Advertisement

ಮಾಣಿ-ಮೈಸೂರು ರಸ್ತೆ: ಬಸ್‌ ಸಂಚಾರ ಇನ್ನೂ ಇಲ್ಲ

09:40 AM Nov 12, 2018 | |

ಅರಂತೋಡು: ಮಾಣಿ – ಮೈಸೂರು ರಸ್ತೆಯಲ್ಲಿ ಲಾರಿಗಳು ಸಂಚರಿಸುತ್ತಿದ್ದರೂ ಬಸ್‌ ಸಂಚಾರಕ್ಕೆ ಅವಕಾಶ ನೀಡಿಲ್ಲ. ಇದಕ್ಕೆ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಆಗಸ್ಟ್‌ನಲ್ಲಿ ಪ್ರಕೃತಿ ವಿಕೋಪದಿಂದಾಗಿ ಗುಡ್ಡ ಕುಸಿದು ಈ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ರಸ್ತೆ ದುರಸ್ತಿ ಕಾಮಗಾರಿ ನಡೆಸಿ ಮಡಿಕೇರಿಯಿಂದ ಜೋಡುಪಾಲ ತನಕ ಕೆಎಸ್ಸಾರ್ಟಿಸಿ ಮಿನಿ ಬಸ್‌ ಸಂಚಾರ ಆರಂಭಿಸಲಾಯಿತು.

Advertisement

ಸದ್ಯ ಮಂಗಳೂರು, ಪುತ್ತೂರು, ಸುಳ್ಯ ಕಡೆಯ ಬಸ್‌ಗಳಿಗೆ ಜೋಡುಪಾಲ ತನಕ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಅಲ್ಲಿಳಿದ ಪ್ರಯಾಣಿಕರು ಮಡಿಕೇರಿ ತನಕ ಮಿನಿ ಬಸ್ಸಿನಲ್ಲಿ ಸಂಚರಿಸಬೇಕು. ಒಂದೂವರೆ ತಿಂಗಳಿನಿಂದ ಈಚೆಗೆ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಲಾರಿಗಳ ಸಂಚಾರಕ್ಕೆ ಅನುಮತಿ ಇಲ್ಲವಾದರೂ ರಾತ್ರಿ ವೇಳೆ ಓಡಾಡುತ್ತಿವೆ. ಇದರಿಂದ ಸಂಬಂಧಪಟ್ಟ ಇಲಾಖೆಯ ಮೇಲೆ ಪ್ರಯಾಣಿಕರು ಸಂಶಯ ವ್ಯಕ್ತಪಡಿಸ ಲಾರಂಭಿಸಿದ್ದು, ಬಸ್‌ ಸಂಪರ್ಕಕ್ಕೆ ಯಾಕೆ ಅವಕಾಶ ನೀಡಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ.

ಬಸ್‌ಗಳಲ್ಲಿ ನೂಕುನುಗ್ಗಲು
ಜೋಡುಪಾಲದಿಂದ ಮಡಿಕೇರಿವರೆಗೆ ಸದ್ಯ ಸಂಚರಿಸುತ್ತಿರುವುದು ಮಿನಿ ಬಸ್‌ಗಳು. ಇದರಿಂದ ಪ್ರಯಾಣಿಕರ ನೂಕುನುಗ್ಗಲು ಉಂಟಾಗುತ್ತಿದೆ. ಆಸನಗಳು ಕೂಡ ಇಕ್ಕಟ್ಟಾಗಿದ್ದು, ವೃದ್ಧರು, ಮಹಿಳೆಯರು, ಚಿಕ್ಕ ಮಕ್ಕಳನ್ನು ಕರೆದುಕೊಂಡು ಹೋಗುವವರಿಗೆ ಕಷ್ಟವಾಗಿದೆ. ಕಿಸೆಗಳ್ಳರಿಗೆ ವರವಾಗಿದೆ. ಪ್ರಯಾಣಿಕರ ದಟ್ಟಣೆಯ ದುರ್ಲಾಭ ಪಡೆದು ಕೆಲವರು ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವ ದೂರುಗಳು ಕೇಳಿಬರುತ್ತಿವೆ.

ಬಸ್‌ ಸಂಚರಿಸಬಹುದು
ಮಡಿಕೇರಿಯಿಂದ ಜೋಡುಪಾಲದವರೆಗೆ ರಸ್ತೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಬಸ್‌ ಸಂಚರಿಸಬಹುದು. ರಾತ್ರಿ ಲಾರಿ, ಘನ ವಾಹನಗಳು ಓಡಾಡುತ್ತವೆ. ಇದಕ್ಕೆ ಅವಕಾಶ ಕಲ್ಪಿಸುವವರು ಯಾರು ಎನ್ನುವುದು ಸಂಶಯಕ್ಕೆ ಕಾರಣವಾಗಿದೆ. ಸೀಮಿತ ಕೆಎಸ್ಸಾರ್ಟಿಸಿ ಬಸ್‌ಗಳು ಸುಳ್ಯದಿಂದ ಮಡಿಕೇರಿ ತನಕ ಸಂಚರಿಸಲಿ. ಇದರಿಂದ ಜನರಿಗೆ ಅನುಕೂಲವಾಗಲಿದೆ. 
ಬಾಲಚಂದ್ರ ಕಳಗಿ, ಸಂಪಾಜೆ ಗ್ರಾ.ಪಂ. ಅಧ್ಯಕ್ಷರು

ಸಮಸ್ಯೆ ಹೆಚ್ಚಿದೆ
ರಸ್ತೆಯಲ್ಲಿ ನೇರ ಬಸ್‌ ಸಂಪರ್ಕಕ್ಕೆ ಅವಕಾಶ ಕಲ್ಪಿಸದೆ ಇರುವುದರಿಂದ ಅನೇಕರಿಗೆ ಸಮಸ್ಯೆಯಾಗುತ್ತಿದೆ. ಜೋಡುಪಾಲದಲ್ಲಿ ಪ್ರಯಾಣಿಕರು ಬಸ್‌ ಕಾಯಬೇಕು. ಅಲ್ಲಿ ಬಸ್‌ ನಿಲ್ದಾಣವೂ ಇಲ್ಲ. ಹೊಟೇಲ್‌, ಶೌಚಾಲಯದ ವ್ಯವಸ್ಥೆಯೂ ಇಲ್ಲ. ಇದರಿಂದ ಪ್ರಯಾಣಿಕರು ಸಮಸ್ಯೆಗೊಳಗಾಗುತ್ತಿದ್ದಾರೆ.
ತಿರುಮಲ ಸೋನ ಕೊಯಿನಾಡು,  ಸ್ಥಳೀಯ ಪ್ರಯಾಣಿಕ

Advertisement

ತೇಜೇಶ್ವರ್‌ ಕುಂದಲ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next