ಬ್ರಹ್ಮಾವರ: ಶಿಕ್ಷಣ, ಆರೋಗ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಉಡುಪಿ ಜಿಲ್ಲೆಯಲ್ಲಿ ಮತದಾನ ಜಾಗೃತಿಯ ಮೂಲಕ ಪ್ರಮಾಣವನ್ನು ಗರಿಷ್ಠಗೊಳಿಸಲು ಹಲವು ಆಯಾಮ ಗಳ ಕಾರ್ಯ ಚಟುವಟಿಕೆಗಳನ್ನು ರೂಪಿಸಲಾಗಿದೆ. ಈ ಹಂತದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರ ಪಾತ್ರ ಮಹತ್ವದಾಗಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷೆ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿಂಧು ಬಿ. ರೂಪೇಶ್ ಹೇಳಿದರು.
ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚಾಂತಾರು, ವಾರಂಬಳ್ಳಿ, ಹಂದಾಡಿ ಗ್ರಾಮ ಪಂಚಾಯತ್ ಸಹಭಾಗಿತ್ವದಲ್ಲಿ ಬುಧವಾರ ಜರಗಿದ ಮತದಾನ ಜಾಗೃತಿ ಅಭಿಯಾನ, ಮತಯಂತ್ರ ಪ್ರಾತ್ಯಕ್ಷಿಕೆ ಹಾಗೂ ಮತ ಜಾಗೃತಿ ಆಧಾರಿತ ರಂಗೋಲಿ ಸ್ಪರ್ಧೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಾಗೃತ ಮತದಾರರಿರುವ ಉಡುಪಿ ಜಿಲ್ಲೆಯಲ್ಲಿ ಮತದಾನ ಪ್ರಮಾಣವು ಕೂಡ ಅಧಿಕವಾಗಬೇಕಾದರೆ ವೈಯಕ್ತಿಕ ನೆಲೆಯಲ್ಲಿ ಜಾಗೃತ ಅಗತ್ಯವೆಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತಾ ಡಿದ ಉಡುಪಿ ತಾ.ಪಂ ಕಾರ್ಯ ನಿರ್ವಾಹಣಾಧಿಕಾರಿ ರಾಜು ಕೆ. ಅವರು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯ ಉತ್ಸವಕ್ಕೆ ಉಡುಪಿಯನ್ನು ಸಜ್ಜುಗೊಳಿಸುವ ಪ್ರಕ್ರಿಯೆ ಯಶಸ್ವಿಯಾಗಿ ಜರಗುತ್ತಿದೆ ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಉಪನಿರ್ದೇಶಕಿ ಗ್ರೇಸಿ ಗೊನ್ಸಾಲಿಸ್ ಅವರು ಮತದಾನ ಜಾಗೃತಿಯ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.
ವಾರಂಬಳ್ಳಿ ಪಿಡಿಒ ಮಹೇಶ್ ಕೆ. ಅವರು ಮತಯಂತ್ರ ಪ್ರಾತ್ಯಕ್ಷಿಕೆ ನೀಡುವುದರೊಂದಿಗೆ ಕಾರ್ಯಕ್ರಮ ನಿರ್ವಹಿಸಿದರು. ರಂಗೋಲಿ ಸ್ಪರ್ಧೆ ಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಬ್ರಹ್ಮಾವರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಇಲಾಖಾಧಿಕಾರಿ ಶೋಭಾ ಸ್ವಾಗತಿಸಿ, ಹಂದಾಡಿ ಗ್ರಾಮ ಪಂಚಾಯತ್ ಪಿಡಿಒ ಶೈಲಾ ವಂದಿಸಿದರು. ಚಾಂತಾರು ಪಿಡಿಒ ಶ್ರುತಿ ಕಾಂಚನ್ ಸಹಕರಿಸಿದರು.