Advertisement

POCO X7 5G; ಇದೀಗ ತಾನೆ ಬಿಡುಗಡೆಯಾದ ಫೋನ್ ನಲ್ಲಿ ಏನೇನಿದೆ?

08:48 PM Jan 10, 2025 | Team Udayavani |

ಈ ಜನವರಿ ತಿಂಗಳು ಮೊಬೈಲ್ ಫೋನ್ ಪ್ರೇಮಿಗಳಿಗೆ ಸುಗ್ಗಿಯೋ ಸುಗ್ಗಿ. ಈ ವಾರ ಅನೇಕ ಹೊಸ ಫೋನ್ ಗಳನ್ನು ಕಂಪೆನಿಗಳು ಭಾರತದಲ್ಲಿ ಬಿಡುಗಡೆ ಮಾಡಿವೆ. ಕಡಿಮೆ ಬೆಲೆಯಲ್ಲಿ ಉತ್ತಮ ಸ್ಪೆಸಿಫಿಕೇಷನ್ ಗಳನ್ನು ನೀಡುವ ಮೂಲಕ ಗ್ರಾಹಕರಿಗೆ ಮಿತವ್ಯಯದ ದರದ ಫೋನ್ ಗಳನ್ನು ನೀಡುತ್ತಿರುವ ಪೋಕೋ ಕಂಪೆನಿ ಎಕ್ಸ್ 7 ಅನ್ನು ನಿನ್ನೆ ರಾತ್ರಿ ಬಿಡುಗಡೆ ಮಾಡಿದೆ. ಪೋಕೋ, ಶಿಯೋಮಿಯ ಸೋದರ ಬ್ರಾಂಡ್ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಈ ಫೋನಿನ ವೈಶಿಷ್ಟ್ಯಗಳೇನು? ಎಂಬುದರ ಮಾಹಿತಿ ಇಲ್ಲಿದೆ.

Advertisement

ಮೊದಲಿಗೆ ಈ ಫೋನಿನ ದರ ಇಂತಿದೆ: 8+128 ಜಿಬಿ-21,999 ರೂ., 8+256 ಜಿಬಿ 23,999 ರೂ. ಫ್ಲಿಪ್ಕಾರ್ಟ್ ನಲ್ಲಿ ಜ. 17 ರಿಂದ ದೊರಕಲಿದೆ.

ಪರದೆ ಮತ್ತು ವಿನ್ಯಾಸ
ಈ ಫೋನಿನ ಬೆಲೆ ಮಿತವ್ಯಯದ್ದಾದರೂ, ಇದರ ವಿನ್ಯಾಸ ಫ್ಲಾಗ್ ಶಿಪ್ ದರ್ಜೆಯ ಫೋನಿನನಂತಿದೆ. ಈ ಸೆಗ್ ಮೆಂಟಿನಲ್ಲಿ 1.5 ಕೆ ರೆಸ್ಯೂಲೇಷನ್, 3ಡಿ ಕರ್ವ್ಡ್ ಅಮೋಲೆಡ್ ಡಿಸ್ಪ್ಲೇ ಹೊಂದಿರುವ ಏಕೈಕ ಫೋನ್ ಆಗಿದೆ ಎಂದು ಕಂಪೆನಿ ತಿಳಿಸಿದೆ. ಅಲ್ಲದೇ 3000 ನಿಟ್ಸ್ ನಷ್ಟು ಹೆಚ್ಚು ಪ್ರಕಾಶಮಾನವುಳ್ಳ ಅಮೋಲೆಡ್ ಡಿಸ್ ಪ್ಲೇ ಕೂಡ ಇದರ ವಿಶೇಷಣವಾಗಿದೆ. ಇದರಿಂದಾಗಿ ಹೊರಾಂಗಣದಲ್ಲಿ ಬಿರು ಬಿಸಿಲಿದ್ದರೂ ಪರದೆಯನ್ನು ವೀಕ್ಷಿಸಬಹುದಾಗಿದೆ. ಬೆರಳು ತೇವ ಅಥವಾ ಎಣ್ಣೆಯಿಂದ ಕೂಡಿದ್ದರೂ, ಪರದೆ ಕಾರ್ಯನಿರ್ವಹಿಸಲು ವೆಟ್ ಟಚ್ 2.0 ಡಿಸ್ ಪ್ಲೇ ನೀಡಲಾಗಿದೆ. ಪರದೆಯ ಅಳತೆ 6.67 ಇಂಚಿದೆ. 120 ಹರ್ಟ್ಜ್ ರಿಫ್ರೆಶ್ ರೇಟ್ ಹೊಂದಿದೆ.

ಇಷ್ಟೇ ಅಲ್ಲದೇ ಐಪಿ 66 ಮತ್ತು ಐಪಿ 68, ಐಪಿ 69 ಮಾನದಂಡಗಳಿಗನುವಾಗಿ ಫೋನ್ ತಯಾರಿಸಲಾಗಿದ್ದು, ನೀರಿನ ಸಿಂಚನ ಮತ್ತು ಧೂಳು ನಿರೋಧಕವಾಗಿದೆ. ಪರದೆಯನ್ನು ಗೀರುಗಳಿಂದ ರಕ್ಷಿಸಲು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಅಳವಡಿಸಲಾಗಿದೆ. ಹೀಗಾಗಿ ಫೋನ್ ಪರದೆ ಸುಲಭಕ್ಕೆ ಒಡೆಯುವುದಿಲ್ಲ.

ಬಾಗಿದ ಪರದೆ ಕಾರಣ ಫೋನ್ ತುಂಬಾ ಸ್ಲಿಮ್ ಆಗಿದೆ. ಅಲ್ಲದೇ ಹೆಚ್ಚು ಬೆಲೆಯ ಫೋನ್ ಗಳನ್ನು ನೋಡಿದಂತಾಗುತ್ತದೆ. ಹಿಂಬದಿಯ ಕವಚ ಪಾಲಿಕಾರ್ಬೊನೆಟ್ ಆದರೂ ಸ್ಟೀಲ್ ನಂತೆ ವಿನ್ಯಾಸ ಮಾಡಲಾಗಿದೆ. ಹಿಂಬದಿ ಮೇಲ್ಭಾಗದ ಮಧ್ಯದಲ್ಲಿ ನಾಲ್ಕು ವೃತ್ತಾಕಾರದ ಕ್ಯಾಮರಾ ಲೆನ್ಸ್ ಇದೆ. ಎಡಬದಿ ಯಾವುದೇ ಬಟನ್ ಇಲ್ಲ. ಬಲಬದಿಯೇ ಆನ್ಆಫ್ ಮತ್ತು ಧ್ವನಿ ಹೆಚ್ಚು ಕಡಿಮೆ ಮಾಡುವ ಬಟನ್ ನೀಡಲಾಗಿದೆ. ತಳದಲ್ಲಿ ಸಿಮ್ ಟ್ರೇ, ಯುಎಸ್ಬಿ ಟೈಪ್ ಸಿ ಪೋರ್ಟ್, ಸ್ಪೀಕರ್ ಗ್ರಿಲ್ ನೀಡಲಾಗಿದೆ. ಫೋನ್ ಜೊತೆ ರಬ್ಬರೈಸ್ಡ್ ಕವರ್ ನೀಡಲಾಗಿದ್ದು ಫೋನ್ ರಕ್ಷಣೆಗೆ ಸಹಾಯಕವಾಗಿದೆ. ಒಟ್ಟಾರೆ ವಿನ್ಯಾಸಕ್ಕೆ ಉತ್ತಮ ಅಂಕ ನೀಡಬಹುದು.

Advertisement

ಕಾರ್ಯಾಚರಣೆ
ಇದರಲ್ಲಿ ಮೀಡಿಯಾಟೆಕ್ ಡೈಮೆನ್ಸಿಟಿ 7300 ಅಲ್ಟ್ರಾ 2.5 ಗಿ.ಹ. ಪ್ರೊಸೆಸರ್ ಇದೆ. ಇದು ಮಧ್ಯಮ ದರ್ಜೆಯ ವೇಗದ ಪ್ರೊಸೆಸರ್. ಇದು ಫ್ಲಾಗ್ಶಿಪ್ ದರ್ಜೆಯ ಐಎಸ್ಪಿ ತಂತ್ರಜ್ಞಾನ ಹೊಂದಿದ್ದು, ಸರಾಗವಾದ ಗೇಮಿಂಗ್ ಹಾಗೂ ಮಲ್ಟಿಟಾಸ್ಕಿಂಗ್ ಕೆಲಸ ನಿರ್ವಹಿಸುತ್ತದೆ. ಈ ದರ ಪಟ್ಟಿಯಲ್ಲಿ ಇದು ನಿರೀಕ್ಷೆಗಿಂತಲೂ ವೇಗವಾಗಿ ಕೆಲಸ ನಿರ್ವಹಿಸುತ್ತದೆ. ದೈನಂದಿನ ಬಳಕೆಗೆ ಆರಾಮವಾಗಿ ಕೆಲಸ ಮಾಡುತ್ತದೆ. ಶಿಯೋಮಿ ಹೈಪರ್ ಓಎಸ್ ಆಧಾರಿತ, ಆಂಡ್ರಾಯ್ಡ್ 14 ಕಾರ್ಯಾಚರಣೆ ಹೊಂದಿದೆ. ಕೆಲವು ಗೇಮ್ ಗಳು ಹಾಗೂ ಪ್ರೀ ಲೋಡೆಡ್ ಆಪ್ ಗಳನ್ನು ನೀಡಲಾಗಿದೆ. ಬೇಡವಾದರೆ ಅವುಗಳನ್ನು ಡಿಲೀಟ್ ಮಾಡಬಹುದು. ಇಂಟರ್ ಫೇಸ್ ನೀಟಾಗಿದೆ.

ಕ್ಯಾಮರಾ
ಇದರಲ್ಲಿ 50 ಮೆ.ಪಿ. ಸೋನಿ ಎಲ್ವೈಟಿ 600 ಪ್ರಾಥಮಿಕ ಕೆಮರಾ ಇದೆ. ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಷನ್ ಹೊಂದಿದೆ. ಮಂದ ಬೆಳಕಿನಲ್ಲೂ ಉತ್ತಮ ಫೋಟೋ ಸೆರೆ ಹಿಡಿಯುತ್ತದೆ. 8 ಮೆ.ಪಿ. ಅಲ್ಟ್ರಾವೈಡ್ ಲೆನ್ಸ್, 20 ಮೆ.ಪಿ. ಎಐ ಸೆಲ್ಫಿ ಕ್ಯಾಮರಾ ಇದೆ. ಹೊರಾಂಗಣ ಹಾಗೂ ಒಳಾಂಗಣ ಫೋಟೋಗಳು ಈ ಬಜೆಟ್ ದರದ ಫೋನ್ ಗಳಿಗೆ ಹೋಲಿಸಿದಾಗ ಚೆನ್ನಾಗಿ ಮೂಡಿಬರುತ್ತವೆ.

ಬ್ಯಾಟರಿ
ಇದರಲ್ಲಿ 5500 ಎಂಎಎಚ್ ಬ್ಯಾಟರಿ ಇದೆ. ಇದರ ಜೊತೆ 45 ವ್ಯಾಟ್ಸ್ ವೇಗದ ಚಾರ್ಜರ್ ನೀಡಲಾಗಿದೆ. ಕೆಲವು ಬ್ರಾಂಡ್ ಫೋನ್ ಗಳಲ್ಲಿ ಈಗ ಚಾರ್ಜರ್ ನೀಡುವುದಿಲ್ಲ. ಇದರ ಜೊತೆ ಚಾರ್ಜರ್ ಇರುವುದರಿಂದ ಪ್ರತ್ಯೇಕವಾಗಿ ಮತ್ತೆ ಹೆಚ್ಚುವರಿ ಹಣ ತೆರುವ ಪ್ರಮೇಯ ಇಲ್ಲ. ಬ್ಯಾಟರಿ ಹೆವಿ ಯೂಸ್ ಗೆ ಒಂದು ದಿನ, ಸಾಮಾನ್ಯ ಬಳಕೆಗೆ ಎರಡು ದಿನ ಬಾಳಿಕೆ ಬರುತ್ತದೆ.

ಪೋಕೋ ಎಕ್ಸ್ 7 5ಜಿ ಫೋನ್ ನೀಡುವ ದರಕ್ಕೆ ಮೌಲ್ಯ ನೀಡುವ ಒಂದೊಳ್ಳೆಯ ಫೋನ್ ಎನ್ನಬಹುದು.

-ಕೆ.ಎಸ್. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next