ಐಜ್ವಾಲ್: ಮಣಿಪುರದಲ್ಲಿ ಹಿಂಸಾಚಾರದಲ್ಲಿ ತೊಡಗಿರುವ ಎರಡು ಸಮುದಾಯಗಳಲ್ಲಿ ಒಂದಾದ ಮೈತೆಯ್ ಸಮುದಾಯದ ಜನರಿಗೆ ಮಿಜೋರಾಂನಲ್ಲಿ ಮಾಜಿ ಉಗ್ರಗಾಮಿಗಳ ಸಂಘಟನೆ ಬೆದರಿಕೆ ಹಾಕಿದ ಬೆನ್ನಲ್ಲೇ ಐಜ್ವಾಲ್‌ನಿಂದ ವಿಮಾನದಲ್ಲಿ ಕರೆ ತರಲು ಮಣಿಪುರ ಸರಕಾರ ಯೋಜಿಸಿದೆ.
ಮಿಜೋರಾಂ ಸರಕಾರ ಸುರಕ್ಷತೆ ಗಾಗಿ ತಮ್ಮ ತಾಯ್ನಾಡಿಗೆ ಮರಳುವಂತೆ ಮೈತೆಯ್ ಗಳನ್ನು ಕೇಳಿಕೊಂಡ ನಂತರ ಈ ನಿರ್ಧಾರವನ್ನು ಮಣಿಪುರ ಸರಕಾರ ಕೈಗೊಂಡಿದೆ.
ಮೇ 4 ರಂದು ಪುರುಷರ ಗುಂಪು ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿ ಹಲ್ಲೆ ನಡೆಸಿದ ಘಟನೆಯ ಬಗ್ಗೆ ಮಿಜೋ ಯುವಕರಲ್ಲಿ ಭಾರೀ ಆಕ್ರೋಶ ಇದೆ ಎಂದು ಭದ್ರತಾ ಪಡೆಗಳು ಹೇಳಿದೆ.
ಮಣಿಪುರ ಸರಕಾರವು ಐಜ್ವಾಲ್-ಇಂಫಾಲ್ ಮತ್ತು ಐಜ್ವಾಲ್-ಸಿಲ್ಚಾರ್ ನಡುವೆ ವಿಶೇಷ ATR ವಿಮಾನಗಳ ಮೂಲಕ ಮಿಜೋರಾಂನಿಂದ ಜನರನ್ನು ಏರ್ಲಿಫ್ಟ್ ಮಾಡಲು ಯೋಜಿಸುತ್ತಿದೆ. ಮಿಜೋರಾಂ ಪೊಲೀಸರು ಐಜ್ವಾಲ್ ನಗರದಲ್ಲಿ ಮೈತೆಯ್ ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಭದ್ರತಾ ವ್ಯವಸ್ಥೆಗಳನ್ನು ಹೆಚ್ಚಿಸಿದೆ.
ಮಿಜೋರಾಂ ಸರಕಾರವು ಶನಿವಾರ ಸುರಕ್ಷಿತ ಸ್ಥಿತಿಯಲ್ಲಿ ವಾಸಿಸುವ ಮೈತೆಯ್ ಸಮುದಾಯಕ್ಕೆ ಧೈರ್ಯ ತುಂಬಿ ವದಂತಿಗಳಿಗೆ ಗಮನ ಕೊಡಬೇಡಿ ಎಂದು ಹೇಳಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.