ಮುಂಬಯಿ : ಡಾಲರ್ ಎದುರು ರೂಪಾಯಿ ಇಂದು ಇನ್ನೊಂದು ಹೊಸ ಸಾರ್ವಕಾಲಿಕ ತಳಮಟ್ಟವನ್ನು ಕಂಡ ಕಾರಣ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ ಮತ್ತೆ 500ಕ್ಕೂ ಅಧಿಕ ಅಂಕಗಳ ನಷ್ಟಕ್ಕೆ ಗುರಿಯಾಯಿತು.
ಡಾಲರ್ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 44 ಪೈಸೆಯ ನಷ್ಟಕ್ಕೆ ಗುರಿಯಾಗಿ 73.77 ರೂ. ಗಳ ಹೊಸ ಸಾರ್ವಕಾಲಿಕ ತಳಮಟ್ಟವನ್ನು ತಲುಪಿತು. ಇದೇ ವೇಳೆ ಬ್ರೆಂಟ್ ಕಚ್ಚಾ ತೈಲ ಇಂದು ಬ್ಯಾರಲ್ ಗೆ 86 ಡಾಲರ್‌ಗಳ ಗಡಿಯನ್ನು ದಾಟಿ ಮುನ್ನುಗ್ಗಿತು.
ಇಂದು ಬೆಳಗ್ಗೆ 11.06ರ ವೇಳೆಗೆ ಸೆನ್ಸೆಕ್ಸ್ ಕುಸಿತ ಇನ್ನಷ್ಟು ಮುಂದುವರಿದು 618.14 ಅಂಕಗಳ ನಷ್ಟದೊಂದಿಗೆ 35,357.49 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 187.30 ಅಂಕಗಳ ನಷ್ಟಕ್ಕೆ ಗುರಿಯಾಗಿ 10,671.00 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ರಿಲಯನ್ಸ್, ಹೀರೋ ಮೋಟೋ ಕಾರ್ಪ್, ಮಾರುತಿ ಸುಜುಕಿ, ಭಾರ್ತಿ ಏರ್‌ಟೆಲ್, ಎಚ್ ಡಿ ಎಫ್ ಸಿ, ಇನ್‌ಫೋಸಿಸ್, ಕೋಲ್ ಇಂಡಿಯಾ, ಎಸ್‌ಬಿಐ, ಎಚ್ ಡಿ ಎಫ್ ಸಿ ಬ್ಯಾಂಕ್, ಮಹೀಂದ್ರ, ಇಂಡಸ್ ಇಂಡ್ ಬ್ಯಾಂಕ್, ಅದಾನಿ, ಎಕ್ಸಿಸ್ ಬ್ಯಾಂಕ್, ಎನ್‌ಟಿಪಿಸಿ, ಪವರ್ ಗ್ರಿಡ್ ಶೇರುಗಳು ಶೇ.4.75ರ ನಷ್ಟಕ್ಕೆ ಗುರಿಯಾದವು.
ನಿನ್ನೆ ಬುಧವಾರ ಸೆನ್ಸೆಕ್ಸ್ 550 ಅಂಕ ಹಾಗೂ ನಿಫ್ಟಿ 164.60 ಅಂಕಗಳ ನಷ್ಟಕ್ಕೆ ಗುರಿಯಾಗಿದ್ದವು.
ಇಂದು ಬೆಳಗ್ಗಿನ ವಹಿವಾಟಿನಲ್ಲಿ, ಏಶ್ಯನ್ ಶೇರು ಪೇಟೆಗಳ ಪೈಕಿ ಹಾಂಕಾಂಗ್ ನ ಹ್ಯಾಂಗ್ ಸೆಂಗ್, ಜಪಾನ್, ಸಿಂಗಾಪುರ ಮತ್ತು ತೈವಾನ್ ಶೇರು ಮಾರುಕಟ್ಟೆಗಳು ಶೇ.1ರ ಕುಸಿತವನ್ನು ಕಂಡಿವೆ.