ಮಣಿಪಾಲ: ಆರೋಗ್ಯ ಕ್ಷೇತ್ರದಲ್ಲಿ ಡಿಜಿಟಲ್ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಹಾಗೂ ಮಾನಸಿಕ ಆರೋಗ್ಯ ಸೇರಿದಂತೆ ಹಲವು ವಿಷಯಗಳ ಚರ್ಚೆಗೆ ವೇದಿಕೆಯಾಗಿ ರುವ ಗ್ಲೋಬಲ್ ಹೆಲ್ತ್‌ಕೇರ್ ಸಮ್ಮಿಟ್ “ಆರೋಗ್ಯ ರಕ್ಷಣೆ ಮತ್ತು ಕೃತಕ ಬುದ್ಧಿಮತ್ತೆಯ ಭವಿಷ್ಯ’ ವಿಷಯದಲ್ಲಿ ಜ. 4ರಿಂದ 6ರ ವರೆಗೆ ಮಣಿಪಾಲದಲ್ಲಿ ನಡೆಯಲಿದೆ ಎಂದು ಮಾಹೆವಿಶ್ವವಿದ್ಯಾನಿಲಯದ ಸಹ ಕುಲಾಧಿಪತಿಡಾ| ಎಚ್.ಎಸ್. ಬಲ್ಲಾಳ್ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು.
ಭಾರತೀಯ ಸಂಜಾತ ಅಮೆರಿಕನ್ ವೈದ್ಯರ ಒಕ್ಕೂಟ(ಎಎಪಿಐ)ವು ಮಣಿಪಾಲ ಮಾಹೆ ವಿ.ವಿ.ಯೊಂದಿಗೆ ಸೇರಿಕೊಂಡು ಸಮ್ಮೇಳನ ನಡೆಸುತ್ತಿದೆ. ಜ. 5ರ ಬೆಳಗ್ಗೆ 11.30ಕ್ಕೆ ಫಾರ್ಚೂನ್ ಇನ್ ವ್ಯಾಲಿ ಹೊಟೇಲ್‌ನಲ್ಲಿ ಸಮ್ಮೇಳನದ ಉದ್ಘಾಟನೆಗೊಳ್ಳಲಿದೆ ಎಂದರು.
ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್ ಮಾತನಾಡಿ, ಇಂತಹ ಸಮ್ಮೇಳನಗಳ ಮೂಲಕ ಜಾಗತಿಕವಾಗಿ ಆರೋಗ್ಯ ಕ್ಷೇತ್ರ ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದರು.
ಸಹ ಕುಲಪತಿ ಡಾ| ಶರತ್ ಕುಮಾರ್ ರಾವ್ ಮಾತನಾಡಿ, ಭಾರತ ಮೂಲದ ಅಮೆರಿಕದಲ್ಲಿರುವ 100ಕ್ಕೂ ಅಧಿಕ ವೈದ್ಯರು ಸಮ್ಮೇಳನ ದಲ್ಲಿ ಪಾಲ್ಗೊಳ್ಳಲಿದ್ದಾರೆ. ಐಎಂಎ ರಾಷ್ಟ್ರೀಯ ಅಧ್ಯಕ್ಷ ಡಾ| ಆರ್.ವಿ. ಅಶೋಕನ್, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಹಿತ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.ಶೈಕ್ಷಣಿಕ, ವೈಜ್ಞಾನಿಕ ಗೋಷ್ಠಿಗಳ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿದೆ ಎಂದರು.
ಎಎಪಿಐ ಅಧ್ಯಕ್ಷ ಡಾ| ಸಂಪತ್ ಶಿವಾಂಗಿ ಮಾತನಾಡಿ, ವೈದ್ಯಕೀಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಮಾಹೆ ವಿ.ವಿ.ಯ ಕುಲಾಧಿಪತಿ ಡಾ| ರಾಮದಾಸ್ ಪೈ ಅವರಿಗೆ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿಯನ್ನು ನೀಡಿ ಸಮ್ಮಾನಿಸಲಾಗುವುದು ಎಂದರು.