ಬೆಳಗಾವಿ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಒಡಕು ಹುಟ್ಟಿಸುವ ಧ್ವನಿಯ ಬಗ್ಗೆ ಜನರು ನಿರ್ಲಕ್ಷ್ಯ ವಹಿಸಿ ಕಸದ ಬುಟ್ಟಿಗೆ ಹಾಕಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಅಧ್ಯಕ್ಷ ಡಾ. ಮನು ಬಳಿಗಾರ ಹೇಳಿದರು.
ಕಾಗವಾಡದದಲ್ಲಿ ಡಾ. ಪ್ರಭಾಕರ ಕೋರೆ ಸರ್ವಾಧ್ಯಕ್ಷತೆಯಲ್ಲಿ ಹಮ್ಮಿಕೊಂಡಿರುವ 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡಿ, ಕರ್ನಾಟಕದವರನ್ನು ಕೆಣಕಿದರೆ ಮಲಗಿದ ಸಿಂಹವನ್ನು ಎಚ್ಚರಿಸಿದಂತೆ. ಹೀಗಾಗಿ ಮಲಗಿದ ಸಿಂಹದ ಮೀಸೆ ಎಳೆದು ಕೆಣಕುವ ಕೆಲಸ ಮಹಾರಾಷ್ಟ್ರದ ನಾಯಕರು ಮಾಡಬಾರದು ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ:ಕೆಂಪು ಕೋಟೆಯಲ್ಲಿ ಬಾವುಟ ಹಾರಿಸಿದ್ದು ಬಿಜೆಪಿ ಕಾರ್ಯಕರ್ತರೇ: ಐವನ್ ಡಿಸೋಜ
ರಾಜಕಾರಣಕ್ಕಾಗಿ ಅವಿವೇಕಿತನದ ಹೇಳಿಕೆ ಕೊಡುತ್ತಿರುವವರಿಗೆ ಜನರು ತೋರಿಸಿ ಕೊಟ್ಟಿದ್ದಾರೆ. ಜನರಿಗೆ ಭಾಷೆಯ ಮಹತ್ವ ಗೊತ್ತಿದೆ. ಇದು ಅಖಂಡ ಭಾರತವಾಗಿ ಉಳಿಯಬೇಕು. ಕರ್ನಾಟಕ- ಮಹಾರಾಷ್ಟ್ರ ಜನರು ಸೌಹಾರ್ದತೆಯಿಂದ ಇರುವಾಗ ಕೆಲವರು ಇಂಥ ಅವಿವೇಕಿತನದ ಹೇಳಿಕೆಗಳನ್ನು ಜನರು ನಿರ್ಲಕ್ಷಿಸುತ್ತಿದ್ದಾರೆ ಎಂದರು.
ಪರರ ವಿಚಾರಗಳ ಬಗ್ಗೆ ಮನ್ನಣೆ ನೀಡಬೇಕು ಎಂಬುದನ್ನು ನಮ್ಮ ಕರ್ನಾಟಕ ಸಾವಿರಾರು ವರ್ಷಗಳಿಂದ ಕಲಿಸಿ ಕೊಟ್ಟಿದೆ. ಸೌಹಾರ್ದಯುತವಾಗಿ ಬದುಕು ಕಟ್ಟಿಕೊಂಡಿರುವ ನಾಡು ನಮ್ಮ ಕರ್ನಾಟಕ. ಭಾಷೆಯ ಮೆರಗು ತಿಳಿದುಕೊಂಡರೆ ಸೌಹಾರ್ದತೆ ಹೆಚ್ಚಾಗುತ್ತದೆ ಎಂದು ಸಲಹೆ ನೀಡಿದರು