Advertisement

ಗೆಲ್ಲಲು ಹಲವು ತಂತ್ರ; ರಾಜ್ಯಸಭೆ ಚುನಾವಣೆಗೆ ಇನ್ನೆರಡೇ ದಿನ

02:40 AM Jun 08, 2022 | Team Udayavani |

ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ 4 ಸ್ಥಾನಗಳಿಗೆ ನಡೆಯಲಿರುವ ಚುನಾ ವಣೆಗೆ ಇನ್ನು ಕೇವಲ 2 ದಿನಗಳು ಮಾತ್ರ ಬಾಕಿ ಇದ್ದು, 4ನೇ ಅಭ್ಯರ್ಥಿಯ ಗೆಲುವಿಗಾಗಿ ಮೂರೂ ಪಕ್ಷಗಳು ತಮ್ಮದೇ ಕಾರ್ಯತಂತ್ರ ರೂಪಿಸುತ್ತಿವೆ. ಮೇಲ್ನೋಟಕ್ಕೆ “ಆತ್ಮಸಾಕ್ಷಿ ಮತ’ದ ಜಪ ಮಾಡುತ್ತಿದ್ದರೂ ವಿಪ್‌ ಎಚ್ಚರಿಕೆ ನಡುವೆ ಶಾಸಕರ ಅಡ್ಡ ಮತದಾನ ಅಥವಾ ಅವರನ್ನು ಅನಾರೋಗ್ಯದ ಕಾರಣ ನೀಡಿ ಗೈರುಹಾಜರು ಮಾಡಿಸುವ ತಂತ್ರಗಾರಿಕೆ ಸದ್ದಿಲ್ಲದೆ ನಡೆಯುತ್ತಿದೆ.

Advertisement

ಬುಧವಾರ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಗುರುವಾರ ಸಂಜೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕಾಂಗ ಪಕ್ಷಗಳ ಸಭೆ ನಡೆಯಲಿದ್ದು, ಗೆಲುವಿನ ಕಾರ್ಯತಂತ್ರಗಳ ಬಗ್ಗೆ ಸಮಾಲೋಚನೆ ನಡೆಸಲಾಗುತ್ತದೆ.

ಕಾಂಗ್ರೆಸ್‌ನ 2ನೇ ಅಭ್ಯರ್ಥಿ ಕಣದಿಂದ ವಾಪಸ್‌ ಆಗಲಿ ಎಂದು ಜೆಡಿಎಸ್‌ ಒತ್ತಾಯಿಸುತ್ತಿದ್ದರೆ, ಜೆಡಿಎಸ್‌ನ ಕುಪೇಂದ್ರ ರೆಡ್ಡಿ ತಟಸ್ಥರಾಗಲಿ ಎಂದು ಕಾಂಗ್ರೆಸ್‌ ಪ್ರತಿಪಾದಿಸುತ್ತಿದೆ. ಈ ಹಗ್ಗಜಗ್ಗಾಟ ಮತದಾನದ ದಿನ ದವರೆಗೂ ಮುಂದುವರಿಯಲಿದೆ ಎನ್ನಲಾಗಿದೆ.

ಮಾತುಕತೆಗೆ ಸಿದ್ಧ ಎಂದ ಕುಮಾರಸ್ವಾಮಿ
ಬಿಜೆಪಿಯನ್ನು ಸೋಲಿಸುವುದೇ ನನ್ನ ಮೊದಲ ಅಜೆಂಡಾ. ಈ ಕಾರಣಕ್ಕಾಗಿ ಕಾಂಗ್ರೆಸ್‌ ಜತೆ ಮಾತುಕತೆ ನಡೆಸಲು ಸಿದ್ಧ ಎಂದು ಮೈಸೂರಿನಲ್ಲಿ ಎಚ್‌.ಡಿ.ಕುಮಾರಸ್ವಾಮಿ ಹೇಳಿ ದ್ದಾರೆ. ರಾಜ್ಯಸಭೆ ಚುನಾವಣೆಯಲ್ಲಿ ಬೆಂಬಲದ ಬಗ್ಗೆ ಸಿದ್ದರಾಮಯ್ಯ ಹೊರತುಪಡಿಸಿ ಎಲ್ಲ ನಾಯಕರು ಒಪ್ಪಿದ್ದಾರೆ. ಬಿಜೆಪಿಯ ಅಭ್ಯರ್ಥಿ ಸೋಲಬೇಕು ಎಂದಾದರೆ ನಾವು ಎರಡನೇ ಪ್ರಾಶಸ್ತ್ಯದ 32 ಮತಗಳನ್ನು ಕೊಡುತ್ತೇವೆ. ನಿಮ್ಮ ಎರಡನೇ ಅಭ್ಯರ್ಥಿಯ 24 ಪ್ರಾಶಸ್ತ್ಯದ ಮತಗಳನ್ನು ನಮಗೆ ಕೊಡಿ ಎಂದು ಕಾಂಗ್ರೆಸನ್ನು ಕೇಳಿಕೊಂಡಿದ್ದಾರೆ.

ಬಿಜೆಪಿ ಸೋಲಬೇಕು ಎನ್ನುವ ಆಶಯ ಇದ್ದಿದ್ದರೆ ಚುನಾವಣೆಗೆ ಪೂರ್ವದಲ್ಲಿ ನಮ್ಮ ಜತೆ ಚರ್ಚೆ ಮಾಡ ಬೇಕಿತ್ತು. ನನ್ನ ಜತೆ ಅಲ್ಲದಿದ್ದರೂ ನಮ್ಮ ಪಕ್ಷದಲ್ಲಿ ಉತ್ತಮ ಬಾಂಧವ್ಯ ಹೊಂದಿರುವ ಹಲವರ ಜತೆ ಮಾತನಾಡಬಹುದಿತ್ತು ಎಂದು ಕುಮಾರಸ್ವಾಮಿ ಹೇಳಿದ್ದಾರೆ. ದೇವೇಗೌಡರು ರಾಜ್ಯಸಭೆಗೆ ಸ್ಪರ್ಧಿಸಿದಾಗ ಬಿಜೆಪಿಯು ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಿಲ್ಲ ಎಂದು ಕಾಂಗ್ರೆಸ್‌ ಕೂಡ ಅಭ್ಯರ್ಥಿ ಹಾಕಿರಲಿಲ್ಲ. ಸಿದ್ದರಾಮಯ್ಯ-ಯಡಿಯೂರಪ್ಪ ಯಾವ ಉದ್ದೇಶಕ್ಕಾಗಿ ಸೋಮವಾರ ವಿಮಾನ ನಿಲ್ದಾಣದಲ್ಲಿ ಭೇಟಿಯಾದರು? ಅದು ವಿಐಪಿ ಲಾಂಜ್‌. ಅಲ್ಲಿಗೆ ಯಾರೂ ಹೋಗುವುದಕ್ಕೆ ಸಾಧ್ಯವಿಲ್ಲ. ಹಾಗಿದ್ದರೂ ಭೇಟಿಯ ದೃಶ್ಯ, ಚಿತ್ರಗಳು ಹೊರಬಂದಿವೆ. ಇದು ಆತ್ಮಸಾಕ್ಷಿಯ ಮತ ಪಡೆಯುವ ಉದ್ದೇಶವೇ ಎಂದು ಎಚ್‌ಡಿಕೆ ಟಾಂಗ್‌ ನೀಡಿದ್ದಾರೆ.

Advertisement

ಇಂದು ಬಿಜೆಪಿ ಶಾಸಕಾಂಗ ಸಭೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬುಧವಾರ ಕರೆದಿರುವ ಶಾಸಕಾಂಗ ಸಭೆಯಲ್ಲಿ ಬಿಜೆಪಿಯಿಂದ ರಾಜ್ಯಸಭೆಗೆ ಸ್ಪರ್ಧಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಚಿತ್ರನಟ ಜಗ್ಗೇಶ್‌ ಹಾಗೂ ಮೂರನೇ ಅಭ್ಯರ್ಥಿಯಾಗಿ ಲೆಹರ್‌ ಸಿಂಗ್‌ ಅವರಲ್ಲಿ ಯಾರಿಗೆ ಯಾವ ಶಾಸಕರು ಮತ ಹಾಕಬೇಕು ಎನ್ನುವ ತೀರ್ಮಾನ ಆಗಲಿದೆ. ಒಬ್ಬರು ಸದಸ್ಯರ ಆಯ್ಕೆಗೆ 45 ಮತಗಳ ಅಗತ್ಯ ಇರುವುದರಿಂದ ಮೊದಲ ಮತ್ತು ಎರಡನೇ ಅಭ್ಯರ್ಥಿಗೆ ಮತ ಹಾಕುವವರ ಪಟ್ಟಿ ಹಾಗೂ ಮೂರನೇ ಅಭ್ಯರ್ಥಿ ಲೆಹರ್‌ ಸಿಂಗ್‌ ಅವರಿಗೆ ಹಾಕುವ ಶಾಸಕರ ಪಟ್ಟಿಯನ್ನು ಪ್ರತ್ಯೇಕವಾಗಿ ಮಾಡಿ, ಎಲ್ಲ ಶಾಸಕರಿಗೂ ವಿಪ್‌ ಜಾರಿಗೊಳಿಸಲು ಬಿಜೆಪಿ ತೀರ್ಮಾನಿಸಿದೆ.

ಅಲ್ಲದೆ ಈ ಚುನಾವಣೆಯಲ್ಲಿ ಪಕ್ಷದ ಏಜೆಂಟರಿಗೆ ತೋರಿಸಿ ಮತ ಹಾಕಲು ಅವಕಾಶ ಇರುವುದರಿಂದ ಶಾಸಕರು ಕಡ್ಡಾಯವಾಗಿ ಪಕ್ಷದ ಏಜೆಂಟರಿಗೆ ಯಾರಿಗೆ ಮತ ಎಂಬುದನ್ನು ತೋರಿಸಬೇಕು. ಸಭೆಯಲ್ಲಿ ಶಾಸಕರಿಗೆ ಈ ಬಗ್ಗೆ ಪಕ್ಷದ ನಾಯಕರು ವಿವರಿಸುವ ಸಾಧ್ಯತೆ ಇದೆ. ಅಲ್ಲದೆ ಅಡ್ಡ ಮತದಾನವಾಗದಂತೆ ಮತ್ತು ಮತ ಅಸಿಂಧುವಾಗದಂತೆ ಎಚ್ಚರ ವಹಿಸಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಬಿಜೆಪಿಗೆ ಮೊದಲ ಮತ್ತು ಎರಡನೇ ಅಭ್ಯರ್ಥಿಗಳನ್ನು ಸರಳವಾಗಿ ಗೆಲ್ಲಿಸಿಕೊಂಡು ಬರಲು ಅವಕಾಶವಿದ್ದು, ಮೂರನೇ ಅಭ್ಯರ್ಥಿ ಲೆಹರ್‌ ಸಿಂಗ್‌ ಅವರ ಗೆಲುವಿಗೆ ಕನಿಷ್ಠ 13 ಮತಗಳ ಕೊರತೆ ಉಂಟಾಗುತ್ತದೆ. ಅವರ ಗೆಲುವಿಗೆ ಜೆಡಿಎಸ್‌ ಮತ್ತು ಕಾಂಗ್ರೆಸ್‌ನ ಕೆಲವು ಶಾಸಕರಿಂದ ಅಡ್ಡ ಮತ ಹಾಕಿಸುವ ಕುರಿತಾಗಿಯೂ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ. ಈ ಜವಾಬ್ದಾರಿಯನ್ನು ಪಕ್ಷದ ಕೆಲವು ಶಾಸಕರು ಅಥವಾ ಸಚಿವರಿಗೆ ವಹಿಸುವ ಸಾಧ್ಯತೆ ಇದೆ. ಅಲ್ಲದೆ ತಮ್ಮ ಎರಡನೇ ಪ್ರಾಶಸ್ತ್ಯದ ಮತಗಳನ್ನು ಲೆಹರ್‌ ಸಿಂಗ್‌ ಅವರಿಗೆ ಕಡ್ಡಾಯವಾಗಿ ಹಾಕಲು ಎಲ್ಲ ಶಾಸಕರಿಗೂ ಸೂಚನೆ ನೀಡುವ ಸಾಧ್ಯತೆ ಇದೆ.

ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಬುಧ ವಾರ ಪಕ್ಷದ ಶಾಸಕಾಂಗ ಸಭೆ ಕರೆಯ ಲಾಗಿದೆ. ಆ ಸಭೆಯಲ್ಲಿ ಪಕ್ಷದ ಮೂವರೂ ಅಭ್ಯರ್ಥಿಗಳನ್ನು ಗೆಲ್ಲಿಸಿ ಕೊಂಡು ಬರುವ ಕುರಿತು ಚರ್ಚಿಸ ಲಾಗುತ್ತದೆ.
– ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ.

ರಾಜ್ಯಸಭೆ ಚುನಾವಣೆಯ ದಿನ ಶಾಸಕರು ತಮ್ಮ ಆತ್ಮಸಾಕ್ಷಿಯ ಮತವನ್ನು ಕಾಂಗ್ರೆಸ್‌ನ ಎರಡನೇ ಅಭ್ಯರ್ಥಿಗೆ ನೀಡಬೇಕು ಎಂದು ಮನವಿ ಮಾಡಿ ಕೊಳ್ಳುತ್ತೇನೆ. ಅವರಿಗೆ ಬೇರೆ ಸಂದರ್ಭಗಳಲ್ಲಿ ಸಾಕಷ್ಟು ಸಹಾಯ ಮಾಡಿದ್ದೇವೆ. ಹೀಗಾಗಿ ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿಗೆ ನಿಮ್ಮ ಮತವನ್ನು ನೀಡಿ. ಯಾರೆಲ್ಲ ಜಾತ್ಯತೀತ ತತ್ವದಲ್ಲಿ ನಂಬಿಕೆ ಇಟ್ಟಿದ್ದೀರೋ ಅವರು ಕಾಂಗ್ರೆಸ್‌ಗೆ ಮತ ನೀಡಿ.
-ಡಿ.ಕೆ. ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next