Advertisement

14ನೇ ಐಪಿಎಲ್‌ಗೆ ಕ್ಷಣಗಣನೆ ಆರಂಭ : ಐಪಿಎಲ್‌ ಹಬ್ಬದ ಹಲವು ನೋಟಗಳು

11:10 PM Mar 30, 2021 | Team Udayavani |

ಹೊಸದಿಲ್ಲಿ : ಬಹು ನಿರೀಕ್ಷಿತ 14ನೇ ಐಪಿಎಲ್‌ಗೆ ಕ್ಷಣಗಣನೆ ಆರಂಭವಾಗಿದ್ದು, ಕ್ರಿಕೆಟ್‌ ಜಾತ್ರೆ ನಿಧಾನವಾಗಿ ಕಾವೇರಿಸಿಕೊಳ್ಳುತ್ತಿದೆ. ಎಲ್ಲ ತಂಡಗಳೂ ಭರ್ಜರಿ ತಯಾರಿಯಲ್ಲಿ ತೊಡಗಿವೆ. ಕೂಟದ ಆರಂಭಕ್ಕೂ ಮೊದಲೇ ಕೆಲವು ತಂಡಗಳ ಬದಲಾವಣೆ ಹಾಗೂ ಹೊಸ ಕಾರ್ಯತಂತ್ರದ ಕುರಿತು ಭವಿಷ್ಯ ನುಡಿಯಲಾರಂಭಿಸಿದ್ದಾರೆ. ದಿನವೂ ಹೊಸ ಬೆಳವಣಿಗೆಗೆ ಐಪಿಎಲ್‌ ತನ್ನನ್ನು ತೆರೆದುಕೊಳ್ಳುತ್ತಿದೆ. ಇಂಥ ಕೆಲವು ನೋಟಗಳು ಇಲ್ಲಿವೆ.

Advertisement

ವಿರಾಟ್‌ ಕೊಹ್ಲಿ ಓಪನಿಂಗ್‌!
“ಈ ಸಲ ಕಪ್‌ ನಮ್ದೇ’ ಎನ್ನುವ ಅಭಿಮಾನಿಗಳ ಬಯಕೆಯನ್ನು ಈ ಸಲವಾದರೂ ಈಡೇರಿಸುವ ಸಂಕಲ್ಪ ಮಾಡಿರುವ ಆರ್‌ಸಿಬಿ ತಂಡದ ನಾಯಕ ವಿರಾಟ್‌ ಕೊಹ್ಲಿ ಈ ಐಪಿಎಲ್‌ನಲ್ಲಿ ವನ್‌ಡೌನ್‌ ಬದಲು ಬೇರೊಂದು ಬ್ಯಾಟಿಂಗ್‌ ಕ್ರಮಾಂಕದಲ್ಲಿ ಆಡಲಿಳಿಯುವ ಯೋಜನೆಯಲ್ಲಿದ್ದಾರೆ. ಅವರು ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ!

ಆರ್‌ಸಿಬಿ ತಂಡದ ನಿರ್ದೇಶಕ ಮೈಕ್‌ ಹೆಸ್ಸನ್‌ ಈ ವಿಷಯವನ್ನು ಬಹಿರಂಗಪಡಿಸಿದ್ದು. ದೇವದತ್ತ ಪಡಿಕ್ಕಲ್‌ ಜತೆ ಕೊಹ್ಲಿ ಇನ್ನಿಂಗ್ಸ್‌ ಆರಂಭಿಸುವುದನ್ನು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.

“ನಾವು ಐಪಿಎಲ್‌ ಹರಾಜಿನ ಸಮಯದಲ್ಲೇ ಈ ಯೋಜನೆಯನ್ನು ಹೊಂದಿದ್ದೆವು. ವಿರಾಟ್‌ ಕೊಹ್ಲಿ ಆರಂಭಿಕನಾಗಿ ಆಡುವುದರಿಂದ ತಂಡ ಹೆಚ್ಚು ಬಲಿಷ್ಠವಾಗಲಿದೆ. ಏಕೆಂದರೆ ಪವರ್‌ ಪ್ಲೇಯಲ್ಲಿ ಕೊಹ್ಲಿ ದಾಖಲೆ ಉತ್ತಮವಾಗಿದೆ’ ಎಂದು ಹೆಸ್ಸನ್‌ ತಿಳಿಸಿದ್ದಾರೆ.

ಗ್ಲೆನ್‌ ಮ್ಯಾಕ್ಸ್‌ವೆಲ್‌ ಆಗಮನದಿಂದ ಆರ್‌ಸಿಬಿಯ ಮಧ್ಯಮ ಕ್ರಮಾಂಕ ಈ ಬಾರಿ ಹೆಚ್ಚು ಬಲಿಷ್ಠ ಎಂದು ಭಾವಿಸಲಾಗಿದೆ.

Advertisement

ಮುಂಬೈ ಬಲಿಷ್ಠ: ಗವಾಸ್ಕರ್‌
ಭಾರತ ತಂಡದ ಮಾಜಿ ಆಟಗಾರ ಸುನೀಲ್‌ ಗವಾಸ್ಕರ್‌, ಈ ಬಾರಿಯ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡವನ್ನು ಮಣಿಸುವುದು ತೀರಾ ಕಷ್ಟ ಎಂದು ಭವಿಷ್ಯ ನುಡಿದಿ¨ªಾರೆ. ಮುಂಬೈ ತಂಡದಲ್ಲಿ ಇಶಾನ್‌ ಕಿಶನ್‌, ಸೂರ್ಯಕುಮಾರ್‌ ಯಾದವ್‌, ಹಾರ್ದಿಕ್‌ ಪಾಂಡ್ಯ, ನಾಯಕ ರೋಹಿತ್‌ ಶರ್ಮ, ಬಿಗ್‌ ಹಿಟ್ಟರ್‌ ಕೈರನ್‌ ಪೊಲಾರ್ಡ್‌ ಅವರೆಲ್ಲರ ಪ್ರಚಂಡ ಫಾರ್ಮ್ ಗಮನಿಸಿದಾಗ ಈ ಬಾರಿಯೂ ಮುಂಬೈ ಚಾಂಪಿಯನ್‌ ಆಗುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿದ್ದಾರೆ.

ಆರ್‌ಸಿಬಿಗೆ ಚೊಚ್ಚಲ ಕಪ್‌: ಕ್ರಿಸ್ಟಿಯನ್‌
“ಈ ವರ್ಷ ಆರ್‌ಸಿಬಿಗೆ ಚೊಚ್ಚಲ ಐಪಿಎಲ್‌ ಟ್ರೋಫಿ ತಂದುಕೊಡುತ್ತೇವೆ. ನಾಯಕ ವಿರಾಟ್‌ ಕೊಹ್ಲಿ, ಎಬಿಡಿ ಅವರೊಂದಿಗೆ ತಂಡದ ಗೆಲುವಿಗಾಗಿ ನಾನೂ ಕೈ ಜೋಡಿಸುತ್ತೇನೆ….’ ಎಂದು ಆಸೀಸ್‌ ಕ್ರಿಕೆಟಿಗ ಡೇನಿಯಲ್‌ ಕ್ರಿಸ್ಟಿಯನ್‌ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

“ಮಧ್ಯಮ ಕ್ರಮಾಂಕದಲ್ಲಿ ಗ್ಲೆನ್‌ ಮ್ಯಾಕ್ಸ್‌ವೆಲ್‌ ತಂಡಕ್ಕೆ ಆಸರೆಯಾಗಬಲ್ಲರು. ನಾವಿಬ್ಬರೂ ಆಸ್ಟ್ರೇಲಿಯದಲ್ಲಿ ಅತ್ಯುತ್ತಮ ಕ್ರಿಕೆಟ್‌ಆಡಿದ್ದೇವೆ. ಆರ್‌ಸಿಬಿ ಅತ್ಯಂತ ಬಲಿಷ್ಠ ತಂಡವಾಗಿದೆ. ಹೀಗಾಗಿ ಈ ಬಾರಿ ಪ್ರಶಸ್ತಿ ಗೆಲ್ಲಲಿದೆ’ ಎಂಬುದು ಕ್ರಿಸ್ಟಿಯನ್‌ ಅವರ ವಿಶ್ವಾಸದ ನುಡಿಗಳಾಗಿವೆ.

ಪೂಮಾ ಜತೆ ಆರ್‌ಸಿಬಿ ಒಪ್ಪಂದ
ರಾಯಲ್‌ ಚಾಲೆಂಜರ್ ಬೆಂಗಳೂರು ತಂಡ ಜಾಗತಿಕ ಕ್ರೀಡಾ ಬ್ರ್ಯಾಂಡ್‌ “ಪೂಮಾ’ ಜತೆ ದೀರ್ಘ‌ಕಾಲದ ಒಪ್ಪಂದಕ್ಕೆ ಮಂಗಳವಾರ ಸಹಿ ಹಾಕಿದೆ. ಒಪ್ಪಂದದ ನಿಯಮಗಳ ಪ್ರಕಾರ ಪೂಮಾ ಮುಂಬರುವ ಋತುವಿನಿಂದ ಆರ್‌ಸಿಬಿಯ ಅಧಿಕೃತ ಕಿಟ್‌ ಪಾಲುದಾರನಾಗಲಿದೆ.

ಆರ್‌ಸಿಬಿ ಕುಟುಂಬಕ್ಕೆ ಪೂಮಾವನ್ನು ಸ್ವಾಗತಿಸಲು ಖುಷಿಯಾಗುತ್ತಿದೆ. ಬಲವಾದ ಕ್ರೀಡಾದೃಷ್ಟಿ ಮತ್ತು ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಹೊಂದಿರುವ ಜಾಗತಿಕ ಬ್ರ್ಯಾಂಡ್‌ ಆಗಿರುವ ಪೂಮಾ ವ್ಯಾಪಕ ವಿತರಣಾ ಜಾಲ ಹೊಂದಿದೆ ಎಂದು ನಾಯಕ ವಿರಾಟ್‌ ಕೊಹ್ಲಿ ಹೇಳಿದ್ದಾರೆ.

ಧೋನಿ ನಾಯಕತ್ವದಲ್ಲಿ ಆಡುವ ಹಿತಾನುಭವ
ಮಹೇಂದ್ರ ಸಿಂಗ್‌ ಧೋನಿ ನಾಯಕತ್ವದಲ್ಲಿ ಆಡುವುದನ್ನು ಎಲ್ಲ ಬೌಲರ್‌ಗಳೂ ಬಹಳ ಇಷ್ಟಪಡುತ್ತಾರೆ ಎಂದು ಕರ್ನಾಟಕದ ಆಲ್‌ರೌಂಡರ್‌ ಕೃಷ್ಣಪ್ಪ ಗೌತಮ… ಅಭಿಪ್ರಾಯ ಪಟ್ಟಿದ್ದಾರೆ.

ಓರ್ವ ಬೌಲರ್‌ನಿಂದ ಉತ್ತಮ ಪ್ರದರ್ಶನವನ್ನು ಹೇಗೆ ಹೊರತರಬೇಕೆಂಬುದು ಧೋನಿಗೆ ಚೆನ್ನಾಗಿ ತಿಳಿದಿದೆ. ಇದರಿಂದ ಆಟಗಾರರಿಗೆ ತಮ್ಮ ಸಾಮರ್ಥ್ಯ ಕೂಡ ಅಂದಾಜಾಗುತ್ತದೆ’ ಎಂದು ಕನ್ನಡಿಗ ಕೃಷ್ಣಪ್ಪ ಗೌತಮ್‌ ತಿಳಿಸಿದರು.

ಆರ್‌ಸಿಬಿ ಜೆರ್ಸಿ ಕಾಪಿ ಹೊಡೆಯಿತೇ ಪಂಜಾಬ್‌ ಕಿಂಗ್ಸ್‌?!
2021ರ ಐಪಿಎಲ್‌ಗೆ ಆಟಗಾರರ ಹರಾಜು ಪ್ರಕ್ರಿಯೆಗೂ ಮೊದಲೇ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡ “ಪಂಜಾಬ್‌ ಕಿಂಗ್ಸ್‌’ ಎಂಬ ನೂತನ ಹೆಸರಿನೊಂದಿಗೆ ಲಾಂಛನವನ್ನೂ ಅನಾವರಣಗೊಳಿಸಿತ್ತು.
ಈಗ ಪಂಜಾಬ್‌ ಕಿಂಗ್ಸ್‌ ತನ್ನ ನೂತನ ಜೆರ್ಸಿಯನ್ನು ಬಿಡುಗಡೆ ಮಾಡಿದೆ. ಕೆಂಪು ಮತ್ತು ಚಿನ್ನದ ಬಣ್ಣವನ್ನು ಹೊಂದಿರುವ ಈ ಜೆರ್ಸಿ ಮತ್ತು ಗೋಲ್ಡನ್‌ ಬಣ್ಣದ ಹೆಲ್ಮೆಟ್‌ ಅನ್ನು ಮಂಗಳವಾರ ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದೆ.
ಆದರೆ ತಂಡದ ಈ ನೂತನ ಜೆರ್ಸಿ 2008ರ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡದ ಜೆರ್ಸಿಯಂತೆ ಕಾಣಿಸುತ್ತಿದೆ ಎಂದು ಆರ್‌ಸಿಬಿ ಅಭಿಮಾನಿಗಳು ಟ್ರೋಲ್‌ ಮಾಡಲು ಆರಂಭಿಸಿದ್ದಾರೆ.

ಇದಕ್ಕೆ ಪಂಜಾಬ್‌ ಯಾವ ರೀತಿ ಪ್ರತಿಕ್ರಿಯಿಸುತ್ತದೆ ಎಂಬುದನ್ನು ನೋಡಬೇಕು. ಆದರೆ ಇವೆರಡೂ ಐಪಿಎಲ್‌ನ ನತದೃಷ್ಟ ತಂಡಗಳಾಗಿರುವುದರಿಂದ ಯಾರೂ ಇದನ್ನು ಸೀರಿಯಸ್‌ ಆಗಿ ತೆಗೆದುಕೊಳ್ಳಲಿಕ್ಕಿಲ್ಲ ಎಂಬುದೊಂದು (ಕು)ತರ್ಕ!

ಐಪಿಎಲ್‌ನಲ್ಲಿ ಹೊಸತನ, ಹೊಸ ನಿಯಮ
14ನೇ ಐಪಿಎಲ್‌ ಕೂಟವನ್ನು ಯಶಸ್ವಿಯಾಗಿ ನಡೆಸಲು ಬಿಸಿಸಿಐ ಕೆಲವು ಪ್ರಮುಖ ನಿಯಮಗಳನ್ನು ಜಾರಿಗೆ ತರಲಿದೆ. ಇದರ ಕಿರು ಪರಿಚಯ ಇಲ್ಲಿದೆ.

ಡಿಆರ್‌ಎಸ್‌ ವೇಳೆ ಸಾಫ್ಟ್ ಸಿಗ್ನಲ್ ಇಲ್ಲ
ಮೈದಾನದಲ್ಲಿ ಅಂಪಾಯರ್‌ ನೀಡಿದ ತೀರ್ಪನ್ನು ಪ್ರಶ್ನಿಸಿ ತಂಡಗಳು ಡಿಆರ್‌ಎಸ್‌ಗೆ ಮನವಿ ಸಲ್ಲಿಸಲು ಅವಕಾಶವಿದೆ. ಒಂದು ವೇಳೆ ಡಿಆರ್‌ಎಸ್‌ನಲ್ಲಿ ಗೊಂದಲ ಮುಂದು ವರಿದರೆ, ಆಗ ಮತ್ತೆ ಅಂಪಾಯರ್‌ಗೆ ಅಂತಿಮ ನಿರ್ಧಾರ ಕೈಗೊಳ್ಳಲು ಅವಕಾಶ ನೀಡಲಾಗುತ್ತದೆ. ಇದನ್ನು ಸಾಫ್ಟ್ ಸಿಗ್ನಲ್‌ ಎಂದು ಕರೆಯಲಾಗುತ್ತದೆ. ಇದನ್ನು ಬಿಸಿಸಿಐ ರದ್ದು ಮಾಡಿದೆ. ಡಿಆರ್‌ಎಸ್‌ ವೇಳೆ ಅಂತಿಮ ತೀರ್ಪನ್ನು ತೃತೀಯ ಅಂಪಾಯರ್‌ ಮಾತ್ರ ತೆಗೆದುಕೊಳ್ಳಬೇಕು ಎಂದು ಹೇಳಿದೆ.

ಥರ್ಡ್‌ ಅಂಪಾಯರ್‌ಗೆ ಹೆಚ್ಚು ಪವರ್‌
ಐಪಿಎಲ್‌ 2020 ಟೂರ್ನಿಯಲ್ಲಿ ಆನ್‌ಫೀಲ್ಡ್‌ ಅಂಪಾಯರ್‌ ತೆಗೆದುಕೊಂಡ ಶಾರ್ಟ್‌ ರನ್‌ ತೀರ್ಮಾನದಿಂದ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಎದುರು ಒಂದು ರನ್‌ ಸೋಲು ಎದುರಾದದ್ದು ನೆನಪಿರಬಹುದು. ಇದು ತೀವ್ರ ಚರ್ಚೆಗೂ ಕಾರಣವಾಗಿತ್ತು. ಹೀಗಾಗಿ ಈ ಬಾರಿ ಮೈದಾನದ ಅಂಪಾಯರ್‌ ನೀಡುವ ಶಾರ್ಟ್‌ ರನ್‌ ತೀರ್ಪನ್ನು ಮೂರನೇ ಅಂಪಾಯರ್‌ ಪರಿಶೀಲನೆ ನಡೆಸಲಿದ್ದಾರೆ. ಜತೆಗೆ ಅಂಗಳದ ಅಂಪಾಯರ್‌ ನೀಡಿದ ನಿರ್ಧಾರವನ್ನು ಬದಲಾಯಿಸಲಿಕ್ಕೂ ಮೂರನೇ ಅಂಪಾಯರ್‌ಗೆ ಅನುಮತಿ ನೀಡಲಾಗಿದೆ. ನೋಬಾಲ್‌ ವಿಚಾರದಲ್ಲಿಯೂ ಮೂರನೇ ಅಂಪಾಯರ್‌ ತೀರ್ಪು ಬದಲಾಯಿಸಬಹುದಾಗಿದೆ.

90 ನಿಮಿಷಗಳಲ್ಲಿ 20 ಓವರ್‌
ಈ ಹಿಂದೆ ಐಪಿಎಲ್‌ ಟೂರ್ನಿಗಳಲ್ಲಿ ಗಂಟೆಗೆ 14.11 ಓವರ್‌ಗಳ ಕನಿಷ್ಠ ಓವರ್‌ರೇಟ್‌ ದಾಖಲಾಗಿದೆ. ಆದರೆ ಪಂದ್ಯಕ್ಕೆ ಯಾವುದೇ ಅಡಚಣೆ ಎದುರಾಗದೇ ಇದ್ದರೆ 20 ಓವರ್‌ಗಳನ್ನು 90 ನಿಮಿಷಗಳಲ್ಲಿ ಮುಗಿಸಲೇಬೇಕು ಎಂಬ ನಿಯಮ ತರಲಾಗಿದೆ. ಆಟಕ್ಕೆ 85 ನಿಮಿಷ, 5 ನಿಮಿಷ ವಿರಾಮ (ಟೈಮ್‌ ಔಟ್‌). ಹೀಗಾಗಿ ಒಬ್ಬ ಬೌಲರ್‌ಗೆ ಒಂದು ಓವರ್‌ ಎಸೆಯಲು 4 ನಿಮಿಷ, 15 ಸೆಕೆಂಡ್‌ ಲಭ್ಯವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next