ನವದೆಹಲಿ: ದೆಹಲಿಯ ಅಬಕಾರಿ ನೀತಿ ಹಗರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಮಂಗಳವಾರ (ಸೆ.06) ದೆಹಲಿ, ಉತ್ತರಪ್ರದೇಶ, ಪಂಜಾಬ್, ಹರ್ಯಾಣ, ತೆಲಂಗಾಣ ಮತ್ತು ಮಹಾರಾಷ್ಟ್ರ ಸೇರಿದಂತೆ ದೇಶದ ಸುಮಾರು 30 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸುತ್ತಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಪಿಎಸ್ಐ ಅಕ್ರಮ: ಬಿಜೆಪಿ ಶಾಸಕ ದಡೇಸೂಗೂರು ವಿರುದ್ಧ ತನಿಖೆಯ ಸುಳಿವು ನೀಡಿದ ಸಿಎಂ
ವರದಿ ಪ್ರಕಾರ, ಜಾರಿ ನಿರ್ದೇಶನಾಲಯ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ನಿವಾಸ ಹೊರತುಪಡಿಸಿ ಇತರೆಡೆ ಶೋಧ ಕಾರ್ಯ ನಡೆಸುತ್ತಿರುವುದಾಗಿ ವಿವರಿಸಿದೆ. “ ನಾವು ಇಂದು ಉತ್ತರಪ್ರದೇಶದ ಲಕ್ನೋ, ಹರ್ಯಾಣದ ಗುರುಗ್ರಾಮ್, ಚಂಡೀಗಢ್, ಮುಂಬೈ, ಹೈದರಾಬಾದ್ ಮತ್ತು ಇತರ ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸುತ್ತಿರುವುದಾಗಿ ಇ.ಡಿ ಮೂಲಗಳು ತಿಳಿಸಿವೆ.
ತಮ್ಮ ನಿವಾಸದಲ್ಲಿ ಜಾರಿ ನಿರ್ದೇಶನಾಲಯ ಶೋಧ ಕಾರ್ಯ ನಡೆಸುವ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ಮನೀಶ್ ಸಿಸೋಡಿಯಾ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ಹೇಳಿದೆ.
ಶಿಕ್ಷಣಕ್ಕೆ ಸಂಬಂಧಪಟ್ಟ ನಮ್ಮ ಕಾರ್ಯವನ್ನು ಜಾರಿ ನಿರ್ದೇಶನಾಲಯ, ಸಿಬಿಐ ದಾಳಿ ನಡೆಸುವ ಮೂಲಕ ತಡೆಯಲು ಸಾಧ್ಯವಿಲ್ಲ. ಜಾರಿ ನಿರ್ದೇಶನಾಲಯದ ದಾಳಿ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಆದರೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ದಾಳಿಯಲ್ಲಿ ಏನನ್ನೂ ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎಂದು ಸಿಸೋಡಿಯಾ ತಿಳಿಸಿದ್ದಾರೆ.