ಮಣಿಪಾಲ: ಕಳೆದ ಒಂದು ವಾರದಿಂದ ಮಣಿಪಾಲ ಸುತ್ತಮುತ್ತ ಆತಂಕ ಮೂಡಿಸಿದ್ದ ಚಿರತೆ ಇನ್ನೂ ಪತ್ತೆಯಾಗಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ಗಸ್ತು ಕಾರ್ಯಾಚರಣೆ ವೇಳೆಯೂ ಪತ್ತೆಯಾಗಿಲ್ಲ.
ಶುಕ್ರವಾರ ತಡರಾತ್ರಿ ಈಶ್ವರನಗರ ವಿವೇಕಾನಂದ ನಗರದಲ್ಲಿ ಚಿರತೆ ಓಡಾಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಪ್ರಾಣಿಯೊಂದು ಓಡಾಡಿ ರುವ ಬಗ್ಗೆ ಕೆಮರಾದಲ್ಲಿ ಸೆರೆಯಾಗಿದ್ದು, ಇದನ್ನು ಚಿರತೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
ಈಶ್ವರನಗರ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದ್ದು, ಚಿರತೆ ಸುಳಿವು ಲಭ್ಯವಾಗಿಲ್ಲ. ಚಿರತೆಯು ಈ ಭಾಗಕ್ಕೆ ಬರುವ ಸಾಧ್ಯತೆ ತೀರಾ ಕಡಿಮೆ. ಆದ್ದರಿಂದ ಸಾರ್ವಜನಿಕರು ಆತಂಕಗೊಳ್ಳಬೇಕಿಲ್ಲ. ಎಂಡ್‌ಪಾಯಿಂಟ್, ವಿಜಯನಗರ, ಕೊಡಂಗೆ ಭಾಗದಲ್ಲಿ ಚಿರತೆ ಓಡಾಡುವ ಸಾಧ್ಯತೆ ಹೆಚ್ಚಿದ್ದು, ಅಲ್ಲಿ ಬೋನು ಇರಿಸಲಾಗಿದೆ. ಈಶ್ವರನಗರ, ಅನಂತ ನಗರ ಸಹಿತ ಮಣಿಪಾಲದ ಸೂಕ್ಷ್ಮ ಪ್ರದೇಶಗಳಲ್ಲಿ ರಾತ್ರಿ ಮತ್ತು ಹಗಲು ಈ ಬಗ್ಗೆ ವಿಶೇಷ ನಿಗಾ ವಹಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮಹಿಳೆ ಮೇಲೆ ಕಾಡಾನೆ ದಾಳಿ
ಮಡಿಕೇರಿ: ತೋಟದ ಕಾರ್ಮಿಕ ಮಹಿಳೆಯೊಬ್ಬರ ಮೇಲೆ ಕಾಡಾನೆ ದಾಳಿ ಮಾಡಿರುವ ಘಟನೆ ಸುಂಟಿಕೊಪ್ಪ ಸಮೀಪದ ಅತ್ತೂರು ನಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಲ್ಲೂರು ತೋಟದಲ್ಲಿ ಸಂಭವಿಸಿದೆ. ಕಾರ್ಮಿಕರು ಬೊಬ್ಬೆ ಹಾಕಿದ ಸಂದರ್ಭ ಆನೆ ಸ್ಥಳದಿಂದ ಪರಾರಿಯಾಗಿದೆ. ಅನಂತರ ಮಹದೇವಮ್ಮ ಅವರನ್ನು ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.