗೆಂದ ಮಾತ್ರಕ್ಕೆ ಕಲಿಕೆ, ಅಂಕ ಬೇಡವೆಂದಲ್ಲ. ಪರೀಕ್ಷೆಯಲ್ಲಿ ಪಡೆದ ಅಂಕಗಳಷ್ಟೇ ವ್ಯಕ್ತಿತ್ವವನ್ನು ಅಳೆಯುವಂತಹ ಮಾನದಂಡ ಅಲ್ಲ.

ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಲು ಸಾಧ್ಯವಿಲ್ಲ. ಎಲ್ಲರ ಜ್ಞಾನ, ತಿಳಿವಳಿಕೆ, ಆಸಕ್ತಿಯ ಕ್ಷೇತ್ರ ಒಂದೇ ಆಗಿರುವುದಿಲ್ಲ. ವಿದ್ಯಾಭ್ಯಾಸದ‌ಲ್ಲಿ ಅನುತ್ತೀರ್ಣರಾದರೆ ತಮ್ಮಲ್ಲಿರುವ ಪ್ರತಿಭೆಯನ್ನು ಬಳಸಿ ಸಾಧನೆ ಮಾಡಿ ಗೆದ್ದು ಬೀಗಬಹುದು. ಬದಲಾಗಿ ಸೋಲೊಪ್ಪಿಕೊಳ್ಳುವುದು ಸರಿಯಲ್ಲ. ಶಿಕ್ಷಣದಿಂದ ತೊಡಗಿ ಪ್ರತಿ ಹಂತದಲ್ಲಿಯೂ ಸ್ಪರ್ಧೆ ಇದ್ದೇ ಇದೆ. ಅದು ಮುಖ್ಯವೂ ಹೌದು. ಆದರೆ ಅಂಕ ಗಳಿಸುವುದೇ ಜೀವನದ ಸಾಧನೆಯಲ್ಲ.

Advertisement

ಅದೆಷ್ಟೋ ಮಂದಿ ರ್‍ಯಾಂಕ್‌ ಪಡೆದು ಜೀವನದ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಉದಾಹರಣೆಗಳು ನಮ್ಮಲ್ಲಿವೆ. ಅಂತೆಯೇ ಯಾವುದೋ ಕಾರಣದಿಂದ ಅರ್ಧಕ್ಕೆ ಶಿಕ್ಷಣವನ್ನು ಮೊಟಕುಗೊಳಿಸಿ ಸಾಧನೆ ಮಾಡಿದವರು ನಮ್ಮ ಕಣ್ಣ ಮುಂದಿದ್ದಾರೆ. ಇವರ ಸಾಧನೆ ಹಲವು ಮಂದಿಯ ಬದುಕಿಗೆ ಮಾದರಿಯಾದ ನಿದರ್ಶನಗಳಿವೆ. ಇವೆಲ್ಲಾ ನಾವು ಆಯ್ಕೆ ಮಾಡುವ ದಾರಿ ಹೇಗಿದೆ ಎಂಬುದರ ಮೇಲೆ ನಿಂತಿದೆ.

ಮಾದರಿಯಾಗಿ ಬಾಳುವ ಅವಕಾಶ ತಾನಾಗಿಯೇ ಒದಗುತ್ತದೆ. ಆದರೆ ಸಿಕ್ಕ ಅವಕಾಶಗಳನ್ನು ಕೈ ಚೆಲ್ಲಬಾರದಷ್ಟೆ. ಕಷ್ಟ ಇಂದು ಬಂದು ನಾಳೆ ಮರೆಯಾಗುತ್ತದೆ. ಅನುಭವ ಪ್ರತಿಕ್ಷಣ ಸೂಕ್ತವಾದ ಪಾಠ ಕಲಿಸುತ್ತದೆ. ಉದ್ದೇಶ ಅಚಲವಾಗಿದ್ದು, ಸಾಧನೆಗೆ ಪಣ ತೊಟ್ಟರೆ, ಆ ದಾರಿಯಲ್ಲಿ ನೂರು ಬಾರಿ ಸೋತರೂ ಆ ಸೋಲು ಕೊಡುವ ಅನುಭವ ನಾಳಿನ ದೊಡ್ಡ ಗೆಲುವಿಗೆ ಕಾರಣವಾಗಿರುತ್ತವೆ. ಬದುಕು ನಾವು ಬಯಸಿದಂತೆ ಬಂದರೆ ಸುಖದ ಬಾಳು ಬೇಕು. ಇಲ್ಲವಾದರೆ ಕಷ್ಟವನ್ನು ಎದುರಿಸುವ ಶಕ್ತಿಯನ್ನು ತೊರೆದು ದುಡುಕಿನ ನಿರ್ಧಾರ ತೆಗೆದುಕೊಳ್ಳುತ್ತೇವೆ.
ಸೋಲು ಗೆಲುವಿನ ಅಂತರ ತುಂಬಾ ಸರಳ.

ಇದಕ್ಕೆ ಅಂಜಿ ಪಲಾಯನ ಮಾಡುವ ಹೇಡಿಗಳಾಗಬೇಕೇ? ಗುರಿಯೊಂದಿದ್ದರೆ ಅಸಾಧ್ಯವಾದುದು ಯಾವುದೂ ಇಲ್ಲ. ಅಸಾಧ್ಯವೆ ನಿಸುವುದನ್ನೂ ಗರಿಷ್ಠ ಪ್ರಮಾಣದಲ್ಲಿ ಪ್ರಯತ್ನಿಸಬೇಕು. ಫ‌ಲದ ನಿರೀಕ್ಷೆ ಮಾಡದೆ ಯಾವುದೇ ಕೆಲಸದಲ್ಲೂ ಶ್ರೇಷ್ಠ, ಕನಿಷ್ಠವೆಂದು ಭಾವಿಸಬಾರದು. ಪ್ರತಿ ಕೆಲಸದಲ್ಲೂ ಘನತೆ ಕಾಣಬೇಕು.

ಆಗ ಮಾತ್ರ ಒಬ್ಬ ಕಾರ್ಮಿಕನೂ ಕಟ್ಟಡದ ಮಾಲಕನಾಗ ಬಹುದು. ಸೋತು ಗೆದ್ದವರ ಜೀವನ ಚರಿತ್ರೆ ನಮಗೆ ಸ್ಪೂರ್ತಿಯಾಗಲಿ. ದೌರ್ಬಲ್ಯವನ್ನೇ ಶಕ್ತಿಯನ್ನಾಗಿಸಿ. ಸೋಲೇ ಗೆಲುವಿಗೆ ಸೋಪಾನ ಎಂದು ಅರಿತು ಕೊಳ್ಳುವ. ಕೊನೆ ಪಕ್ಷ ಕಷ್ಟ ಸುಖಗಳೆಂಬ ಬಾಳ ದೋಣಿಯಲ್ಲಿ ಸಾಗು ವಾಗ ಗುರಿ ಮುಟ್ಟದಿದ್ದರೂ ಪ್ರಯತ್ನವೆಂಬ ಪಯಣವನ್ನು ನಿಲ್ಲಿಸದೆ ಮುಂದುವರಿಸೋಣ.


– ರಾಮಕಿಶನ್‌ ಕೆ.ವಿ., ವಿವೇಕಾನಂದ ಪದವಿ ಕಾಲೇಜು, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next