Advertisement

7.32 ಎಕ್ರೆ ಖಾಸಗಿ ಭೂಸ್ವಾಧೀನಕ್ಕೆ ಟಿಡಿಆರ್‌ ಸೂತ್ರ ಅಳವಡಿಕೆ !

11:06 PM Sep 16, 2020 | mahesh |

ಉಡುಪಿ: ಉಡುಪಿ- ಮಲ್ಪೆ ಮಾಸ್ಟರ್‌ ಫ್ಲಾನ್‌ ಮಹಾಯೋಜನೆಯಲ್ಲಿ ಅಂಬಾಗಿಲು- ಪೆರಂಪಳ್ಳಿ- ಮಣಿಪಾಲ ರಿಂಗ್‌ ರಸ್ತೆಯ ಚತುಷ್ಪಥ ಕಾಮಗಾರಿಗೆ ಟೆಂಡರ್‌ ಆಗಿದ್ದು, ಟಿಡಿಆರ್‌ ಮೂಲಕ 7.32 ಎಕ್ರೆ ಖಾಸಗಿ ಭೂಸ್ವಾಧೀನಕ್ಕೆ ಲೋಕೋಪಯೋಗಿ ಇಲಾಖೆ ಅಧಿಸೂಚನೆ ಹೊರಡಿಸಿದೆ. ಈ ಮೂಲಕ ಅಂಬಾಗಿಲು-ಮಣಿಪಾಲ ರಸ್ತೆ ವಿಸ್ತರಣೆ ಬೇಡಿಕೆ ಪ್ರಸ್ತುತ ಕಾರ್ಯ ರೂಪಕ್ಕೆ ಬರುತ್ತಿದೆ. ಈಗಾಗಲೇ ರಸ್ತೆಯ ಎರಡೂ ಭಾಗಗಳಲ್ಲಿ ಖಾಸಗಿ ಭೂಮಿಗಳ ಸರ್ವೆ ಕಾರ್ಯ ಪೂರ್ಣಗೊಂಡಿದೆ. ಅಂಬಾಗಿಲಿನಿಂದ ಮಣಿಪಾಲದವರೆಗೆ ಒಟ್ಟು 197 ಸರ್ವೆ ನಂಬರ್‌ನಲ್ಲಿ 7.32 ಎಕ್ರೆ ಖಾಸಗಿ ಭೂಮಿ ಇದೆ.

Advertisement

25 ಕೋ.ರೂ. ಕಾಮಗಾರಿ
ಅಂಬಾಗಿಲು-ಮಣಿಪಾಲ ಮಾರ್ಗದ 3.9 ಕಿ.ಮೀ. ರಸ್ತೆ ಚತುಷ್ಪಥಗೊಳ್ಳಲಿದೆ. ಈಗಾಗಲೇ ಭೂಸ್ವಾಧೀನ, ಕಾಮಗಾರಿಗೆ 16 ಕೋ.ರೂ. ಮಂಜೂರಾಗಿದ್ದು, 9 ಕೋ.ರೂ. ಬಾಕಿ ಇದೆ. ನವೆಂಬರ್‌ ಅಂತ್ಯಕ್ಕೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡು ಕಾಮಗಾರಿ ಪ್ರಾರಂಭವಾಗಲಿದ್ದು, 2021ರ ನವೆಂಬರ್‌ ಒಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿಯಿದೆ.

ಸ್ವಾಧೀನಕ್ಕೆ 14.64 ಎಕ್ರೆ ಟಿಡಿಆರ್‌!
ಅಭಿವೃದ್ಧಿ ಹಕ್ಕುಗಳ ವರ್ಗಾವಣೆ (ಟಿಡಿಆರ್‌)ಸೂತ್ರದಡಿಯಲ್ಲಿ 3.9 ಕಿ.ಮೀ. ರಸ್ತೆ ಭೂಸ್ವಾಧೀನ ನಡೆಯಲಿದೆ. ನಗರಾಭಿವೃದ್ಧಿ ಪ್ರಾಧಿಕಾರದ 197 ಸರ್ವೆ ನಂಬರ್‌ನ 7.32 ಎಕ್ರೆ ಭೂಮಿ ಸಂತ್ರಸ್ತರಿಗೆ ಪರಿಹಾರವಾಗಿ ಒಟ್ಟು 14.64 ಎಕ್ರೆ ಹಕ್ಕು ಸ್ವಾಮ್ಯದ ಟಿಡಿಆರ್‌ ಪತ್ರ ನೀಡಲಿದೆ. ಇನ್ನು ಮನೆ ಹಾಗೂ ಆವರಣ ಕಳೆದುಕೊಂಡವರಿಗೆ ನೇರ ಪರಿಹಾರ ಸಿಗಲಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಸರ್ವೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಲಿದ್ದಾರೆ.

ಒತ್ತಡ ಕಡಿಮೆಯಾಗಲಿದೆ
ಕುಂದಾಪುರ ಸೇರಿದಂತೆ ವಿವಿಧ ಕಡೆಯಿಂದ ನೇರವಾಗಿ ಮಣಿಪಾಲವನ್ನು ಪ್ರವೇಶಿಸುವ ರಸ್ತೆ ಇದಾಗಿದೆ. ಪ್ರಸ್ತುತ ಚತುಷ್ಪಥಗೊಳ್ಳುತ್ತಿರುವುದರಿಂದ ರಸ್ತೆಯಲ್ಲಿ ವಾಹನ ಸಂಚಾರದ ಒತ್ತಡ ಕಡಿಮೆಯಾಗಲಿದೆ. ಪ್ರಸ್ತುತ ರಸ್ತೆ 10 ಮೀಟರ್‌ ಅಗಲವಿದೆ. ಅದನ್ನು 20 ಮೀಟರ್‌ ಡಾಮರು ರಸ್ತೆಯನ್ನಾಗಿಸಿ ಅಭಿವೃದ್ಧಿಪಡಿಸಲಾಗುತ್ತದೆ.

ಸುಂದರಿ ಗೇಟ್‌ ಅಭಿವೃದ್ಧಿ
ಮಣಿಪಾಲ- ಅಂಬಾಗಿಲು ಮಾರ್ಗವಾಗಿ ತೆರಳುವಾಗ ಪೆರಂಪಳ್ಳಿ ಬಿಡ್ಜ್ ಸಮೀಪ ಬರುವ ಅಪಾಯಕಾರಿ ಸುಂದರಿ ಗೇಟ್‌ ತಿರುವಿನಲ್ಲಿ ನಿತ್ಯ ಅಪಘಾತ ಸಂಭವಿಸುತ್ತಿದ್ದ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆ ಈ ತಿರುವನ್ನು ವಿಸ್ತರಿಸಲು ಚಿಂತಿಸಿದೆ.

Advertisement

ಏನಿದು ಟಿಡಿಆರ್‌?
ಬೆಂಗಳೂರು, ಮಂಗಳೂರಿನಂತಹ ಮಹಾ ನಗರಗಳಲ್ಲಿ ಟಿಡಿಆರ್‌ ಬಳಸಿಕೊಂಡು ಭೂಸ್ವಾಧೀನ ಮಾಡಲಾಗುತ್ತಿದೆ. ರಸ್ತೆಗಳ ವಿಸ್ತರಣೆಗೆ ಸ್ವಾಧೀನ ಪಡಿಸಿಕೊಂಡ ನಿವೇಶನ ಮತ್ತು ಕಟ್ಟಡಗಳಿಗೆ ಪರ್ಯಾಯವಾಗಿ ನೀಡುವ ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್‌) ಇದಾಗಿದೆ. ಈ ಹಕ್ಕು ಬಳಸಿ ಕೊಂಡ ಭೂಮಾಲಕರು ಜಿ+3 ಅಥವಾ 4 ಮನೆ ನಿರ್ಮಿಸಬಹುದು ಇಲ್ಲವೇ ಅಭಿವೃದ್ಧಿ ಹಕ್ಕುಗಳನ್ನು ಡೆವಲಪರ್‌ಗೆ ಮಾರಾಟ ಮಾಡಿ ಅಧಿಕ ಹಣ ಪಡೆಯಬಹುದಾಗಿದೆ. ಮಣಿಪಾಲ- ಪೆರಂಪಳ್ಳಿ- ಅಂಬಾಗಿಲು ರಸ್ತೆ ವಿಸ್ತರಣೆ ಸಂದರ್ಭ ಸಂತ್ರಸ್ತರು ಕಳೆದುಕೊಂಡ ಭೂಮಿ ಎರಡು ಪಟ್ಟು ಅಭಿವೃದ್ಧಿ ಹಕ್ಕುಗಳ ವರ್ಗಾವಣೆ ಪತ್ರ ಸಿಗಲಿದೆ.

ಆರ್ಥಿಕ ಹೊರೆ ಕಡಿಮೆ
ಅಂಬಾಗಿಲು-ಪೆರಂಪಳ್ಳಿ- ಮಣಿಪಾಲ ರಸ್ತೆ ಭೂ ಸ್ವಾಧೀನವನ್ನು ನಗರಾಭಿವೃದ್ಧಿ ಪ್ರಾಧಿಕಾರ ಟಿಡಿಆರ್‌ ಮೂಲಕ ಮಾಡಲು ನಿರ್ಧರಿಸಲಾಗಿದೆ. ಅದರ ಅನ್ವಯ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ಭೂಮಿಯ 2 ಪಟ್ಟು ಮೌಲ್ಯದ ಟಿಡಿಆರ್‌ ಪತ್ರ ಸಿಗಲಿದೆ. ಆ ಮೂಲಕ ರಸ್ತೆ ಕಾಮಗಾರಿಯ ಆರ್ಥಿಕ ಹೊರೆ ಕಡಿಮೆಯಾಗಲಿದೆ.
-ಕೆ.ರಘುಪತಿ ಭಟ್‌, ಶಾಸಕ, ಉಡುಪಿ

ಅಧಿಸೂಚನೆ
ಅಂಬಾಗಿಲು-ಪೆರಂಪಳ್ಳಿ-ಮಣಿಪಾಲ ರಿಂಗ್‌ ರಸ್ತೆಯ ಚತುಷ್ಪಥ ಕಾಮಗಾರಿಗೆ ಟೆಂಡರ್‌ ಆಗಿದ್ದು, 7.3 ಎಕ್ರೆ ಖಾಸಗಿ ಜಾಗ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿದೆ.
-ಜಗದೀಶ್‌ ಭಟ್‌, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ , ಲೋಕೋಪಯೋಗಿ ಉಪವಿಭಾಗ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next