Advertisement

ಮೂರನೇ ಬಾರಿಗೆ “ಗಾಂಧಿ ಗ್ರಾಮ ಪುರಸ್ಕಾರ’ಕ್ಕೆ ಆಯ್ಕೆ

05:40 PM Sep 27, 2021 | Team Udayavani |

ಕುಂದಾಪುರ: ಗ್ರಾಮ ಪಂಚಾಯತ್‌ಗಳ ಸಮಗ್ರ ಪ್ರಗತಿಯನ್ನು ಪರಿಗಣಿಸಿ ರಾಜ್ಯ ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯು ಕೊಡಮಾಡುವ ಪ್ರತಿಷ್ಠಿತ “ಗಾಂಧಿ ಗ್ರಾಮ ಪುರಸ್ಕಾರ’ಕ್ಕೆ ಈ ಸಾಲಿನಲ್ಲಿ ಕುಂದಾಪುರ ತಾಲೂಕಿನ ಹೊಸಾಡು ಗ್ರಾ.ಪಂ. ಹಾಗೂ ಬೈಂದೂರು ತಾಲೂಕಿನ ಮರವಂತೆ ಗ್ರಾ.ಪಂ.ಗಳು ಆಯ್ಕೆಯಾಗಿವೆ. ಈ ಎರಡೂ ಪಂಚಾಯತ್‌ಗಳು ಮೂರನೇ ಬಾರಿಗೆ ಈ ಪ್ರಶಸ್ತಿಗೆ ಆಯ್ಕೆಯಾಗುತ್ತಿರುವುದು ವಿಶೇಷ.

Advertisement

ಕುಂದಾಪುರದ ಹೊಸಾಡು ಪಂಚಾಯತ್‌ ಈ ಹಿಂದೆ 2016-17, 2017- 18ರಲ್ಲಿ ಸತತ ಎರಡು ವರ್ಷ ಹಾಗೂ ಈ ಬಾರಿ ಆಯ್ಕೆಯಾದರೆ, ಬೈಂದೂರು ತಾಲೂಕಿನ ಮರವಂತೆ ಗ್ರಾ.ಪಂ. 2013 -14ರಲ್ಲಿ, 2019-20 ಹಾಗೂ 2020-21ರಲ್ಲಿ ಸತತ 2ನೇ ಬಾರಿಗೆ ಆಯ್ಕೆ ಮಾಡಲಾಗಿದೆ.

ಆಯ್ಕೆ ಪ್ರಕ್ರಿಯೆ
ಪ್ರಶಸ್ತಿಗೆ 2020-21ನೇ ಸಾಲಿನ ಪ್ರಗತಿ, ಸಾಂಸ್ಥಿಕ ಹಾಗೂ ಪ್ರಗತಿ ಸೂಚ್ಯಂಕಗಳನ್ನು ಹೊಂದಿದ 200 ಅಂಕಗಳ ಪ್ರಶ್ನಾವಳಿಗಳನ್ನು ಪಂಚತಂತ್ರ ತಂತ್ರಾಂಶದಿಂದ ಉತ್ತರಿಸುವ ಮೂಲಕ ಗ್ರಾ.ಪಂ.ಗಳಿಂದ ಅರ್ಜಿ ಆಹ್ವಾನಿಸಲಾಗುತ್ತದೆ. ಜೀವನ ಗುಣಮಟ್ಟ, ಸಂಪನ್ಮೂಲ ಕ್ರೋಡೀಕರಣ, ಮೂಲ ಸೌಕರ್ಯ ಅಭಿವೃದ್ಧಿ, ತ್ಯಾಜ್ಯ ನಿರ್ವಹಣೆ, ಉತ್ತಮ ಆಡಳಿತ, ಸೇವಾ ಪೂರೈಕೆ ಹಾಗೂ ನಾವಿನ್ಯತ ಯೋಜನೆಗಳನ್ನು ಪರಿಗಣಿಸಿ ಅಂಕ ನೀಡಲಾಗುತ್ತದೆ. ಮೊದಲಿಗೆ ಪ್ರತಿ ತಾಲೂಕಿನ 3 ಗ್ರಾ.ಪಂ. ಆಯ್ಕೆ ಮಾಡಿ, ಬಳಿಕ ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿ, ತಾಲೂಕಿಗೆ ಒಂದು ಗ್ರಾ.ಪಂ. ಅನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಿ ರಾಜ್ಯ ಸರಕಾರಕ್ಕೆ ಶಿಫಾರಸು ಮಾಡಲಾಗುತ್ತದೆ. ಇದರಂತೆ ಕುಂದಾಪುರದ 44 ಗ್ರಾ.ಪಂ.ಗಳ ಪೈಕಿ ಹೊಸಾಡು ಹಾಗೂ ಬೈಂದೂರಿನ 16 ಗ್ರಾ.ಪಂ.ಗಳ ಪೈಕಿ ಮರವಂತೆಯನ್ನು ಆಯ್ಕೆ ಮಾಡಲಾಗಿದೆ.


ಎಲ್ಲರ ಸಹಕಾರ
6 ತಿಂಗಳ ಕಾಲ ಚುನಾಯಿತ ಪ್ರತಿನಿಧಿಗಳು ಹಾಗೂ 6 ತಿಂಗಳು ಆಡಳಿತಾಧಿಕಾರಿಗಳ ನೇತೃತ್ವದಲ್ಲಿ ಹೊಸಾಡು ಗ್ರಾ.ಪಂ. ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದು, ಇದು ಎಲ್ಲರ ಸಹಕಾರ, ಪ್ರಯತ್ನದಿಂದ ಸಾಧ್ಯವಾಗಿದೆ. ಅರ್ಹವಾಗಿಯೇ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇದಕ್ಕೆ ಜನಪ್ರತಿನಿಧಿಗಳು, ಗ್ರಾ.ಪಂ. ಸಿಬಂದಿ, ಆರೋಗ್ಯ ಇಲಾಖೆ ಸಿಬಂದಿ, ಮುಖ್ಯವಾಗಿ ಗ್ರಾಮಸ್ಥರ ಸಹಕಾರ ಪ್ರಮುಖವಾದುದು.
– ಪಾರ್ವತಿ ಕೋಟತಟ್ಟು, ಹೊಸಾಡು ಗ್ರಾ.ಪಂ. ಪಿಡಿಒ

ಹೊಸಾಡು ಗ್ರಾ.ಪಂ. ಸಾಧನೆ
– ಕೋವಿಡ್‌ ಪರಿಸ್ಥಿತಿಯಲ್ಲಿ ಉತ್ತಮ ನಿರ್ವಹಣೆ. ಲಸಿಕೆಯಲ್ಲಿಯೂ ಉತ್ತಮ ಪ್ರಗತಿ. 2,770 ಮಂದಿ ಗ್ರಾಮಸ್ಥರ ಪೈಕಿ ಕೇವಲ 130 ಮಂದಿಗಷ್ಟೇ ಲಸಿಕೆ ಬಾಕಿ.
– 2020-21ನೇ ಸಾಲಿನಲ್ಲಿ ಶೇ. 100 ತೆರಿಗೆ ಸಂಗ್ರಹ
– ಅಗತ್ಯವಿರುವ ಎಲ್ಲ ಮನೆಗಳಿಗೂ ಕುಡಿಯುವ ನೀರಿನ ಸಂಪರ್ಕ.
– ಕಸ ಸಂಗ್ರಹ ಹಾಗೂ ವಿಲೇವಾರಿಗೆ ಸಮರ್ಪಕ ವ್ಯವಸ್ಥೆ
– ಉದ್ಯೋಗ ಖಾತರಿ ಯೋಜನೆಯ ಸಮರ್ಪಕ ಅನುಷ್ಠಾನ.

ಇದನ್ನೂ ಓದಿ:ಭೂ ಹಗರಣದಲ್ಲಿ ನ್ಯಾಯಾಧೀಶರು ಭಾಗಿ ವಿಷಾದನೀಯ: ಶಾಸಕ ಎ.ಟಿ.ರಾಮಸ್ವಾಮಿ

Advertisement

ಪ್ರಾಮಾಣಿಕ ಪ್ರಯತ್ನ
ಸರಕಾರದ ಎಲ್ಲ ಯೋಜನೆಗಳು, ಸವಲತ್ತುಗಳನ್ನು ಗ್ರಾಮಸ್ಥರಿಗೆ ತಲುಪಿಸುವಲ್ಲಿ ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಿ ದ್ದೇವೆ. ಇದಕ್ಕೆ ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಸಿಬಂದಿ, ಆರೋಗ್ಯ ಇಲಾಖೆ ಸಿಬಂದಿ ಹಾಗೂ ಮುಖ್ಯವಾಗಿ ಗ್ರಾಮಸ್ಥರ ಸಹಕಾರವೇ ಕಾರಣ. ಎಲ್ಲರೂ ಉತ್ತಮವಾಗಿ ಕಾರ್ಯ ನಿರ್ವಹಿಸಿ ದ್ದರಿಂದ ಈ ಪ್ರಶಸ್ತಿ ಬಂದಿದೆ.
– ರಿಯಾಜ್‌ ಅಹಮದ್‌, ಮರವಂತೆ ಗ್ರಾ.ಪಂ. ಪಿಡಿಒ

ಮರವಂತೆ ಗ್ರಾ.ಪಂ. ಸಾಧನೆ
ಕೋವಿಡ್‌ ಪರಿಸ್ಥಿತಿಯ ಉತ್ತಮ ನಿರ್ವಹಣೆ. ಗ್ರಾಮೀಣ ಕಾರ್ಯಪಡೆಯಿಂದ ಕ್ರಿಯಾಶೀಲ ಕಾರ್ಯಚಟುವಟಿಕೆ. 4,403 ಗ್ರಾಮಸ್ಥರು ಲಸಿಕೆ ಪಡೆದಿದ್ದು, 117 ಮಂದಿಯಷ್ಟೇ ಲಸಿಕೆ ಪಡೆಯಲು ಬಾಕಿ ಇದ್ದಾರೆ.
-ಶೇ. 100 ರಷ್ಟು ತೆರಿಗೆ ಸಂಗ್ರಹ
– ಸ್ವಯಂ ಪ್ರೇರಿತ ಸಾಮಾಜಿಕ – ಆರ್ಥಿಕ ಸಮೀಕ್ಷೆ.
– ಮಾದರಿಯಾದ ತ್ಯಾಜ್ಯ ವಿಲೇವಾರಿ ಕ್ರಮ.
– ಸಂಪನ್ಮೂಲ ಕ್ರೋಢಿಕರಣ, ಬೀದಿ ದೀಪ ಅಳವಡಿಕೆ – ನಿರ್ವಹಣೆ, ಉದ್ಯೋಗ ಖಾತರಿ ಯೋಜನೆಯ ಸಮರ್ಪಕ ಅನುಷ್ಠಾನ.

 

Advertisement

Udayavani is now on Telegram. Click here to join our channel and stay updated with the latest news.

Next