ನವದೆಹಲಿ:ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೆಚ್ಚಾಗಿ ವಿದೇಶ ಸುತ್ತಾಟದಲ್ಲಿಯೇ ಕಾಲ ಕಳೆಯುತ್ತಾರೆಂಬ ಆರೋಪಕ್ಕೆ ಪ್ರತಿಕ್ರಿಯೆ ಎಂಬಂತೆ, ಮೋದಿ ಅವರಿಗಿಂತ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರೇ ವಿದೇಶಗಳಿಗೆ ಹೆಚ್ಚು ಭೇಟಿ ನೀಡಿದ್ದಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತಿಳಿಸಿದ್ದಾರೆ.
ಆದರೆ ಒಂದೇ ಒಂದು ವ್ಯತ್ಯಾಸ ಏನೆಂದರೆ ಮನಮೋಹನ್ ಸಿಂಗ್ ಅವರ ವಿದೇಶ ಭೇಟಿಗಿಂತ ಪ್ರಧಾನಿ ಮೋದಿ ಅವರ ವಿದೇಶ ಪ್ರವಾಸಕ್ಕೆ ಹೆಚ್ಚು ಪ್ರಚಾರ ನೀಡಿವೆ ಎಂದರು.
ಪ್ರಧಾನಿ ಮೋದಿ ಅವರ ವಿದೇಶ ಪ್ರವಾಸದ ಬಗ್ಗೆ ವಿಪಕ್ಷಗಳು ಟೀಕಿಸುತ್ತಿವೆ. ಆದರೆ ಅಂಕಿ ಅಂಶದ ಪ್ರಕಾರ ಮನಮೋಹನ್ ಸಿಂಗ್ ಅವರು ಮೋದಿಜಿಗಿಂತ ಹೆಚ್ಚು ವಿದೇಶ ಪ್ರವಾಸ ಮಾಡಿದ್ದಾರೆ ಎಂದು ಶಾ ಹೇಳಿದರು.
ಮನಮೋಹನ್ ಸಿಂಗ್ ಅವರು ವಿದೇಶಕ್ಕೆ ಯಾವಾಗ ಹೋಗಿದ್ದರು, ಯಾವಾಗ ವಾಪಸ್ ಬಂದರು ಎಂಬುದು ಗೊತ್ತಾಗುತ್ತಿರಲಿಲ್ಲ ಎಂದ ಅಮಿತ್ ಶಾ, 2014ರಲ್ಲಿ ಮೋದಿ ಅವರು ಪ್ರಧಾನಿ ಗದ್ದುಗೆ ಏರಿದ ನಂತರ 56 ದೇಶಗಳಿಗೆ ಭೇಟಿ ನೀಡಿದ್ದಾರೆ. ಇದರಲ್ಲಿ ಅಮೆರಿಕ, ನೇಪಾಳ, ಜಪಾನ್, ರಷ್ಯಾ ಹಾಗೂ ಅಫ್ಘಾನಿಸ್ತಾನ ಮತ್ತು ಚೀನಾಕ್ಕೆ 2 ಬಾರಿ ಭೇಟಿ ನೀಡಿದ್ದಾರೆ.
ಮನಮೋಹನ್ ಸಿಂಗ್ ಅವರು 144 ದಿನಗಳ ಕಾಲ ವಿದೇಶ ಪ್ರವಾಸದಲ್ಲಿದ್ದರು. ಯುಪಿಎ ಮೊದಲ ಅವಧಿಯಲ್ಲಿ ಮನಮೋಹನ್ ಸಿಂಗ್ ಅವರು 35 ದೇಶಗಳಿಗೆ ಭೇಟಿ ಕೊಟ್ಟಿದ್ದರು, ಬಳಿಕ ಯುಪಿಎ 2ನೇ ಅವಧಿಯಲ್ಲಿ 38 ದೇಶಗಳಿಗೆ ಭೇಟಿ ಕೊಟ್ಟಿರುವುದಾಗಿ ಶಾ ಅಂಕಿಅಂಶದ ಮೂಲಕ ವಿವರಿಸಿದರು.