ಮುಂಬಯಿ : ಅತ್ತ ರಿಸರ್ವ್ ಬ್ಯಾಂಕಿನ ಕೇಂದ್ರ ಮಂಡಳಿಯ ಸಭೆ ನಡೆಯುತ್ತಿದ್ದಂತೆಯೇ ಇತ್ತ ಹೂಡಿಕೆದಾರರು ಮತ್ತು ವಹಿವಾಟುದಾರರು ಎಚ್ಚರಿಕೆಯ ನಡೆ ತೋರಿದ ಫಲವಾಗಿ ಏಳು ಬೀಳುಗಳನ್ನು ಕಾಣುತ್ತಲೇ ಸಾಗಿದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ದಿನದ ವಹಿವಾಟನ್ನು 33.29 ಅಂಕಗಳ ಅಲ್ಪ ಏರಿಕೆಗೆ ತೃಪ್ತಿಪಟ್ಟು 35,962.93 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 13.90 ಅಂಕಗಳ ಮುನ್ನಡೆಯನ್ನು ದಾಖಲಿಸಿ ದಿನದ ವಹಿವಾಟನ್ನು 10,805.45 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. ನಿಫ್ಟಿ ಮತ್ತು ಸೆನ್ಸೆಕ್ಸ್ ಗೆ ಇಂದಿನದು ನಿರಂತರ ನಾಲ್ಕನೇ ದಿನದ ಗಳಿಕೆಯಾಗಿದೆ.
ಎರಡು ದಿನಗಳ ಹಿಂದಷ್ಟೇ ಆರ್‌ಬಿಐ ನ 25ನೇ ಗವರ್ನರ್ ಆಗಿ ಅಧಿಕಾರ ಸ್ವೀಕರಿಸಿದ್ದ ಶಕ್ತಿಕಾಂತ ದಾಸ್ ಅವರಿಗೆ ಇಂದಿನ ಆರ್‌ಬಿಐ ಕೇಂದ್ರ ಮಂಡಳಿ ಸಭೆಯು ಮೊತ್ತ ಮೊದಲನೇದ್ದಾಗಿದೆ.
ಇಂದಿನ ವಹಿವಾಟಿನಲ್ಲಿ ಟಾಪ್ ಗೇನರ್‌ಗಳ ಪೈಕಿ ಭಾರ್ತಿ ಏರ್‌ಟೆಲ್, ಎಸ್ ಬ್ಯಾಂಕ್, ಒಎನ್‌ಜಿಸಿ, ಕೋಲ್ ಇಂಡಿಯಾ, ಎನ್‌ಟಿಪಿಸಿ, ಇನ್‌ಫೋಸಿಸ್, ಏಶ್ಯನ್ ಪೇಂಟ್ಸ್, ಪವರ್ ಗ್ರಿಡ್, ಐಸಿಐಸಿ ಬ್ಯಾಂಕ್ ಶೇರುಗಳು ಶೇ.5.32ರ ಉತ್ತಮ ಏರಿಕೆಯನ್ನು ಕಂಡವು.
ಮುಂಬಯಿ ಶೇರು ಪೇಟೆಯಲ್ಲಿ ಇಂದು ಒಟ್ಟು 2,704 ಕಂಪೆನಿಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,274 ಕಂಪೆನಿಗಳು ಮುನ್ನಡೆ ಸಾಧಿಸಿದವು; 1,288 ಕಂಪೆನಿಗಳು ಹಿನ್ನಡೆಗೆ ಗುರಿಯಾದವು; 142 ಕಂಪೆನಿಗಳ ಶೇರು ಧಾರಣೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬರಲಿಲ್ಲ.