ಮಹದೇವಪುರ: ವೈಟ್‌ಫೀಲ್ಡ್‌ನ ಇಸಿಸಿ ರಸ್ತೆಯಲ್ಲಿರುವ ಜತ್ತಿ ದ್ವಾರಕಾಮಾಯಿ ವಿಲ್ಲಾದಲ್ಲಿ ಮ್ಯಾನ್‌ಹೋಲ್ ಸ್ವಚ್ಚಗೊಳಿಸಲು ಹೋಗಿ ಕಾರ್ಮಿಕ ಸಾವನ್ನಪ್ಪಿದ ಸ್ಥಳಕ್ಕೆ, ರಾಜ್ಯ ಸಪಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಆರ್.ವೆಂಕಟೇಶ್ ಶುಕ್ರವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ದುರಂತದ ಬಗ್ಗೆ ಕಾರ್ಮಿಕರಿಂದ ಮಾಹಿತಿ ಪಡೆದರು. ನಂತರ ಮಾತನಾಡಿದ ಅವರು “ಮಲ ಹೊರುವ ಅನಿಷ್ಟ ಪದ್ಧತಿ 30 ವರ್ಷಗಳ ಹಿಂದೆಯೇ ನಿಷೇಧಿಸಲಾಗಿದೆ. ಆದರೂ ಇನ್ನೂ ಇಂಥ ಪದ್ದತಿಗಳು ಜೀವಂತವಾಗಿರುವುದು ವಿಷಾದನೀಯ,’ ಎಂದರು.
ಮ್ಯಾನ್‌ಹೋಲ್ ದುರಂತ ಗಂಭೀರ ಅಪರಾಧವಾಗಿದೆ. ಮಲ ಹೊರಲು ಪ್ರೇರಣೆ ನೀಡಿದ ಗುತ್ತಿಗೆದಾರ ಮುರಳಿ ಮತ್ತು ದುರಂತಕ್ಕೆ ಕಾರಣರಾಗಿರುವ ವಿಲ್ಲಾ ಮಾಲೀಕರು ಸೇರಿದಂತೆ ಸಂಬಂಧಪಟ್ಟವರ ವಿರುದ್ಧ ಎಸ್.ಸಿ ಮತ್ತು ಎಸ್.ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗುವುದು.
ಮೃತ ಪೃಥ್ವಿರಾಜ್ ಕುಟುಂಬಕ್ಕೆ 10ಲಕ್ಷ ಪರಿಹಾರ ಮತ್ತು ಅಟ್ರಾಸಿಟಿ ಕಾಯ್ದೆಯಡಿ 8.5 ಲಕ್ಷ ಸೇರಿ ಒಟ್ಟು 18.5 ಲಕ್ಷ ಸಹಾಯ ಧನ ಹಾಗೂ ಸರ್ಕಾರಿ ಉದ್ಯೋಗ ಕೊಡಿಸಲಾಗುತ್ತೆ. ಅಪಾಯದಿಂದ ಪಾರಾದ ರಾಜು ಮತ್ತು ದಿನೇಶ್‌ರಿಗೂ ಚಿಕಿತ್ಸಾ ವೆಚ್ಚ ಭರಿಸಲಾಗುತ್ತದೆ ಎಂದು ತಿಳಿಸಿದರು.
ಈ ನಡುವೆ ಮ್ಯಾನ್‌ಹೋಲ್ ದುರಂತದಿಂದ ಮೃತಪಟ್ಟ ಪೃಥ್ವಿರಾಜ್ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಮತ್ತು ಅಪಾಯದಿಂದ ಪಾರಾದವರಿಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕೆಂದು ಡಿಎಸ್‌ಎಸ್ ಸಂಘಟನೆಯ ಕಾರ್ಯಕರ್ತರು ವರ್ತೂರು ಕೊಡಿ ಸಮೀಪವಿರುವ ಕೊಲಂಬಿಯಾ ಏಷ್ಯ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದರು.
ಪಾಲಿಕೆ ಸದಸ್ಯ ಎಸ್.ಮುನಿಸ್ವಾಮಿ, ಜಂಟಿ ಅಯುಕ್ತೆ ವಾಸಂತಿ ಅಮರ್, ರಾಜ್ಯ ಸಪಾಯಿ ಕರ್ಮಚಾರಿ ಆಯೋಗದ ಕಾರ್ಯದರ್ಶಿ ನಟರಾಜ್. ಸಮಾಜಕಲ್ಯಾಣ ಸಹಯಾಕ ನಿರ್ದೇಶಕಿ ಸಿಂದು, ಡಿಎಸ್‌ಎಸ್ ಅಂಬೇಡ್ಕರ್‌ವಾದ ಬೆಂ.ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಪಿ.ಎಂ ಚಿನ್ನಸ್ವಾಮಿ ಈ ವೇಳೆ ಹಾಜರಿದ್ದರು.