ನವದೆಹಲಿ: ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಪೂರ್ವಜರ ಗ್ರಾಮವಾದ ಖಟ್ಕರ್ ಕಲಾನ್‌ನಲ್ಲಿ ಮಾರ್ಚ್ 16 ರಂದು ಪಂಜಾಬ್ ಮುಖ್ಯಮಂತ್ರಿಯಾಗಿ ಭಗವಂತ್ ಮಾನ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಪಕ್ಷದ ಮೂಲಗಳು ಶುಕ್ರವಾರ ತಿಳಿಸಿವೆ.
ಮಾನ್ ಅವರು ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿಯಾದ ನಂತರ ಪಕ್ಷ ಈ ಬಗ್ಗೆ ತಿಳಿಸಿದೆ.
ಮಾರ್ಚ್ 13 ರಂದು ಪಕ್ಷವು ಅಮೃತಸರದಲ್ಲಿ ರೋಡ್ ಶೋ ನಡೆಸಲಿದೆ. ಎರಡೂ ಕಾರ್ಯಕ್ರಮಗಳಲ್ಲಿ ಕೇಜ್ರಿವಾಲ್ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಪಂಜಾಬ್‌ನ ರಾಜಕೀಯ ವ್ಯವಹಾರಗಳ ಎಎಪಿ ಉಸ್ತುವಾರಿ ರಾಘವ್ ಚಡ್ಡಾ ಕೂಡ ಭಾಗವಹಿಸಿದ್ದರು.ಬಳಿಕ ಮಾನ್ ಪಂಜಾಬ್ ಗೆ ಮರಳಿದರು.
”ನನ್ನ ಕಿರಿಯ ಸಹೋದರ ಭಗವಂತ್ ಮಾನ್ ಪಂಜಾಬ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇಂದು ಅವರು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನ ನೀಡಲು ನನ್ನ ಮನೆಗೆ ಬಂದಿದ್ದರು. ಮುಖ್ಯಮಂತ್ರಿಯಾಗಿ ಭಗವಂತ್ ಅವರು ಪಂಜಾಬ್ ಜನತೆಯ ಎಲ್ಲ ನಿರೀಕ್ಷೆಗಳನ್ನು ಈಡೇರಿಸುತ್ತಾರೆ ಎಂದು ನನಗೆ ಖಾತ್ರಿಯಿದೆ ಎಂದು ಕೇಜ್ರಿವಾಲ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಆತ್ಮೀಯ ಅಪ್ಪುಗೆಯ ಚಿತ್ರವನ್ನೂ ಹಂಚಿಕೊಂಡಿದ್ದಾರೆ.
ಆಮ್ ಆದ್ಮಿ ಪಕ್ಷವು 117 ವಿಧಾನಸಭಾ ಸ್ಥಾನಗಳ ಪೈಕಿ 92 ರಲ್ಲಿ ದಾಖಲೆಯ ಗೆಲುವು ಸಾಧಿಸಿದೆ. ಮಾನ್ ಅವರು ಧುರಿ ಕ್ಷೇತ್ರದಿಂದ 58,206 ಮತಗಳ ಭಾರೀ ಅಂತರದ ಗೆಲುವು ಸಾಧಿಸಿದ್ದಾರೆ.