Advertisement

Manipur violence: ಇಂಫಾಲ್‌ನಲ್ಲಿ ಡಿಸಿ ಕಚೇರಿಗೆ ನುಗ್ಗಿದ ದುಷ್ಕರ್ಮಿಗಳು

10:07 PM Sep 28, 2023 | Team Udayavani |

ಇಂಫಾಲ್‌: ಇಬ್ಬರು ವಿದ್ಯಾರ್ಥಿಗಳ ಹತ್ಯೆಯ ವಿಡಿಯೋ ಸಂಘರ್ಷಪೀಡಿತ ಮಣಿಪುರವನ್ನು ಮತ್ತೆ ಹೊತ್ತಿ ಉರಿಯುವಂತೆ ಮಾಡಿದೆ.

Advertisement

ಬೂದಿ ಮುಚ್ಚಿದ ಕೆಂಡದಂತಿದ್ದ ಮಣಿಪುರದಲ್ಲಿ ಈ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಹಿಂಸಾಚಾರ ಭುಗಿಲೆದ್ದಿದೆ.

ಗುರುವಾರ ಬೆಳಗಿನ ಜಾವ ಇಂಫಾಲ್‌ ಪಶ್ಚಿಮದಲ್ಲಿ ಹಿಂಸಾತ್ಮಕ ಪ್ರತಿಭಟನೆ ಆರಂಭವಾಗಿದೆ. ಗುಂಪೊಂದು ಡೆಪ್ಯುಟಿ ಕಮಿಷನರ್‌ ಕಚೇರಿಗೆ ನುಗ್ಗಿ, ದಾಂದಲೆ ನಡೆಸಿದ್ದಲ್ಲದೆ, ಹೊರಗೆ ನಿಂತಿದ್ದ 2 ಪೊಲೀಸ್‌ ವಾಹನಗಳಿಗೆ ಬೆಂಕಿ ಹಚ್ಚಿದೆ. 12 ಮಂದಿ ಪೊಲೀಸರು ಘಟನೆಯಲ್ಲಿ ಗಾಯಗೊಂಡಿದ್ದಾರೆ.

ಥೌಬಾಲ್‌ ಜಿಲ್ಲೆಯ ಖೋಂಗ್‌ಜಾಮ್‌ನಲ್ಲಿರುವ ಬಿಜೆಪಿ ಕಚೇರಿಯ ಮೇಲೂ ದಾಳಿ ನಡೆಸಿದ ದುಷ್ಕರ್ಮಿಗಳು, ಕಚೇರಿಗೆ ಬೆಂಕಿ ಹಚ್ಚಿದ್ದಾರೆ.

ವಿಶೇಷವೆಂದರೆ, ಈ ಬಾರಿ ಹಿಂಸಾಚಾರದಲ್ಲಿ ತೊಡಗಿದ್ದು ಇಂಫಾಲದ ವಿದ್ಯಾರ್ಥಿಗಳು. ಬುಧವಾರ ರಾತ್ರಿ ಉರಿಪೋಕ್‌, ಯಾಯಿಸ್ಕಾಲ್‌, ಸಗೋಲ್‌ಬಂದ್‌ ಮತ್ತು ತೇರಾ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಪ್ರತಿಭಟನಾನಿರತ ವಿದ್ಯಾರ್ಥಿಗಳ ನಡುವೆ ಘರ್ಷಣೆ ಏರ್ಪಟ್ಟಿತ್ತು. ಕೊನೆಗೆ ಪೊಲೀಸರು ಹಲವು ಸುತ್ತುಗಳ ಅಶ್ರುವಾಯು ಸಿಡಿಸಿ ಪ್ರತಿಭಟನಾಕಾರರನ್ನು ಚದುರಿಸಿದ್ದರು. ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು, ರಾತ್ರಿಯಿಂದಲೇ ರಸ್ತೆಗಳಲ್ಲಿ ಟೈರ್‌ಗಳನ್ನು ಸುಟ್ಟುಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಜತೆಗೆ, ಭದ್ರತಾ ಪಡೆಗಳು ತಾವಿದ್ದಲ್ಲಿಗೆ ಬರಬಾರದು ಎಂಬ ಕಾರಣಕ್ಕೆ ರಸ್ತೆಗಳ ಮೇಲೆ ಕಲ್ಲುಗಳು, ಕಬ್ಬಿಣದ ಪೈಪ್‌ಗ್ಳನ್ನು ಅಡ್ಡಹಾಕಿ ರಸ್ತೆ ತಡೆಯನ್ನೂ ನಡೆಸಿದರು. ಬೆಳಗಿನ ಜಾವ ಡಿಸಿ ಆಫೀಸಿಗೆ ನುಗ್ಗಿ ದಾಂದಲೆ ನಡೆಸಿ, ಪೊಲೀಸರ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನೂ ಕಿತ್ತುಕೊಂಡು ಹೋಗಿದ್ದಾರೆ.

Advertisement

2 ಜಿಲ್ಲೆಗಳಲ್ಲಿ ಕರ್ಫ್ಯೂ:
ಹಿಂಸಾಚಾರ ಮರುಕಳಿಸಿದ ಹಿನ್ನೆಲೆಯಲ್ಲಿ ಇಂಫಾಲ್‌ ಪೂರ್ವ ಮತ್ತು ಇಂಫಾಲ್‌ ಪಶ್ಚಿಮ ಜಿಲ್ಲೆಯಲ್ಲಿ ಮಂಗಳವಾರದಿಂದೀಚೆಗೆ 65 ಪ್ರತಿಭಟನೆಗಳು ನಡೆದಿವೆ. ಹೀಗಾಗಿ ಈ ಎರಡೂ ಜಿಲ್ಲೆಗಳಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ. ಮೇ 3ರಂದು ಆರಂಭವಾದ ಹಿಂಸಾಚಾರವು ಈವರೆಗೆ 180ಕ್ಕೂ ಅಧಿಕ ಮಂದಿಯನ್ನು ಬಲಿಪಡೆದುಕೊಂಡಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ.

ಈ ನಡುವೆ, ನಮ್ಮ ಮಕ್ಕಳ ಮೃತದೇಹಗಳನ್ನು ಪತ್ತೆಹಚ್ಚಿ ನಮಗೆ ಹಸ್ತಾಂತರಿಸಿ. ನಾವು ಗೌರವಪೂರ್ವಕವಾಗಿ ಅವರ ಅಂತ್ಯಸಂಸ್ಕಾರವನ್ನಾದರೂ ಮಾಡುತ್ತೇವೆ ಎಂದು ಮೃತ ವಿದ್ಯಾರ್ಥಿಗಳ ಹೆತ್ತವರು ಗುರುವಾರ ಮಣಿಪುರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಪುಲ್ವಾಮಾ ತನಿಖಾಧಿಕಾರಿ ಮಣಿಪುರಕ್ಕೆ ವರ್ಗ
ಮಣಿಪುರದಲ್ಲಿ ಹೊಸದಾಗಿ ಹಿಂಸಾಚಾರ ಆರಂಭವಾಗುತ್ತಿದ್ದಂತೆಯೇ ಎಚ್ಚೆತ್ತಿರುವ ಕೇಂದ್ರ ಸರ್ಕಾರ, ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ನಿಯೋಜಿತರಾಗಿರುವ ಹಿರಿಯ ಐಪಿಎಸ್‌ ಅಧಿಕಾರಿ ರಾಕೇಶ್‌ ಬಲ್ವಾಲ್‌ರನ್ನು ಮಣಿಪುರಕ್ಕೆ ವರ್ಗಾವಣೆ ಮಾಡಿ ಗುರುವಾರ ಆದೇಶ ಹೊರಡಿಸಿದೆ. 2012ರ ಮಣಿಪುರ ಕೇಡರ್‌ನ ಅಧಿಕಾರಿಯಾಗಿರುವ ಬಲ್ವಾಲ್‌ ಅವರು ಸದ್ಯ ಶ್ರೀನಗರದಲ್ಲಿ ಎಸ್‌ಎಸ್‌ಪಿ(ಸೀನಿಯರ್‌ ಸೂಪರಿಂಟೆಂಡೆಂಟ್‌ ಆಫ್ ಪೊಲೀಸ್‌) ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದಕ್ಕೂ ಮುನ್ನ ಅವರು ಮೂರೂವರೆ ವರ್ಷ ಎನ್‌ಐಎಯಲ್ಲಿ ಕೆಲಸ ಮಾಡಿದ್ದು, 2019ರ ಪುಲ್ವಾಮಾ ಉಗ್ರರ ದಾಳಿಯ ತನಿಖೆ ನಡೆಸಿದ ತಂಡದಲ್ಲಿ ಒಬ್ಬರಾಗಿದ್ದರು.

ಬಿಜೆಪಿಗೆ ಖ್ಯಾತ ನಟ ರಾಜೀನಾಮೆ
“ಕೈಕು’ ಎಂದೇ ಕರೆಯಲ್ಪಡುವ ಮಣಿಪುರದ ಖ್ಯಾತ ನಟ, ರಾಜಕಾರಣಿ ರಾಜ್‌ಕುಮಾರ್‌ ಸೋಮೇಂದ್ರ ಅವರು ಗುರುವಾರ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಜನಾಂಗೀಯ ಹಿಂಸಾಚಾರವನ್ನು ನಿಯಂತ್ರಿಸುವಲ್ಲಿ ಸರ್ಕಾರದ ವೈಫ‌ಲ್ಯ ಮತ್ತು ಇಬ್ಬರು ವಿದ್ಯಾರ್ಥಿಗಳ ಹತ್ಯೆಯಿಂದ ನೊಂದು ರಾಜೀನಾಮೆ ನಿರ್ಧಾರ ಕೈಗೊಂಡಿರುವುದಾಗಿ ಅವರು ಹೇಳಿದ್ದಾರೆ. ಸುಮಾರು 400ರಷ್ಟು ಸಿನಿಮಾಗಳಲ್ಲಿ ನಟಿಸಿರುವ ಕೈಕು ಅವರು, ಪಕ್ಷದ ರಾಜ್ಯ ಘಟಕದ ನಾಯಕರಿಗೆ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರು, 2021ರ ನವೆಂಬರ್‌ನಲ್ಲಿ ಬಿಜೆಪಿ ಸೇರಿದ್ದರು.

ಉದ್ವಿಗ್ನತೆ ಹಿನ್ನೆಲೆ ಹಲವು ಕ್ರಮ
– ರಾಜ್ಯದ ಹಲವು ಪ್ರದೇಶಗಳಲ್ಲಿ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು ಮತ್ತೆ 6 ತಿಂಗಳು ವಿಸ್ತರಿಸಿದ ಸರ್ಕಾರ
– 5 ದಿನಗಳ ಕಾಲ(ಅ.1ರವರೆಗೆ) ಮೊಬೈಟ್‌ ಇಂಟರ್ನೆಟ್‌ ಸೇವೆ ಸ್ಥಗಿತ
– “ಒಂದು ಜಿಲ್ಲೆ, ಒಂದು ಪಡೆ’ ವ್ಯವಸ್ಥೆ ಮೂಲಕ ಭದ್ರತೆ ಹೆಚ್ಚಿಸಲು ಸರ್ಕಾರ ಚಿಂತನೆ
– 29ರವರೆಗೂ ಮಣಿಪುರದಾದ್ಯಂತ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

Advertisement

Udayavani is now on Telegram. Click here to join our channel and stay updated with the latest news.

Next