ಬೆಂಗಳೂರು: ಗಗನಚುಂಬಿ ಕಟ್ಟಡದ ಇಪ್ಪತ್ತೆರಡನೇ ಮಹಡಿ ಫ್ಲ್ಯಾಟ್ ಆವರಣವೇ ಸೆಲೆಬ್ರಿಟಿಗಳಿಗೆ ಪಬ್… ರಹಸ್ಯವಾಗಿ ನಡೆಯುತ್ತಿದ್ದ ಸೆಲೆಬ್ರೆಟಿಗಳ ಪಾರ್ಟಿಗಳು… ಪಾಟ್‌ನಲ್ಲಿಯೇ “ಗಾಂಜಾ’ ಬೆಳೆಸಿದ್ದ ಭೂಪ!.
ಡ್ರಗ್ಸ್ ದಂಧೆ ಪ್ರಕರಣದಲ್ಲಿ ಸಿಸಿಬಿ ಖೆಡ್ಡಾಕ್ಕೆ ಬಿದ್ದಿರುವ ಆಪ್ತ ಶ್ರೀ ಅಲಿಯಾಸ್ ಶ್ರೀನಿವಾಸ ಸುಬ್ರಹ್ಮಣ್ಯಂ ಫ್ಲ್ಯಾಟ್‌ನ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ ಬಂದ ಚಿತ್ರಣವಿದು. ಕೊಡಿಗೇಹಳ್ಳಿ ಸಮೀಪದ ಸಂಜೀವಿನಿ ನಗರದ ಬಿಯರಿ ಲೇಕ್‌ಸೈಡ್ ಹ್ಯಾಬಿಟೇಟ್ ಅಪಾರ್ಟ್‌ಮೆಂಟ್‌ನ 22ನೇ ಮಹಡಿಯ ಫ್ಲ್ಯಾಟ್‌ನಲ್ಲಿ ಸುಬ್ರಹ್ಮಣ್ಯಂ ಕುಟುಂಬದ ಜತೆನೆಲೆಸಿದ್ದಾನೆ. ಸೆಲೆಬ್ರೆಟಿಗಳಿಗೆ ಪಾರ್ಟಿ ನಡೆಸಲು ಫ್ಲ್ಯಾಟ್‌ನ ಆವರಣವನ್ನೇ ಪಾರ್ಟಿಗಳು ನಡೆಸುವ ಪಬ್ ಮಾದರಿಯನ್ನಾಗಿ ಪರಿವರ್ತಿಸಿದ್ದ. ಅಲ್ಲಿ ಕಾಟೇಜ್ ಸ್ಟೇಜ್, ಲೈಟನಿಂಗ್ ವ್ಯವಸ್ಥೆ ಪಾರ್ಟಿ ನಡೆಸಲು ಬೇಕಾದಎಲ್ಲಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಹೀಗಾಗಿ, ಆತ ಪಾರ್ಟಿಗಳನ್ನು ನಡೆಸಲೇ ಈ ರೂಪಾಂತರ ಮಾಡಿರುವ ಸಾಧ್ಯತೆಯಿದೆ.
ಕೆಲವು ವಿಐಪಿ ಸೆಲೆಬ್ರೆಟಿಗಳು, ಆತನ ಪರಮಾಪ್ತ ಗಣ್ಯರ ಮಕ್ಕಳು ಆತನ ಫ್ಲ್ಯಾಟ್‌ಗೆ ಭೇಟಿ ನೀಡುತ್ತಿದ್ದರು.ಅವರಿಗೆ ಪಾರ್ಟಿಯಲ್ಲಿ ಮಾದಕ ವಸ್ತು ಸರಬರಾಜು ಮಾಡಿರುವ ಶಂಕೆಯಿದೆ. ಒಬ್ಬ ನಟಿ ಆತನ ಫ್ಲ್ಯಾಟ್‌ಗೆ ಬಂದು ಹೋಗಿರುವುದು ಖಚಿತಪಟ್ಟಿದೆ. ಆತನ ಫ್ಲ್ಯಾಟ್‌ಗೆ ಭೇಟಿ ನೀಡಿದವರು ಹಾಗೂ ಆತನ ಜತೆ ನಿರಂತರ ಸಂಪರ್ಕದಲ್ಲಿದ್ದವರ ಮಾಹಿತಿ ಕಲೆಹಾಕಲಾಗುತ್ತಿದೆ. ಆರೋಪಿ ವೈಭವ್ ಜೈನ್ ಜತೆ ವ್ಯವಹಾರ ಪಾಲುದಾರಿಕೆಯನ್ನು ಸುಬ್ರಹ್ಮಣ್ಯಂಹೊಂದಿದ್ದಾನೆ.ಜತೆಯಾಗಿ ಇಬ್ಬರೂ ಪಾರ್ಟಿಗಳನ್ನು ಆಯೋಜಿಸುತ್ತಿದ್ದರು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಪಾಟ್‌ನಲ್ಲಿಯೇ ಬೆಳೆ : ಆರೋಪಿ ಸುಬ್ರಹ್ಮಣ್ಯಂ ಫ್ಲ್ಯಾಟ್‌ನ ಪಾಟ್‌ನಲ್ಲಿ ಬೆಳೆಸಿದ್ದ ಗಾಂಜಾ ಪತ್ತೆಯಾಗಿದೆ. ಒಂದೇ ಪಾಟ್‌ನಲ್ಲಿ ಎರಡು ಗಾಂಜಾ ಗಿಡಗಳನ್ನು ಬೆಳೆಸಿದ್ದು ಪಾಟ್ ಸಮೇತ ಜಪ್ತಿ ಮಾಡಲಾಗಿದೆ. ತಾನು ಸೇವನೆ ಮಾಡಲು ಜತೆಗೆ ಪಾರ್ಟಿಗಳಲ್ಲಿ ಪಾಲ್ಗೊಳ್ಳುವವರಿಗೆ ನೀಡಲು ಬೆಳೆಸುತ್ತಿದ್ದ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಈ ಹಿಂದೆಯೂ ಇದೇ ಮಾದರಿಯಲ್ಲಿ ಬೆಳೆದಿರುವ ಸಾಧ್ಯತೆಯಿದೆ.
ಸುಬ್ರಹ್ಮಣ್ಯಂ ಹಿನ್ನೆಲೆ ಏನು? : ಮೈಸೂರು ಮೂಲದ ಸುಬ್ರಹ್ಮಣ್ಯಂ ವೀಕೆಂಡ್‌ಗಳಲ್ಲಿ ಹೊರ ವಲಯದ ಮನೆಗಳಲ್ಲಿ ವಾಸಿಸಲು ಇಚ್ಛಿಸುವವರಿಗೆ ಜೇಡ್ ಹಾಸ್ಪಿಟಾಲಿಟಿ ಹೆಸರಿನ ಉದ್ಯಮವನ್ನು 20016ರಿಂದ ಸುಬ್ರಹ್ಮಣ್ಯಂ ನಡೆಸುತ್ತಾನೆ. ಇದಕ್ಕಾಗಿ ನಗರದ ಹೊರವಲಯ ಫಾರ್ಮ್ ಹೌಸ್, ವಿಲ್ಲಾ ಲೀಸ್‌ಗೆ ಪಡೆದು ಬಾಡಿಗೆಗೆ ನೀಡುತ್ತಿದ್ದ ಎಂದು ಗೊತ್ತಾಗಿದೆ. ಈ ವೆಂಚರ್‌ಗಾಗಿ ಆತ2011ರಲ್ಲಿ ಭಾರತ್ ವಿಕಾಸ್ ರತ್ನ ಅವಾರ್ಡ್ ಇನ್ ಹಾಸ್ಪಿಟಾಲಿಟಿ ಪ್ರಶಸ್ತಿ ಪಡೆದುಕೊಂಡಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.