ಕಾಳಗಿ: ಕಲೆ, ಸಂಸ್ಕೃತಿ, ಐತಿಹಾಸಿಕ ಶಿಲ್ಪಕಲೆ ಹೊಂದಿರುವ ಕಾಳಗಿ ಇತಿಹಾಸ ನಾಡಿನಲ್ಲೆಡೆ ಪ್ರಸಾರ ಮಾಡುವ ಉದ್ದೇಶದಿಂದ ನವೆಂಬರ್ ತಿಂಗಳಿನಲ್ಲಿ “ಮನ್ನೆದೆಡಿ ಸಾಸಿರ ನಾಡು ಉತ್ಸವ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹೇಳಿದರು.
ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ “ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ’ ಪ್ರಯುಕ್ತ ಶನಿವಾರ ಏರ್ಪಡಿಸಿದ್ದ “ಕಲ್ಯಾಣ ಶಿಕ್ಷಣ’ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಾಹಿತ್ಯ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಅಭಿರುಚಿ ಕುಂಠಿತಗೊಳ್ಳುತ್ತಿದೆ. ಆದ್ದರಿಂದ ಕಸಾಪದಿಂದ ನಿತ್ಯ ನೂತನ ಕಾರ್ಯಕ್ರಮ ಹಮ್ಮಿಕೊಂಡು ತಾಲೂಕನ್ನು ಸಾಂಸ್ಕೃತಿಕ ಕ್ಷೇತ್ರವನ್ನಾಗಿ ಪರಿವರ್ತಿಸುವ ಕಾರ್ಯ ಮಾಡುತ್ತೇವೆ ಎಂದರು.
ಉಪನ್ಯಾಸ ನೀಡಿದ ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ|ಶಿವಶರಣಪ್ಪ ಮೋತಕಪಲ್ಲಿ, ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆ ಜತೆಗೆ ಉತ್ತಮ ಸಂಸ್ಕಾರ ಬೆಳೆಸಿಕೊಂಡು ಕಲ್ಯಾಣ ರಾಜ್ಯದ ನಿರ್ಮಾಣಕ್ಕೆ ಮುಂದಾಗಬೇಕು ಎಂದರು. ತಾಲೂಕು ಕಸಾಪ ಅಧ್ಯಕ್ಷ ಸಂತೋಷ ಕುಡಳ್ಳಿ ಪ್ರಾಸ್ತಾವಿಕ ಮಾತನಾಡಿ, ಈ ನೆಲದ ಇತಿಹಾಸ, ಪರಂಪರೆ ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗುವ ಕಾರ್ಯ ಮಾಡುತ್ತೇನೆ ಎಂದು ಹೇಳಿದರು.
ಜಿಲ್ಲಾ ಉತ್ತಮ ಪ್ರಶಸ್ತಿ ಪುರಸ್ಕೃತ ಶಿಕ್ಷಕರು, ನಿವೃತ್ತ ಶಿಕ್ಷಕರು, ಸಾಹಿತಿಗಳನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಚಾರ್ಯ ಎಸ್. ಎಂ.ಬೋನಾಳ, ಪತ್ರಕರ್ತ ಸೂರ್ಯಕಾಂತ ಕಟ್ಟಿಮನಿ, ಗ್ರಾಪಂ ಮಾಜಿ ಅಧ್ಯಕ್ಷ ಪರಮೇಶ್ವರ ಮಡಿವಾಳ, ಕನ್ನಡಪರ ಹೋರಾಟಗಾರ ಬಾಬು ನಾಟೀಕಾರ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ, ಸಂಘಟನಾ ಕಾರ್ಯದರ್ಶಿ ರವೀಂದ್ರಕುಮಾರ ಭಂಟನಳ್ಳಿ, ಉಪನ್ಯಾಸಕ ಸುಭಾಷ ಶೀಲವಂತ ಮಾತನಾಡಿದರು.
ನಿವೃತ್ತ ಶಿಕ್ಷಕ ಗುಡುಸಾಬ್ ಕಮಲಾಪೂರ, ನಾಗಪ್ಪ ಬೀದಿಮನಿ, ತಿಪ್ಪಣ್ಣ ಸಿರಿಮನಿ, ಖಾಜಾ ಮಾಸ್ಟರ್, ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ರಾಜೇಶ ನಾಗೂರೆ, ಸಂಗೀತಾ ಜಾಂತೆ, ಕೀರ್ತನಕಾರ ಶಾಮರಾವ ಕಡಬೂರ, ಶಿಕ್ಷಕ ಗುಂಡೇರಾವ್ ಮಂಗಲಗಿ, ಶೌಕತಲಿ ನಾವದೀಕರ್, ಗಣೇಶ ಚಿನ್ನಕಾರ, ಯಲ್ಲಾಲಿಂಗ ಪಾಟೀಲ, ಸತೀಶ್ಚಂದ್ರ ಸುಲೇಪೇಟ, ಶ್ರೀಕಾಂತ ಕದಂ ಇದ್ದರು.