ಕೋಲ್ಕತ್ತಾ: ಟೀಂ ಇಂಡಿಯಾದಲ್ಲಿ ಆಡಿದ್ದ, ಪಶ್ವಿಮ ಬಂಗಾಳದ ಹಿರಿಯ ಆಟಗಾರ ಮನೋಜ್ ತಿವಾರಿ ಅವರು ಎಲ್ಲಾ ಮಾದರಿ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಭಾರತ ತಂಡದಲ್ಲಿ 2015ರಲ್ಲಿ ಕೊನೆಯದಾಗಿ ಆಡಿದ್ದ 37 ವರ್ಷದ ಮನೋಜ್ ತಿವಾರಿ ದೇಶಿಯ ಕ್ರಿಕೆಟ್ ನಲ್ಲಿ ಬಂಗಾಳ ಕ್ರಿಕೆಟ್ ಪರ ಹಲವು ಸಾಧನೆ ಮಾಡಿದ್ದಾರೆ.
ಮನೋಜ್ ತಿವಾರಿ ಅವರು 2008 ಮತ್ತು 2015 ರ ನಡುವೆ ಭಾರತ ತಂಡದ ಪರ 12 ಏಕದಿನ ಮತ್ತು ಮೂರು ಟಿ20 ಪಂದ್ಯಗಳನ್ನು ಆಡಿದ್ದಾರೆ. ಏಕದಿನ ಮಾದರಿಯಲ್ಲಿ ಒಂದು ಶತಕ ಬಾರಿಸಿದ್ದಾರೆ.
“ಕ್ರಿಕೆಟ್ ಆಟಕ್ಕೆ ವಿದಾಯ. ಈ ಆಟವು ನನಗೆ ಎಲ್ಲವನ್ನೂ ನೀಡಿದೆ, ಅಂದರೆ ನಾನು ಕನಸು ಕಾಣದ ಪ್ರತಿಯೊಂದು ನೀಡಿದೆ. ಈ ಆಟಕ್ಕೆ ಮತ್ತು ದೇವರಿಗೆ ನಾನು ಯಾವಾಗಲೂ ಕೃತಜ್ಞನಾಗಿರುತ್ತೇನೆ ” ಎಂದು ತಿವಾರಿ ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ತಿವಾರಿ ಅವರು 2007-08ರ ಕಾಮನ್ ವೆಲ್ತ್ ಬ್ಯಾಂಕ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ದ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದರು. ನಂತರ 2011 ರ ವೆಸ್ಟ್ ಇಂಡೀಸ್ ಪ್ರವಾಸಕ್ಕಾಗಿ ಯುವರಾಜ್ ಸಿಂಗ್ ಅವರ ಬದಲಿಯಾಗಿ ಭಾರತೀಯ ತಂಡದಲ್ಲಿ ಅವರನ್ನು ಸೇರಿಸಲಾಯಿತು. ವೆಸ್ಟ್ ಇಂಡೀಸ್ ವಿರುದ್ಧದ ಐದನೇ ಏಕದಿನ ಪಂದ್ಯದಲ್ಲಿ ಚೊಚ್ಚಲ ಶತಕವನ್ನು ಗಳಿಸಿದರೂ, ಈ ಸಾಧನೆಯ ನಂತರ ಅವರು 14 ಸತತ ಪಂದ್ಯಗಳಲ್ಲಿ ಅವರು ಬೆಂಚ್ ಕಾಯಬೇಕಾಯಿತು. ಬಳಿಕ ಆಗಾಗ ರಾಷ್ಟ್ರೀಯ ತಂಡದ ಕರೆ ಪಡೆದರೂ ಆಡುವ ಬಳಗದಲ್ಲಿ ಆಯ್ಕೆಯಾಗುತ್ತಿರಲಿಲ್ಲ.
ಮನೋಜ್ ತಿವಾರಿ ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಡೆಲ್ಲಿ ಡೇರ್‌ಡೆವಿಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಗಾಗಿ ಆಡಿದ್ದಾರೆ.
119 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯವಾಡಿರುವ ತಿವಾರಿ 51.78ರ ಸರಾಸರಿಯಲ್ಲಿ 8752 ರನ್ ಗಳಿಸಿದ್ದಾರೆ. ಈ ಮಾದರಿಯಲ್ಲಿ ಅವರು 27 ಶತಕ ಮತ್ತು 35 ಅರ್ಧಶತಕ ಬಾರಿಸಿದ್ದಾರೆ. ಲಿಸ್ಟ್ ಎ ಮಾದರಿಯಲ್ಲಿ 163 ಪಂದ್ಯಗಳಲ್ಲಿ 42.37ರ ಸರಾಸರಿಯಲ್ಲಿ ಅವರು 5466 ರನ್ ಗಳಿಸಿದ್ದಾರೆ.