ದೇವದುರ್ಗ: ತಾಲೂಕಿನ ಗಬ್ಬೂರು ಹೋಬಳಿ ವ್ಯಾಪ್ತಿಯ 5 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಆದರೆ, ಈ ವರ್ಷ ಇಳುವರಿ ಕುಂಠಿತವಾಗಿದ್ದರಿಂದ ರೈತರು ಮತ್ತು ಲೀಜ್ ಪಡೆದವರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ.
ದೇವದುರ್ಗ, ಯಟಗಲ್, ಅರಕೇರಾ ಸೇರಿದಂತೆ ಇತರೆ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಜನವರಿ, ಪೆಬ್ರುವರಿ ತಿಂಗಳ ವೇಳೆ ಸುರಿದ ಮಳೆ, ಮೋಡ ಕವಿದ ವಾತಾವರಣದಿಂದ ಮೊಗ್ಗು ಉದರಿ ನೆಲಕ್ಕಚ್ಚಿದ್ದರಿಂದ ಮಾವಿನ ಹಣ್ಣು ತಡವಾಗಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.
ಲೀಜ್ ಪಡೆದು ಮಾವು ಬೆಳೆದ ರೈತರು ಸಂಕಷ್ಟಕ್ಕೆ ಸಿಲಿಕ್ಕಿದ್ದಾರೆ. ಗಬ್ಬೂರು ಹೋಬಳಿ ವ್ಯಾಪ್ತಿಯ ಶಿವಪ್ಪ ಎಂಬ ವ್ಯಕ್ತಿಯೊಬ್ಬರು ವರ್ಷಕ್ಕೆ 5 ಲಕ್ಷ ರೂ. ಲೀಜ್ ಪಡೆದು ಮಾವು ಬೆಳೆದಿದ್ದು, ಇಳುವರಿ ಕೊರತೆಯಿಂದ 2 ಲಕ್ಷ ರೂ. ನಷ್ಟವಾಗಿದೆ. ವಾಹನಗಳ ಮೂಲಕ ಹಳ್ಳಿ-ಹಳ್ಳಿಗೆ ಅಲೆದು ಕೆಜಿಗೆ 70ರಿಂದ 80 ರೂ. ವರೆಗೆ ಮಾವಿನ ಹಣ್ಣು ಮಾರಾಟ ನಡೆಸಿದ್ದಾರೆ. ಇಂತಹ ಸಂಕಷ್ಟದ ನಡುವೆಯೇ ಗ್ರಾಹಕರು ಕಡಿಮೆ ಬೆಲೆಗೆ ಹಣ್ಣುಗಳನ್ನು ಕೇಳುವುದರಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕೋವಿಡ್ ಕಾರಣಕ್ಕೆ ಕಳೆದ ಎರಡು ವರ್ಷಗಳಿಂದ ಆರ್ಥಿಕ ಸಂಷ್ಟಕ ಎದುರಿಸಿದ ರೈತರು ಇದೀಗ ಇಳಿವರಿ ಕೊರತೆಯಿಂದ ಮಾವು ಬೆಳೆದ ರೈತರು ಸಂಕಷ್ಟ ಎದುರಿಸುವಂತಾಗಿದೆ.
ಮಳೆ, ಮೋಡ ಕವಿದ ವಾತಾವರಣ ಮಾವಿನ ಮೊಗ್ಗು ಉದುರಿ ಇಳಿವರಿ ಕುಂಟಿತವಾಗಿದೆ. ಇದರಿಂದ ಈ ವರ್ಷ ಮಾವು ಬೆಳೆದ ರೈತರು ನಷ್ಟ ಅನುಭವಿಸಿದ್ದಾರೆ. ಯುಗಾದಿ ಹಬ್ಬದ ವೇಳೆ ಮಾರುಕಟ್ಟೆಗೆ ಮಾವಿನ ಹಣ್ಣು ಬರುವ ಬದಲು ಒಂದೂವರೆ ತಿಂಗಳ ತಡವಾಗಿ ಬಂದಿದೆ.
-ಭೀಮರಾವ್ ಕುಂಬಾರ, ಸಹಾಯಕ ನಿರ್ದೇಶಕ ತೋಟಗಾರಿಕೆ ಇಲಾಖೆ