ಕಲಬುರಗಿ: ಲೈಂಗಿಕ-ಲಿಂಗತ್ವ ಅಲ್ಪಸಂಖ್ಯಾತರಿಗೆ ಸೇರಿದ ಸ್ನೇಹ ಸೊಸೈಟಿಯಲ್ಲಿ ಅವ್ಯವಹಾರ ಮಾಡಿದ್ದೇನೆ ಎಂದು ಸುಳ್ಳು ಆರೋಪ ಹೊರೆಸಿ ಮಾರಣಾಂತಿಕ ಹಲ್ಲೆ ನಡೆಸಿದ ಸಂಸ್ಥೆಯ ಅಧ್ಯಕ್ಷ ಸೇರಿ ಎಂಟು ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕೆಂದು ಸೊಸೈಟಿಯ ಕಾರ್ಯಕ್ರಮ ನಿರ್ದೇಶಕಿ, ಮಾಜಿ ಅಧ್ಯಕ್ಷೆ ಮನೀಷಾ ಚವ್ಹಾಣ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಲೈಂಗಿಕ-ಲಿಂಗತ್ವ ಅಲ್ಪಸಂಖ್ಯಾತರಲ್ಲಿ ಏಡ್ಸ್ ಜಾಗೃತಿಗಾಗಿ ಸ್ನೇಹ ಸೊಸೈಟಿ ಶ್ರಮಿಸುತ್ತಿದೆ. 2010ರಲ್ಲಿ ನೋಂದಣಿ ಆಗಿರುವ ಈ ಸಂಸ್ಥೆಗೆ 2016ರಿಂದ ಎಂಎಸ್‌ಎಂ ಕಾರ್ಯಕ್ರಮದಡಿ ಸರ್ಕಾರದಿಂದ ಹಣ ಬಿಡುಗಡೆಯಾಗುತ್ತಿದೆ. ಈ ಹಣವು ಸಂಸ್ಥೆಯಲ್ಲಿ ಕೆಲಸ ಮಾಡುವವರ ಸಂಬಳಕ್ಕಾಗಿಯೇ ಹೊರತು ಅನ್ಯ ಕಾರ್ಯಗಳ ಬಳಕೆಗೆ ಅಲ್ಲ. ಆದರೆ, ಡಿ.12ರಂದು ವಿನಾಕಾರಣ ನನ್ನ ಮನೆಗೆ ಗುಂಪು ಕಟ್ಟಿಕೊಂಡು ಬಂದು ಹಲ್ಲೆ ಮಾಡಿ, ಜಾತಿ ನಿಂದನೆ ಮಾಡಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದರು.
ಹಲ್ಲೆಗೀಡಾದ ನನ್ನ ವಿರುದ್ಧವೇ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ. ಅಲ್ಲದೇ, ಅಂದು ಘಟನಾ ಸ್ಥಳದಲ್ಲಿ ಇಲ್ಲದ ಕಾರ್ಯಕ್ರಮದ ವ್ಯವಸ್ಥಾಪಕ ಮೌನೇಶ ಮತ್ತು ಭೀರಲಿಂಗ ಸೇರಿ ಒಂಭತ್ತು ಜನರ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ಇಂತಹ ಆರೋಪಿತರ ಪರವಾಗಿ ದಲಿತ ಸೇನೆಯ ಮುಖಂಡ, ವಕೀಲ ಹಣಮಂತ ಯಳಸಂಗಿ ಸೇರಿಕೊಂಡು ಪೂರ್ವಾಗ್ರಹ ಪೀಡಿತರಾಗಿ ಮಾತನಾಡಿದ್ದಾರೆ. ಅಲ್ಲದೇ, ಲೈಂಗಿಕ-ಲಿಂಗತ್ವ ಅಲ್ಪಸಂಖ್ಯಾತ ಸಮುದಾಯವನ್ನು ಪರಸ್ಪರ ಎತ್ತಿಕಟ್ಟಿ ಬಿಕ್ಕಟ್ಟು ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಸೊಸೈಟಿಯಲ್ಲಿನ ಅವ್ಯವಹಾರ ಬಗ್ಗೆ ಯಾವ ಆಧಾರದ ಮೇಲೆ ಹಣಮಂತ ಯಳಸಂಗಿ ಹೇಳುತ್ತಿದ್ದಾರೆ? ಈ ಬಗ್ಗೆ ದಾಖಲೆ ಇದ್ದರೆ ಸಾಬೀತು ಪಡಿಸಬೇಕೆಂದು ಸವಾಲು ಹಾಕಿದರು.
ಲೈಂಗಿಕ ಲಿಂಗತ್ವ ಅಲ್ಪಸಂಖ್ಯಾತರ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಅಕ್ಷತಾ ಹಾವೇರಿ ಮಾತನಾಡಿ, ನಮ್ಮ ಸಮುದಾಯದಲ್ಲಿ ಹಣಮಂತ ಯಳಸಂಗಿ ಒಡುಕು ಮಾಡಿಸುವ ಕೆಲಸ ಮಾಡುತ್ತಿದ್ದಾರೆ. ಒಂಭತ್ತು ಸಾವಿರ ಕಿಟ್ ಗಳನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಸುಳ್ಳು ಆರೋಪ ಮಾಡುತ್ತಾರೆ. ಇವರಿಗೆ ನಿಜವಾದ ಕಾಳಜಿ ಇದ್ದರೆ ಲಾಕ್‌ಡೌನ್ ಸಂದರ್ಭದಲ್ಲಿ ಇವರು ಎಷ್ಟು? ಏನು ಸಹಾಯ ಮಾಡಿದ್ದಾರೆ? ಸಮುದಾಯದ ಜನರನ್ನು ಬಂದು ಮಾತನಾಡಿಸಿದ್ದರಾ ಎಂದು ಪ್ರಶ್ನಿಸಿದರು.
ಲಾಕ್‌ಡೌನ್‌ನಲ್ಲಿ ಸೊಸೈಟಿಗೆ ಕೇವಲ 2,170 ಕಿಟ್‌ಗಳು ಬಂದಿವೆ. ಅದರ ಹಂಚಿಕೆ ಮಾಡಿದ ದಾಖಲೆಗಳಿವೆ. ಅಲ್ಲದೇ, ಹಣಕಾಸಿನ ಬಗ್ಗೆ ಎಲ್ಲ ದಾಖಲಾತಿಗಳು ಇವೆ. ಆದರೆ, ಹಾದಿ ಬೀದಿಯಲ್ಲಿ ಲೆಕ್ಕ ಕೇಳಿದರೆ ಕೊಡಲು ಆಗುತ್ತಾ? ಸ್ನೇಹ ಸೊಸೈಟಿಯಲ್ಲಿ 8 ಲಕ್ಷ ರೂ. ಇದೆ. ಸೂಸೈಟಿ ಹೆಸರಲ್ಲಿ 50 ಸಾವಿರ ರೂ. ಬ್ಯಾಂಕ್ ಠೇವಣಿ ಇದೆ. ಅವ್ಯವಹಾರ ಮಾಡುವಂತಿದ್ದರೆ ಅಷ್ಟು ಹಣ ಇರುತ್ತಿರಲಿಲ್ಲ ಎಂದು ಹೇಳಿದರು.
ಸೊಸೈಟಿಯ ಕಾರ್ಯಕ್ರಮ ವ್ಯವಸ್ಥಾಪಕ ಮೌನೇಶ ವೈ.ಕೆ. ಮಾತನಾಡಿ, ಹಲ್ಲೆಯ ಮುನ್ನಾ ದಿನ (ಡಿ.11) ಸ್ನೇಹಾ ಸೊಸೈಟಿ ಸಭೆ ನಡೆಸಿ, ಯಾವುದೇ ಅವ್ಯವಹಾರ ಆಗಿಲ್ಲ ಎಂಬುದು ಸೇರಿ ಇತರ ನಿರ್ಣಯ ಪಡೆದು ಸಹಿ ಮಾಡಿದ್ದು, ಜ.4ಕ್ಕೆ ಲೆಕ್ಕಪತ್ರ ನೀಡುವುದಾಗಿ ನಿರ್ಧಾರ ಮಾಡಲಾಗಿತ್ತು. ಆದರೆ, ಹಲ್ಲೆ ಮಾಡಿ, ಅವ್ಯವಹಾರ ಆಗಿದೆ ಎಂದು ಸುಳ್ಳು ಆರೋಪಿಸುತ್ತಿದ್ದಾರೆ. ಸೊಸೈಟಿಯಲ್ಲಿ ಒಟ್ಟಾರೆ 34 ಜನ ಕೆಲಸ ಮಾಡುತ್ತೇವೆ. ಉತ್ತಮ ಕಾರ್ಯ ನಿರ್ವಹಣೆ ಕಾರಣ ಇದುವರೆಗೆ ಮೂರು ಪ್ರಶಸ್ತಿಗಳು ಸ್ನೇಹ ಸೊಸೈಟಿಗೆ ಬಂದಿವೆ ಎಂದರು. ಮುಖಂಡ ಕಿಶೋರ ಗಾಯಕವಾಡ, ಮಲ್ಲು ಕುಂಬಾರ, ಚಾಂದಿನಿ, ಪೆದ್ದಣ್ಣ, ಆದ್ಯತಾ ಇದ್ದರು.
ಭದ್ರತೆಗೆ ಪೊಲೀಸ್ ಸಿಬ್ಬಂದಿ
ನಾನು ಲೈಂಗಿಕ-ಲಿಂಗತ್ವ ಅಲ್ಪಸಂಖ್ಯಾತರ ಜಿಲ್ಲಾ ಸಮಿತಿ ಸದಸ್ಯೆ ಮತ್ತು ಕಾಂಗ್ರೆಸ್ ಸಂಘಟಿಕ ಕಾರ್ಮಿಕ ಸಮಿತಿಯ ಕಲಬುರಗಿ ನಗರಾಧ್ಯಕ್ಷೆಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದೇನೆ. ಇದೇ ಕಾರಣಕ್ಕಾಗಿ ನಾನು ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿದ್ದಾಗ ಕಾಂಗ್ರೆಸ್ ಮುಖಂಡರು ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಈಗಲೂ ನನಗೆ ಕೆಲವರ ಬೆದರಿಕೆ ಇರುವುದರಿಂದ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಪೊಲೀಸ್ ಆಯುಕ್ತರು ಭದ್ರತೆಗೆ ಕಲ್ಪಿಸಿದ್ದಾರೆ ಎಂದು ಮನೀಷಾ ಚವ್ಹಾಣ ತಿಳಿಸಿದ್ದಾರೆ.