Advertisement

ಬೆಂಗಳೂರಲ್ಲೇ ದೇಶದ ದೊಡ್ಡ ಸಿರಿಧಾನ್ಯ ಮಾರುಕಟ್ಟೆ 

11:59 AM Apr 08, 2017 | Team Udayavani |

ಬೆಂಗಳೂರು: ಸಿರಿಧಾನ್ಯಗಳ ಮಾರಾಟದಲ್ಲಿ ಬೆಂಗಳೂರು ದೇಶದಲ್ಲೇ ಅತಿ ದೊಡ್ಡ ಮಾರುಕಟ್ಟೆಯಾಗಿದೆ ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.  ಮಲ್ಲೇಶ್ವರದ ಗ್ರೀನ್‌ಪಾಥ್‌ದಲ್ಲಿ ಶುಕ್ರವಾರ ಕೃಷಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ “ಸಾವಯವ ಮತ್ತು ಸಿರಿಧಾನ್ಯಗಳ ಮೂಲಕ ಉತ್ತಮ ಆರೋಗ್ಯ’ ಕುರಿತ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

Advertisement

ದೇಶಾದ್ಯಂತ 1,900 ಕೋಟಿ ರೂ. ಸಿರಿಧಾನ್ಯಗಳ ವಹಿವಾಟು ನಡೆಯುತ್ತದೆ. ಈ ಪೈಕಿ ಬೆಂಗಳೂರಿನಲ್ಲೇ 200 ಕೋಟಿ ರೂ. ಮಾರಾಟ ನಡೆಯುತ್ತದೆ ಎಂದು ಹೇಳಿದರು. ಸಿರಿಧಾನ್ಯಗಳ ಬಗ್ಗೆ ಇಂದು ಎಲ್ಲೆಡೆ ಜಾಗೃತಿ ಮೂಡುತ್ತಿದೆ. ಎರಡು ಸಾವಿರ ಕೋಟಿ ರೂ.ಗಳಷ್ಟು ಸಿರಿಧಾನ್ಯ ರಫ್ತಾಗುತ್ತಿದೆ ಎಂದು ತಿಳಿಸಿದರು. 

ಸಿರಿಧಾನ್ಯ ಬೆಳೆಯಲು ರೈತರ ಹಿಂದೇಟು: ಮಾರುಕಟ್ಟೆಯಲ್ಲಿ ಸಿರಿಧಾನ್ಯಗಳಿಗೆ ಬೇಡಿಕೆ ಇದೆ ಎಂದು ಮಾರಾಟಗಾರರು ಹೇಳುತ್ತಾರೆ. ಆದರೆ, ರೈತರು ಸಿರಿಧಾನ್ಯಗಳಿಗೆ ಬೇಡಿಕೆ ಕಡಿಮೆ ಎಂದು ಉತ್ಪಾದನೆಗೆ ಹಿಂದೇಟು ಹಾಕುತ್ತಿದ್ದಾರೆ. ಈ ಇಬ್ಬರ ನಡುವಿನ ಅಂತರವನ್ನು ಹೋಗಲಾಡಿಸಿ, ರೈತರ ಸಾವಯವ ಉತ್ಪನ್ನಗಳಿಗೆ ನೇರ ಮಾರುಕಟ್ಟೆ ಕಲ್ಪಿಸಲು ಗ್ರಾಮೀಣ ಮಟ್ಟದಲ್ಲಿ ಕ್ಲಸ್ಟರ್‌ಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ ಸಾವಯವ ರೈತರಾದವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದರು.  

ಏಪ್ರಿಲ್‌ ಕೊನೆಯ ವಾರದಲ್ಲಿ ನಡೆಯುವ ಬೃಹತ್‌ ರಾಷ್ಟ್ರೀಯ ಮಟ್ಟದ ಸಿರಿಧಾನ್ಯಗಳ ಮಾರಾಟ ಮೇಳವು ರಾಜ್ಯದಲ್ಲಿ ಸಿರಿಧಾನ್ಯ ಉತ್ಪಾದನೆ ಮತ್ತು ಮಾರಾಟಕ್ಕೆ ಉತ್ತಮ ವೇದಿಕೆ ಆಗಲಿದೆ. 65 ಕಂಪೆನಿಗಳು, 8-10 ರಾಜ್ಯಗಳು, 14 ಒಕ್ಕೂಟಗಳು, ನಗರದ ಸಿರಿಧಾನ್ಯ ಆಹಾರ ಪೂರೈಸುವ ರೆಸ್ಟೋರೆಂಟ್‌ಗಳು ಈಗಾಗಲೇ ನೋಂದಣಿ ಮಾಡಿಕೊಂಡಿವೆ ಎಂದು ತಿಳಿಸಿದರು. 

ಪರಿಸರ ಹಿತದೃಷ್ಟಿಯಿಂದಲೂ ಸಿರಿಧಾನ್ಯ ಅವಶ್ಯ: ರೈತರು ಮತ್ತು ಪರಿಸರ ಹಿತದೃಷ್ಟಿಯಿಂದಲೂ ಸಿರಿಧಾನ್ಯ ಹೆಚ್ಚು ಉಪಯುಕ್ತ. ಒಂದು ಕೆಜಿ ಅಕ್ಕಿ ಬೆಳೆಯಲು 4ರಿಂದ 5 ಸಾವಿರ ಲೀ. ನೀರು ಬೇಕಾಗುತ್ತದೆ. ಆದರೆ, ಸಿರಿಧಾನ್ಯ ಬೆಳೆಯಲು ಇದರ ಶೇ. 20ರಷ್ಟು ನೀರು ಸಾಕು. ಬರ ನಿರೋಧಕ ಶಕ್ತಿಯನ್ನೂ ಇವು ಒಳಗೊಂಡಿವೆ ಎಂದು ಹೇಳಿದರು. ಗ್ರೀನ್‌ ಪಾಥ್‌ ಸಂಸ್ಥಾಪಕ ಎಚ್‌.ಆರ್‌. ಜಯರಾಂ ಮಾತನಾಡಿ, ಸಿರಿಧಾನ್ಯ ಭವಿಷ್ಯದ ಆಹಾರ ಆಗಿದೆ. ಆದ್ದರಿಂದ ಈಗಿನಿಂದಲೇ ಜನಜಾಗೃತಿಗಾಗಿ ಆಂದೋಲನ ನಡೆಯಬೇಕಿದೆ ಎಂದರು. ಡಾ.ಸುಂದರವಳ್ಳಿ ಉಪಸ್ಥಿತರಿದ್ದರು. 

Advertisement

ಸಿರಿಧಾನ್ಯ ಓಟ    
ಸಿರಿಧಾನ್ಯಗಳ ಬಗ್ಗೆ ಜಾಗೃತಿ ಮೂಡಿಸಲು ಏಪ್ರಿಲ್‌ 16 ರಂದು ಬೆಳಗ್ಗೆ 6.30ಕ್ಕೆ ನಗರದ ಕಬ್ಬನ್‌ ಉದ್ಯಾನದಿಂದ “ಸಿರಿಧಾನ್ಯ ಓಟ’ ನಡೆಯಲಿದೆ. ಹೆಸರು ನೋಂದಾಯಿಸಲು www.organics/millets.in ಸಂಪರ್ಕಿಸಬಹುದು ಎಂದು ಕೃಷಿ ಇಲಾಖೆ ತಿಳಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next