ನಂಜನಗೂಡು: ಮೈಸೂರು ಚಾಮರಾಜನಗರ ಜಿಲ್ಲೆಯ ಅಸಂಖ್ಯಾತ ಭಕ್ತರ ಶ್ರದ್ಧಾ ಕೇಂದ್ರವಾದ ಬಂಡೀಪುರ ರಕ್ಷಿತಾ ಅರಣ್ಯದಲ್ಲಿರುವ ಬೆಲದಕುಪ್ಪೆ ಮಹದೇಶ್ವರರ ಜಾತ್ರಾ ಮಹೋತ್ಸವಕ್ಕೆ ಅರಣ್ಯ ಇಲಾಖಾ ಅಧಿಕಾರಿಗಳು ಕಠಿಣ ನಿಬಂಧನೆ ವಿಧಿಸಿರುವುದನ್ನು ಖಂಡಿಸಿ ತಾಲೂಕಿನ ಹೆಡಿಯಾಲದ ಅರಣ್ಯಾಧಿಕಾರಿಗಳ ಕಾರ್ಯಾಲಯದ ಮುಂದೆ ಭಕ್ತರು ಪ್ರತಿಭಟನೆ ನಡೆಸಿದರು.
ಗುರುವಾರ ಹೆಡಿಯಾಲದಲ್ಲಿ ಸೇರಿದ ಭಕ್ತರು, ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇಲಾಖೆ ಬೇಕಾಬಿಟ್ಟಿ ನಿರ್ಬಂಧಗಳಿಂದಾಗಿ ಭಕ್ತರ ಧಾರ್ಮಿಕ ಭಾವನೆಗೆ ಪೆಟ್ಟು ಬಿದ್ದಿದ್ದು ಕೂಡಲೇ ನಿರ್ಬಂಧಗಳನ್ನು ಹಿಂತೆಗೆದುಕೊಂಡು ಜಾತ್ರೆ ನಡೆಸಲು ಅನುವು ಮಾಡಿಕೊಡಿ ಎಂದು ಒತ್ತಾಯಿಸಿದರು.
ಬೃಹತ್ ಪ್ರತಿಭಟನೆ ಮಾಹಿತಿ ಅರಿತ ಎಸಿಎಫ್ ಪರಮೇಶ್, ಜಿಲ್ಲಾಧಿಕಾರಿಗಳಿಗೆ ಮಾಹಿತಿ ತಿಳಿಸಿ ಹೆಚ್ಚಿನ ಪೊಲೀಸರನ್ನು ಸ್ಥಳಕ್ಕೆ ಕರೆಯಿಸಿಕೊಂಡರು. ಕೊನೆಗೆ ಪರಮೇಶ್ ಮಾತನಾಡಿ, ಜಾತ್ರೆ ನಡೆಸಲು ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ. ಈ ಹಿಂದಿನಂತೆಯೇ ಈ ಬಾರಿಯೂ ಅದ್ಧೂರಿಯಾಗಿ ಜಾತ್ರೆ ನಡೆಸಿ ಎಂದು ಭರವಸೆ ನೀಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಸಿದ್ದರಾಜು, ತಾಪಂ ಮಾಜಿ ಅಧ್ಯಕ್ಷ ಗಿರೀಶ್ ಮಾತನಾಡಿ, ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಚರ್ಚಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಪ್ರತಿಭಟನಾಕಾರರ ಮನವೊಲಿಸಿದರು.
ಶಿರಮಳ್ಳಿ ಸಿದ್ದಪ್ಪ,ಮಹದೇವನಾಯಕ, ಶಿವಲಿಂಗೇಗೌಡ, ಹೆಡಿಯಾಲ ನಾಗೇಶ, ಮುತ್ತಿಗೆ ಹುಂಡಿಬಸವರಾಜಪ್ಪ, ಮೊತ್ತಬಸವರಾಜಪ್ಪ, ನಾಗಣ್ಣ, ಪ್ರಭುಸ್ವಾಮಿ, ಆರ್‌ಫ್ಒ ಸಂದೀಪ್, ಮಹಮ್ಮದ್ ಸುಜೀತ, ಗೋಪಾಲಕೃಷ್ಣ, ಸತೀಶ್, ಶಿವಮಾದಯ್ಯ, ಮಲ್ಲೇಶ ಮತ್ತಿತರರಿದ್ದರು.