ಉಡುಪಿ: ಪರ್ಕಳದ ಮಾರ್ಕೆಟ್ ರೋಡ್‌ನಲ್ಲಿರುವ ಮೀನು ಮಾರುಕಟ್ಟೆ ಕಟ್ಟಡದಲ್ಲಿ ದಟ್ಟವಾಗಿ ಅರಳಿ ಮರದ ಗಿಡಗಳು ಬೆಳೆದುಕೊಂಡಿದ್ದು, ಕಟ್ಟಡಕ್ಕೆ ಹಾನಿಯಾಗಿ ಸಂತೆ ಮಾರುಕಟ್ಟೆ ಕುಸಿಯುವ ಭೀತಿಯಲ್ಲಿದೆ. ಪರ್ಕಳದ ಹೃದಯಭಾಗದಲ್ಲಿ ಒಣ ಮೀನು ಮಾರುಕಟ್ಟೆ , ತರಕಾರಿ ಮಾರಾಟ ಮಾಡುವ ವಾರದ ಸಂತೆಕಟ್ಟೆ ಇದಾಗಿದೆ. ಪ್ರತಿ ಶುಕ್ರವಾರ ಇಲ್ಲಿ ಸಂತೆ ನಡೆಯುತ್ತದೆ. ಕಟ್ಟಡದ ಎರಡು ಸ್ತಂಭಗಳಲ್ಲಿ ಅಶ್ವಥ ಮರಗಳು ಆಳೆತ್ತರಕ್ಕೆ ಬೆಳೆದು ನಿಂತಿದೆ. ಮಾರುಕಟ್ಟೆ ಕಟ್ಟಡ ಸಂಪೂರ್ಣ ಬಿರುಕು ಬಿಟ್ಟಿದ್ದು, ಮಳೆ ಬರುವಾಗ ಮಳೆ ನೀರು ಒಳ ಹೊಕ್ಕು ಸಮಸ್ಯೆ ಸೃಷ್ಟಿಸುತ್ತಿದೆ. ಮಾರಾಟಗಾರರಿಗೆ ಹಾಗೂ ಸಂತೆಗೆ ಬರುವವರಿಗೆ ಅಭದ್ರತೆ ಕಾಡುತ್ತಿದೆ.
ಕಟ್ಟಡ ಉರುಳುವ ಭೀತಿ
ಈಗಾಗಲೇ ಮಳೆಗಾಲ ಆರಂಭ ವಾಗಿದ್ದು , ಕಟ್ಟಡದ ಅವಶೇಷಗಳು ಒಂದೊಂದಾಗಿ ನೆಲಕ್ಕೆ ಉರುಳಲು ಆರಂಭಿಸಿವೆ. ಕಟ್ಟಡದ ಹೆಂಚು, ರೀಪು, ಮಳೆ, ಗಾಳಿಗೆ
ಒಡೆದು ಹೋಗಿದ್ದು ಒಳಗೆ ನಿಂತು ವ್ಯಾಪಾರ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಮಾರುಕಟ್ಟೆ ವ್ಯಾಪಾರಿಗಳು ತಿಳಿಸಿದ್ದಾರೆ. ಕಟ್ಟಡ ಬಿದ್ದು ಅಪಾಯ ಸಂಭವಿಸುವ ಮೊದಲು ಉಡುಪಿ ನಗರಸಭೆ ಈ ಶಿಥಿಲ ಸಂತೆಕಟ್ಟೆಗೆ ಪೂರ್ಣ ಪ್ರಮಾಣದ ಕಾಯಕಲ್ಪ ಒದಗಿಸುವ ಅಗತ್ಯವಿದೆ.