ಚಿಕ್ಕಬಳ್ಳಾಪುರ: ಮಾವಿನ ಫಸಲಿನಲ್ಲಿ ಈ ಬಾರಿ ಹವಾಮಾನ ವೈಪರೀತ್ಯದ ಪರಿಣಾಮ ಭಾರೀ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ಅಳಿದುಳಿದ ಮಾವುಗೆ ಮಾರುಕಟ್ಟೆಯಲ್ಲಿ ಉತ್ತಮ ದರ ಸಿಗುತ್ತಿದ್ದು ಕ್ವಿಂಟಲ್ ಮಾವು ದಾಖಲೆಯ ದರದಲ್ಲಿ ಮಾರಾಟ ಆಗುತ್ತಿದೆ. ಮಾವಿನ ವ್ಯಾಪಾರಿಗಳೇ ತೋಟಗಳಿಗೆ ತೆರಳಿ ಮಾವು ಖರೀದಿಗೆ ಮುಗಿ ಬಿದ್ದಿದ್ದಾರೆ.
ಜಿಲ್ಲೆಯ ಮಾವು ಮಾರುಕಟ್ಟೆಯಲ್ಲಿ ಸದ್ಯ ತೋತಾಪುರಿ ಕ್ವಿಂಟಲ್‌ಗೆ ಬರೋಬ್ಬರಿ 20 ರಿಂದ 22 ಸಾವಿರಕ್ಕೆ ಮಾರಾಟಗೊಳ್ಳುತ್ತಿದ್ದರೆ. ಬಾದಾಮಿ ಕ್ವಿಂಟಾಲ್ ದಾಖಲೆಯ ಪ್ರಮಾಣದಲ್ಲಿ 50 ಸಾವಿರ ರೂ. ಗಡಿ ದಾಟಿದೆ. ಇನ್ನೂ ಮಲ್ಲಿಕಾ 40 ರಿಂದ 42 ಸಾವಿರದವರೆಗೂ ಮಾರಾಟಗೊಳ್ಳುತ್ತಿದ್ದರೆ, ಸೆಂದೂರ 28 ರಿಂದ 30 ಸಾವಿರ ರೂ.ವರೆಗೂ ಮಾರಾಟಗೊಳ್ಳುತ್ತಿದೆ.
ಇಳುವರಿ ಕಡಿಮೆ: ಏಷ್ಯಾ ಖಂಡದಲ್ಲಿಯೆ ಮಾವು ಬೆಳೆಯುವುದರಲ್ಲಿ ಅವಿಭಜಿತ ಕೋಲಾರ ಜಿಲ್ಲೆಯ ಮುಂಚೂಣಿಯಲ್ಲಿದೆ. ಜಿಲ್ಲೆಯ ಚಿಂತಾಮಣಿ ತಾಲೂಕಿನ ಒಂದರಲ್ಲಿಯೆ 11 ಸಾವಿರ ಹೆಕ್ಟೇರ್ ಅಧಿಕ ಪ್ರಮಾಣದಲ್ಲಿ ಮಾವು ಬೆಳೆಯಲಾಗುತ್ತಿದೆ. ಆದರೆ ಈ ವರ್ಷ ಮಾವುಗೆ ಕಾಡಿದ ಹವಮಾನ ವೈಪರೀತ್ಯದ ಪರಿಣಾಮ ಇಳುವರಿ ಕುಸಿತ ಕಂಡಿದ್ದು, ಮಾವು ಪ್ರಿಯರಿಗೆ ಮಾರುಕಟ್ಟೆಗೆ ಬೆಲೆ ಹೆಚ್ಚಾಗಿ ಕೈ ಕಚ್ಚುವಂತಾಗಿದೆ.
ಹವಾಮಾನ ವೈಪರೀತ್ಯದ ನಡುವೆಯು ಮಾವು ಉಳಿಸಿಕೊಂಡ ರೈತರಿಗೆ ಚಿನ್ನದ ಬೆಲೆ ಸಿಗುತ್ತಿದೆ. ದಾಖಲೆಯ ಪ್ರಮಾಣದಲ್ಲಿ ಈ ಬಾರಿ ಮಾವುಗೆ ಹೆಚ್ಚಿನ ದರ ಸಿಗುತ್ತಿದ್ದು, ಮಾವು ಬೆಳೆಗಾರರಲ್ಲಿ ಸಂತಸ ಮೂಡಿದೆ. ಈಗಾಗಲೇ ಜಿಲ್ಲಾದ್ಯಂತ ಮಾವು ಸುಗ್ಗಿ ಆರಂಭಗೊಂಡಿದೆ. ಈ ಬಾರಿ ಶೇ.20 ರಿಂದ 30 ರಷ್ಟು ಮಾತ್ರ ಮಾವು ಇಳುವರಿ ಸಿಕ್ಕಿದ್ದು, ಮಾರುಕಟ್ಟೆಯಲ್ಲಿ ಹಣ್ಣುಗಳ ರಾಜ ಮಾವುಗೆ ಉತ್ತಮ ಬೆಲೆ ಇದ್ದರೂ ಮಾವು ಬೆಳೆ ಇಳುವರಿ ಇಲ್ಲದ ಕಾರಣಕ್ಕೆ ಮಾವು ಬೆಳೆಗಾರರಲ್ಲಿ ತೀವ್ರ ನಿರಾಸೆ ಮೂಡಿಸಿದೆ.
ಇನ್ನೂ ಈ ಬಾರಿ ಮಾವು ಇಳುವರಿ ಕುಸಿತದಿಂದ ವಾಣಿಜ್ಯ ವಹಿವಾಟುನಲ್ಲಿ ಭಾರೀ ಕುಸಿತ ಕಂಡಿದೆ. ಮಾವು ಬರುವುದನ್ನು ನಂಬಿ ಮಂಡಿಗಳನ್ನು ತೆರೆದಿರುವ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ. ಮಂಡಿಗಳಲ್ಲಿ ಕೆಲಸ ಸಿಗುವ ಆಸೆ ಹೊತ್ತಿದ್ದ ಕೂಲಿ ಕೂಲಿ ಕಾರ್ಮಿಕರಲ್ಲಿ ತೀವ್ರ ನಿರಾಸೆ ಮೂಡಿಸಿದೆ.
ಈ ಬಾರಿ ಅಧಿಕ ಉಷ್ಣಾಂಶ, ಮಳೆ ಕೊರತೆ, ಹವಮಾನ ವೈಪರೀತ್ಯದ ಪರಿಣಾಮ ಮಾವಿನ ಇಳುವರಿಯಲ್ಲಿ ಭಾರೀ ಕುಸಿತ ಕಂಡಿದೆ. ಶೇ.20 ರಿಂದ 30 ರಷ್ಟು ಮಾತ್ರ ಫಸಲು ಸಿಗುತ್ತಿದೆ. ಹೀಗಾಗಿ ಮಾವು ಮಂಡಿಗಳಲ್ಲಿ ಮಾವುಗೆ ಉತ್ತಮ ದರ ಸಿಗುತ್ತಿದೆ. ವ್ಯಾಪಾರಿಗಳು ಮಂಡಿ ಬಿಟ್ಟು ರೈತರ ತೋಟಗಳಿಗೆ ಬಂದು ಮಾವು ಖರೀದಿಸುತ್ತಿದ್ದಾರೆ. ಮಲ್ಲಿಕಾ, ಬಾದಾಮಿಗೆ ಉತ್ತಮ ದರ ಸಿಗುತ್ತಿದೆ.
-ಕೆ.ಶ್ರೀನಿವಾಸಗೌಡ, ಜಿಲ್ಲಾದ್ಯಕ್ಷರು. ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘ
-ಕಾಗತಿ ನಾಗರಾಜಪ್ಪ