ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಯತಿಕುಲ ತಿಲಕ ಶ್ರೀ ಗುರುಸಾರ್ವಭೌಮರ 350ನೇ ಆರಾಧನೆ ಮಹೋತ್ಸವ ಕೊರೊನಾ ಕರಿಛಾಯೆ ಮಧ್ಯೆಯೂ ಅದ್ಧೂರಿಯಿಂದ ನೆರವೇರಿತು. ಸಪ್ತರಾತ್ರೋತ್ಸವದ ಉತ್ತರಾರಾಧನೆ ದಿನವಾದ ಬುಧವಾರ ಮಠದಲ್ಲಿ ವಸಂತೋತ್ಸವ, ಪ್ರಹ್ಲಾದ ರಾಜರ ಉತ್ಸವ, ಮಹಾರಥೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಎಂದಿನ ಸಂಭ್ರಮದಂತೆಯೇ ನಡೆದವು.
ಶ್ರೀ ಮಠದಲ್ಲಿ ಬೆಳಗ್ಗೆ ನಿರ್ಮಾಲ್ಯ ವಿಸರ್ಜನೆ, ಗ್ರಂಥಗಳ ಪಾರಾಯಣ, ಪ್ರವಚನ, ದಾಸವಾಣಿ ಜರುಗಿದವು. ರಾಯರ ಮೂಲ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ವಿವಿಧ ಬಗೆಯ ಹೂವುಗಳಿಂದ ವಿಶೇಷ ಅಲಂಕಾರ ಸೇವೆ ನಡೆಯಿತು. ಶ್ರೀಮಠದ ಪೀಠಾಧಿ ಪತಿ ಡಾ| ಸುಬುಧೇಂದ್ರ ತೀರ್ಥರಿಂದ ಶ್ರೀ ರಘುಪತಿ ವೇದವಾಸ್ಯ ದೇವರಿಗೆ ವಿಶೇಷ ಪೂಜೆ, ಹಸ್ತೋದಕ ಸಮರ್ಪಣೆ, ಮಹಾಮಂಗಳಾರತಿ ಸೇವೆ ನೆರವೇರಿಸಿದರು.
ರಥೋತ್ಸವ ಹಿನ್ನೆಲೆಯಲ್ಲಿ ಪ್ರಹ್ಲಾದ ರಾಜರ ಉತ್ಸವ ಮೂರ್ತಿ ಮೆರವಣಿಗೆ ಜರುಗಿತು. ಗುರುಸಾರ್ವಭೌಮ ವಿದ್ಯಾಪೀಠದಲ್ಲಿ ಸುವರ್ಣ ಪಲ್ಲಕ್ಕಿಯಲ್ಲಿ ಪ್ರಹ್ಲಾದ ರಾಜರ ಉತ್ಸವ ಮೂರ್ತಿಯನ್ನಿರಿಸಿ ಮುಖ್ಯ ರಥ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ಬಳಿಕ ಸ್ವಾಮಿಗಳ ನೇತೃತ್ವದಲ್ಲಿ ರಾಯರ ಮೂಲ ಬೃಂದಾವನ ಪಕ್ಕದಲ್ಲಿರುವ ದಶಾವತಾರ ಮಂಟಪದಲ್ಲಿ ಪ್ರಹ್ಲಾದ ರಾಜರ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ಶ್ರೀಗಳು, ಚಾಮರ ಸೇವೆ ಮಾಡಿದರು. ಬಳಿಕ ಮಹಾಮಂಗಳಾರತಿ ಮಾಡಿ ವಸಂತೋತ್ಸವವಕ್ಕೆ ಚಾಲನೆ ನೀಡಿದರು.
ಶ್ರೀಗಳು ಮಠದ ಭಕ್ತರು, ಸಿಬ್ಬಂದಿಗೆ ಪಂಡಿತ, ವಿದ್ವಾಂಸರಿಗೆ ಗುಲಾಲು ಎರಚುವ ಮೂಲಕ ಓಕುಳಿ ಆಡಿದರು. ನಂತರ ಪ್ರಹ್ಲಾದ ರಾಜರ ಉತ್ಸವ ಮೂರ್ತಿ ಹೂಗಳಿಂದ ಅಲಂಕರಿಸಿದ್ದ ರಥದಲ್ಲಿರಿಸಲಾಯಿತು. ಈ ವೇಳೆ ಪೂಜೆ ಸಲ್ಲಿಸಿದ ಶ್ರೀಗಳು, ಅನುಗ್ರಹ ಸಂದೇಶ ನೀಡಿದ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ ಶ್ರೀಗಳು ರಥ ಹಾಗೂ ರಾಯರ ಮೂಲ ಬೃಂದಾವನ ಮೇಲಿನ ಕಳಶಗಳಿಗೆ ಪುಷ್ಪವೃಷ್ಟಿಗೈದರು. ಕರ್ನಾಟಕ, ಆಂಧ್ರ, ತೆಲಂಗಾಣ ಮಾತ್ರವಲ್ಲದೇ ವಿವಿಧೆಡೆಯಿಂದ ಆಗಮಿಸಿದ ಸಹಸ್ರಾರು ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು.