Advertisement

ಶ್ಯಾಂ ಭಟ್‌ರಿಂದ ನಕ್ಷೆ ರದ್ದು!

10:54 AM Jul 15, 2017 | Team Udayavani |

ಬೆಂಗಳೂರು: ರಾಮಚಂದ್ರಾಪುರ ಮಠದ ಗಿರಿನಗರ ಶಾಖಾ ಮಠ ನಿರ್ಮಾಣ ಮಾಡುತ್ತಿದ್ದ ಕಟ್ಟಡದ ನಕ್ಷೆ ಮಂಜೂರಾತಿಯನ್ನು ರದ್ದುಪಡಿಸಲು ಬಿಬಿಎಂಪಿಗೆ ಪತ್ರ ಬರೆಯಲು ಬಿಡಿಎ ಹಿಂದಿನ ಆಯುಕ್ತ ಶ್ಯಾಂಭಟ್‌ ಅವರ ಮೌಖೀಕ ಸೂಚನೆಯಿತ್ತು ಎಂದು ಬಿಡಿಎ ನಿವೃತ್ತ ಕಾರ್ಯಕಾರಿ ಇಂಜಿನಿಯರ್‌ ರಾಜಗೋಪಾಲ್‌ ಹೈಕೋರ್ಟ್‌ಗೆ ತಿಳಿಸಿದರು.

Advertisement

ಬಿಬಿಎಂಪಿ ಕ್ರಮ ಪ್ರಶ್ನಿಸಿ ಶ್ರೀಮಠ ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿನೀತ್‌ ಕೊಠಾರಿ ಅವರಿದ್ದ ಏಕಸದಸ್ಯ ಪೀಠ, ಮಠದ ಕಟ್ಟಡದ ನಕ್ಷೆ ಮಂಜೂರಾತಿ ರದ್ದುಪಡಿಸಲು ಬಿಬಿಎಂಪಿಗೆ ಪತ್ರ ಬರೆಯಲು ಕಾರಣ ಏನು ಎಂದು ವಿಚಾರಣೆಗೆ ಹಾಜರಾಗಿದ್ದ ಅಧಿಕಾರಿ ರಾಜಗೋಪಾಲ್‌ ಅವರನ್ನು ಪ್ರಶ್ನಿಸಿತು.

ಇದಕ್ಕೆ ಉತ್ತರಿಸಿದ ನಿವೃತ್ತ ಕಾರ್ಯಕಾರಿ ಎಂಜಿನಿಯರ್‌ ರಾಜಗೋಪಾಲ್‌, “ಶ್ರೀ ಮಠದ ಕಟ್ಟಡ ನಕ್ಷೆ ಮಂಜೂರಾತಿ ಮಾಡಲು ಪತ್ರ ಬರೆಯುಂತೆ ಹಿಂದೆ ಬಿಡಿಎ ಆಯುಕ್ತರಾಗಿದ್ದ ಶ್ಯಾಂಭಟ್‌ ಅವರ ಮೌಖೀಕ ಸೂಚನೆಯಿತ್ತು,’ ಎಂದು ತಿಳಿಸಿದರು. ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ನೀವು ಹೇಳಿರುವ ವಿಚಾರದ ಬಗ್ಗೆ ಅಫಿಡೆವಿಟ್‌ ಸಲ್ಲಿಸಿ, ಅಗತ್ಯವಾದರೆ ಅವರನ್ನು (ಶ್ಯಾಂಭಟ್‌) ವಿಚಾರಣೆ ನಡೆಸುತ್ತೇವೆ ಎಂದು ನಿರ್ದೇಶಿಸಿತು.

ಇದೇ ವೇಳೆ ಹಾಜರಿದ್ದ ಮೂವರು ಬಿಬಿಎಂಪಿ ಅಧಿಕಾರಿಗಳು, ಬಿಬಿಎಂಪಿ ಶ್ರೀಮಠದ ಕಟ್ಟಡದ ನಕ್ಷೆ ಮಂಜೂರಾತಿ ರದ್ದುಪಡಿಸಿದ್ದ ಆದೇಶ ಹಿಂಪಡೆಯಲಾಗಿದೆ. ಹೀಗಾಗಿ 50 ಸಾವಿರ ದಂಡ ಪಾವತಿಯಿಂದ ವಿನಾಯಿತಿ ನೀಡುವಂತೆ ಮಾಡಿದ ಮನವಿಯನ್ನು ನ್ಯಾಯಪೀಠ ತಳ್ಳಿಹಾಕಿತು. ನೀವು ನಿರ್ಲಕ್ಷ್ಯ ಮಾಡಿದ್ದೀರಿ. ಹೀಗಾಗಿ ದಂಡ ಪಾವತಿಸಿ ಎಂದು ತಾಕೀತು ಮಾಡಿ ವಿಚಾರಣೆ ಮುಂದೂಡಿತು.

ಏನಿದು ನಕ್ಷೆ ಪ್ರಕರಣ?
ಗಿರಿನಗರದಲ್ಲಿ ನಿರ್ಮಾಣ ಮಾಡುತ್ತಿದ್ದ ಕಟ್ಟಡ ನಕ್ಷೆ ಮಂಜೂರಾತಿಯನ್ನು 2016ರ ಜನವರಿ 6ರಂದು ರದ್ದುಪಡಿಸಿದ್ದ ಬಿಬಿಎಂಪಿಯ ಕ್ರಮ ಪ್ರಶ್ನಿಸಿ ಶ್ರೀಮಠ ಹೈಕೋರ್ಟ್‌ ಮೆಟ್ಟಿಲೇರಿತ್ತು. ಈ ಅರ್ಜಿಯ ವಿಚಾರಣೆ ವೇಳೆ ಬಿಡಿಎ ಅಧಿಕಾರಿ ರಾಜಗೋಪಾಲ್‌ ಬರೆದಿದ್ದ ಪತ್ರ ಆಧರಿಸಿ ಕಟ್ಟಡ ಮಂಜೂರಾತಿ ನಕ್ಷೆ ರದ್ದುಪಡಿಸಲಾಗಿತ್ತು ಎಂಬ ಸಂಗತಿ ಬೆಳಕಿಗೆ ಬಂದಿತ್ತು.

Advertisement

ಈ ಹಿನ್ನೆಲೆಯಲ್ಲಿ ನ್ಯಾಯಪೀಠ, ನಿವೃತ್ತ ಬಿಡಿಎಅಧಿಕಾರಿ ಹಾಗೂ ಬಿಬಿಎಂಪಿ ದಕ್ಷಿಣ ವಲಯದ ನಗರ ಯೋಜನಾ ಸಹಾಯಕ ನಿರ್ದೇಶಕ ಸಯ್ಯದ್‌ ಮುಬಾಸಿರ್‌ ಅಹ್ಮದ್‌, ಮುಖ್ಯ ಎಂಜಿನಿಯರ್‌ ಎಚ್‌.ಟಿ.ಬೆಟ್ಟೇಗೌಡ, ಜಂಟಿ ನಿರ್ದೇಶಕ ಎ.ಜೆ.ಹೇಮಚಂದ್ರ ಅವರಿಗೆ ತಲಾ 50 ಸಾವಿರ ರೂ. ದಂಡ ವಿಧಿಸಿ ವಿಚಾರಣೆಗೆ ಖುದ್ದು ಹಾಜರಾಗುವಂತೆ ಜೂನ್‌ 28ರಂದು ಆದೇಶಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next