ಪೆರ್ಲ:ಸರಳವಾದ ಜೀವನ ಮತ್ತು ಮೌಲ್ಯಯುತ ಬರಹಗಳ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಅತ್ಯಮೂಲ್ಯ ಕೊಡುಗೆ ನೀಡಿದ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ ಬದುಕು-ಬರಹಗಳ ಮರು ಓದು ಇಂದಿಗೆ ಅಗತ್ಯವಿದೆ.
ಕರ್ಮಯೋಗಿಯಾಗಿ ಯಾವುದೇ ಆಡಂಬರ, ಪ್ರಶಸ್ತಿಗಳ ಹಿಂದೆ ಬೀಳದೆ ಬಹುಭಾಷೆಗಳ ಅಧ್ಯಯನ, ಸಂಶೋಧನೆಗಳಿಂದ ಸಾಹಿತ್ಯ ಕ್ಷೇತ್ರಕ್ಕೆ ಅವರು ನೀಡಿರುವ ಕೃತಿಗಳು ಎಂದಿಗೂ ಪ್ರಸ್ತುತವಾಗಿದೆ ಎಂದು ಕಾಸರಗೋಡು ಸರಕಾರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪೊ›.ಎ ಶ್ರೀನಾಥ್ ತಿಳಿಸಿದರು.
ಪೆರ್ಲದ ಕವಿ ಹೃದಯದ ಸವಿ ಮಿತ್ರರು ವೇದಿಕೆಯ ಆಶ್ರಯದಲ್ಲಿ ಪೆರ್ಲದ ವ್ಯಾಪಾರಿ ಭವನದಲ್ಲಿ ಶನಿವಾರ ಸಂಜೆ ಆಯೋಜಿಸಲಾಗಿದ್ದ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ 137ನೇ ಜನ್ಮ ದಿನಾಚರಣೆಯ ಕವಿ-ಸ್ಮರಣೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಪೃಥ್ವಿ ಶೆಟ್ಟಿ ಕಾಟುಕುಕ್ಕೆ ಅವರಿಗೆ ಪುಸ್ತಕ ನೀಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕಾಸರಗೋಡಿನ ಕನ್ನಡ ಅಸ್ಮಿತೆಯ ಬಗ್ಗೆ ತೀವ್ರ ಕಾಳಜಿ ವಹಿಸಿದ್ದ ಪೈಯವರು ಜೀವನ ಪೂರ್ತಿ ಕಾಸರಗೋಡು ಕರ್ನಾಟಕ ರಾಜ್ಯಕ್ಕೆ ಸೇರಬೇಕೆಂದು ಕೆಚ್ಚೆದೆಯಿಂದ ಪ್ರತಿಪಾದಿಸಿದ್ದರು. ಕನ್ನಡ ಸಾಹಿತ್ಯ ಲೋಕದ ಪ್ರಾಸಬದ್ದತೆಗೆ ಹೊರತಾದ ಸಾಹಿತ್ಯ ರಚನೆಯ ಮೂಲಕ ಹೊಸ ದಿಕ್ಕು ತೋರಿಸಿದವರು ಪೈಗಳಾಗಿದ್ದರು ಎಂದು ಅವರು ನೆನಪಿಸಿದರು. ಪೈಗಳ ವೈಶಾಖೀ, ಗೋಲ್ಗಥಾ ಮೊದಲಾದ ಸಂಕಲನಗಳು ಸಾರ್ವಕಾಲಿಕ ಮೌಲ್ಯಗಳೊಂದಿಗೆ ಪ್ರಸ್ತುತವಾಗಿದ್ದು ಯುವ ಮನಸ್ಸುಗಳಿಗೆ ಮತ್ತೆ ಅವುಗಳನ್ನು ತಲಪಿಸುವ ಯತ್ನಗಳಾಗಬೇಕು ಎಂದು ತಿಳಿಸಿದರು. ಹರೀಶ್ ಪೆರ್ಲ, ಶಿಕ್ಷಕ, ಸಮಾಜ ಸೇವಕ ಅಶ್ರಫ್ ಮರ್ತ್ಯ, ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಜಿಲ್ಲಾ ಪ್ರಮುಖ ಅಬ್ದುಲ್ ರಹಮಾನ್ ಪೆರ್ಲ, ಶಿಕ್ಷಕ ಶ್ರೀಧರ ಮಾಸ್ತರ್ ಕುಕ್ಕಿಲ ಉಪಸ್ಥಿತರಿದ್ದು ಮಾತನಾಡಿ ಗೋವಿಂದ ಪೈ ಅವರ ಸ್ಮರಣೆ ಮಾಡಿದರು.
ವಸಂತ ಬಾರಡ್ಕ ಗೋವಿಂದ ಪೈಗಳ ಕೃತಿಗಳ ಗಾಯನ ನಡೆಸಿದರು. ವೃಥ್ವಿ ಶೆಟ್ಟಿ.ಕಾಟುಕುಕ್ಕೆ, ಪ್ರದೀಪ್ ರಾಜ್ ವಾಟೆ, ಜ್ಯೋಸ್ಸಾ$° ಎಂ.ಕಡಂದೇಲು, ಪ್ರಭಾವತಿ ಕೆದಿಲಾಯ, ಡಾ.ಎಸ್.ಎನ್.ಭಟ್ ಪೆರ್ಲ, ರಿತೇಶ್ ಕಿರಣ್ ಕವನಗಳನ್ನು ವಾಚಿಸಿದರು.ಡಾ| ಎಸ್.ಎನ್.ಭಟ್ ಪೆರ್ಲ ಸ್ವಾಗತಿಸಿ,ರಿತೇಶ್ ಕಿರಣ್ ವಂದಿಸಿದರು. ಸುಭಾಶ್ ಪೆರ್ಲ ವಂದಿಸಿದರು.
ಬದುಕಿಗೆ ಮಾರ್ಗದರ್ಶಿ
ಅಧ್ಯಕ್ಷತೆ ವಹಿಸಿದ್ದ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಮಾತನಾಡಿ, ಕಾವ್ಯ ಮತ್ತು ಸಾಹಿತ್ಯಗಳು ಸಂಶೋಧನೆಯ ಶಿಖರಗಳಾಗಿವೆ. ಕಾಲಘಟ್ಟಗಳ ವಿವರ ನೀಡುವ ಅವುಗಳು ಬದುಕು, ಸಂಘರ್ಷ ಮತ್ತು ತುಳಿದ ದಾರಿಗಳ ಮಾರ್ಗವನ್ನು ಬಿಂಬಿಸುತ್ತದೆ ಎಂದು ತಿಳಿಸಿದರು. ಗೋವಿಂದ ಪೈ ಅವರ ಕಾವ್ಯ ಮೀಮಾಂಸೆ ರಾಷ್ಟ್ರದ ಸಮಗ್ರ ಸಾಹಿತ್ಯ ಚರಿತ್ರೆಯ ದಿಕ್ಸೂಚಿಯಾಗಿ ಎಲ್ಲಾ ಕಾಲದಲ್ಲೂ ಒಪ್ಪುವ-ಅಪ್ಪುವ ಬದುಕಿನ ಮಾರ್ಗದರ್ಶಿ ಎಂದು ತಿಳಿಸಿದರು