ಹೊಸದಿಲ್ಲಿ:ಮಸಾಲೆಯುಕ್ತ ಅಥವಾ ನಕಾರಾತ್ಮಕ ಸಂಭಾಷಣೆಗಳು ಮಾತ್ರ ಹೆಚ್ಚು ಗಮನ ಸೆಳೆಯುತ್ತವೆ ಎಂಬ ನಂಬಿಕೆಗೆ ವಿರುದ್ಧವಾಗಿ ‘ಮನ್ ಕಿ ಬಾತ್’ 10 ವರ್ಷಗಳನ್ನು ಪೂರೈಸುತ್ತಿದೆ. ಜನರು ಸಕಾರಾತ್ಮಕ ಕಥೆಗಳು ಮತ್ತು ಸ್ಪೂರ್ತಿದಾಯಕ ಉದಾಹರಣೆಗಳನ್ನು ಇಷ್ಟಪಡುತ್ತಾರೆ ಎಂಬುದನ್ನು ಮಾಸಿಕ ರೇಡಿಯೋ ಕಾರ್ಯಕ್ರಮ ಸಾಬೀತುಪಡಿಸಿದೆ ‘ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.
ರವಿವಾರದ ಸಂಚಿಕೆಯಲ್ಲಿ ಮಾತನಾಡಿದ ಪ್ರಧಾನಿ ‘ಸಾಮಾಜಿಕ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾ, ದೇಶದ ವಿವಿಧ ಭಾಗಗಳಲ್ಲಿ ಜನರ ಪ್ರಯತ್ನಗಳನ್ನು ಎತ್ತಿ ತೋರಿಸಿದರು, ಇದು ಭಾವನಾತ್ಮಕ ಸಂಚಿಕೆ. ಕಾರ್ಯಕ್ರಮವು ಸ್ಫೂರ್ತಿ ತುಂಬುವ ವಿಶಿಷ್ಟ ವೇದಿಕೆಯಾಗಿದೆ. ರಾಷ್ಟ್ರದ ಸಾಮೂಹಿಕ ಶಕ್ತಿಯನ್ನು ಪ್ರದರ್ಶಿಸುತ್ತಿದೆ ಎಂದು ಹೇಳಿದರು.
ಇಂದಿನ ಈ ಸಂಚಿಕೆ ನನ್ನನ್ನು ಭಾವುಕರನ್ನಾಗಿಸಿದೆ. ಇದು ನನಗೆ ಬಹಳಷ್ಟು ಹಳೆಯ ನೆನಪುಗಳನ್ನು ತುಂಬುತ್ತಿದೆ…ಕಾರಣವೇನೆಂದರೆ, ‘ಮನ್ ಕಿ ಬಾತ್’ ನಲ್ಲಿನ ನಮ್ಮ ಪ್ರಯಾಣ 10 ವರ್ಷಗಳನ್ನು ಪೂರೈಸುತ್ತಿದೆ. 10 ವರ್ಷಗಳ ಹಿಂದೆ ಅಕ್ಟೋಬರ್ 3 ರಂದು ವಿಜಯದಶಮಿ ದಿನದಂದು ‘ಮನ್ ಕಿ ಬಾತ್’ ಆರಂಭವಾಗಿತ್ತು ಎಂದು ಮೋದಿ ನೆನಪಿಸಿಕೊಂಡರು. ‘ಮನ್ ಕಿ ಬಾತ್’ ಕೇಳುಗರು ಈ ಕಾರ್ಯಕ್ರಮದ ನಿಜವಾದ ನಿರೂಪಕರು’ ಎಂದರು.
ಮೋದಿ ಅವರು ನೀರಿನ ಸಂರಕ್ಷಣೆಯ ಮಹತ್ವವನ್ನು ಎತ್ತಿ ಹೇಳಿದರು.ನೀರನ್ನು ಸಂರಕ್ಷಿಸಲು ಅನೇಕ ಜನರು ಹೊಸ ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಉತ್ತರ ಪ್ರದೇಶದ ಝಾನ್ಸಿಯಲ್ಲಿ ಮಹಿಳೆಯರ ಸಂಘಟನೆಯ ಕೆಲಸವನ್ನು ಉಲ್ಲೇಖಿಸಿದರು. ಕೆಲವು ಸ್ಥಳಗಳಲ್ಲಿ ಮಹಿಳಾ ಶಕ್ತಿಯು ನೀರಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಕೆಲವು ಸ್ಥಳಗಳಲ್ಲಿ ಜಲಶಕ್ತಿಯು ಮಹಿಳಾ ಶಕ್ತಿಯನ್ನು ಬಲಪಡಿಸುತ್ತದೆ” ಎಂದರು.
“ನನ್ನ ಅಮೆರಿಕ ಭೇಟಿಯ ವೇಳೆ ಅಲ್ಲಿನ ಸರಕಾರವು ಸುಮಾರು 300 ಪ್ರಾಚೀನ ಕಲಾಕೃತಿಗಳನ್ನು ಭಾರತಕ್ಕೆ ಹಿಂದಿರುಗಿಸಿದೆ. ಅಮೆರಿಕ ಅಧ್ಯಕ್ಷ ಬೈಡೆನ್, ಬಹಳ ಪ್ರೀತಿಯಿಂದ, ಅವರ ಖಾಸಗಿ ನಿವಾಸದಲ್ಲಿ ಈ ಕೆಲವು ಕಲಾಕೃತಿಗಳನ್ನು ನನಗೆ ತೋರಿಸಿದರು. ಮರಳಿದ ಕಲಾಕೃತಿಗಳನ್ನು ಟೆರಾಕೋಟಾ, ಕಲ್ಲು, ದಂತ, ಮರ, ತಾಮ್ರ ಮತ್ತು ಕಂಚಿನಂತಹ ವಸ್ತುಗಳಿಂದ ತಯಾರಿಸಲಾಗಿತ್ತು. ಇವುಗಳಲ್ಲಿ ಹಲವು ನಾಲ್ಕು ಸಾವಿರ ವರ್ಷಗಳಷ್ಟು ಹಳೆಯವು. 19 ನೇ ಶತಮಾನದಿಂದಲೂ ಹಳೆಯದಾದ 4000 ವರ್ಷಗಳ ಹಿಂದಿನ ಕಲಾಕೃತಿಗಳನ್ನು ಕೂಡ ಅಮೆರಿಕ ಹಿಂದಿರುಗಿಸಿದೆ. ಅವುಗಳಲ್ಲಿ ದೇವ- ದೇವತೆಗಳ ಫಲಕಗಳು, ಜೈನ ತೀರ್ಥಂಕರರ ಪ್ರತಿಮೆಗಳು, ಭಗವಾನ್ ಬುದ್ಧ ಮತ್ತು ಭಗವಾನ್ ಶ್ರೀ ಕೃಷ್ಣನ ಪ್ರತಿಮೆಗಳು, ಹಲವಾರು ಪ್ರಾಣಿಗಳ ಪ್ರತಿಮೆಗಳು ಸೇರಿವೆ ” ಎಂದು ಹೇಳಿದರು.
“ಅಕ್ಟೋಬರ್ 2 ರಂದು, ಸ್ವಚ್ಛ ಭಾರತ್ ಮಿಷನ್ 10 ವರ್ಷಗಳನ್ನು ಪೂರೈಸುತ್ತಿದೆ. ಇದನ್ನು ಜನಾಂದೋಲನವಾಗಿ ಪರಿವರ್ತಿಸಿದವರನ್ನು ಶ್ಲಾಘಿಸುವ ಸಂದರ್ಭವಿದು. ತಮ್ಮ ಇಡೀ ಜೀವನವನ್ನು ಈ ಉದ್ದೇಶಕ್ಕಾಗಿ ಮುಡಿಪಾಗಿಟ್ಟ ಮಹಾತ್ಮ ಗಾಂಧಿ ಅವರಿಗೆ ಸಲ್ಲಿಸುವ ಗೌರವ ಇದಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.