ಹೆಚ್ಚಿನ ಆರೈಕೆಯೂ ಅಗತ್ಯವಿಲ್ಲದ, ರೋಗಬಾಧೆಯೂ ಕಡಿಮೆಯಿರುವ ಮಾವಿನಶುಂಠಿ ಬೆಳೆ ಆರು ತಿಂಗಳುಗಳಲ್ಲಿ ಫಸಲು ನೀಡುತ್ತದೆ. ಇದು ಶುಂಠಿಯಂತೆ ಕಂಡುಬಂದರೂ ಮಾವಿನ ಕಾಯಿಯ ಪರಿಮಳ ಹೊಂದಿದ್ದು, ಅರಶಿನ ಗಿಡದ ಎಲೆಯನ್ನು ಹೋಲುವ ಎಲೆ, ನೇರಳೆ ಬಣ್ಣದ ಹೂವು ಬಿಡುತ್ತದೆ.
ವಿವಿಧ ಹೆಸರು
ಬೃಹತ್ ವೃಕ್ಷವಾದ ಮಾವು ಹಾಗೂ ನೆಲದೊಳಗೆ ಹುದುಗಿರುವ ಮಾವಿನ ಶುಂಠಿ ಬೇರೆ ಬೇರೆ ಕುಟುಂಬ ವರ್ಗಕ್ಕೆ ಸೇರಿವೆ. ಇದನ್ನು ತುಳುವಿನಲ್ಲಿ “ಕುಕ್ಕು ಶುಂಠಿ’ ಎನ್ನುವರು. ಸಸ್ಯಶಾಸ್ತ್ರದ ಪ್ರಕಾರ ಝಿಂಗಿ ಬರೇಶಿಯೇ ಎಂಬ ಕುಟುಂಬ ವರ್ಗಕ್ಕೆ ಸೇರಿದ್ದು, ಕುರ್ಕುಮಾ ಅಮಡಾ ಇದರ ವೈಜ್ಞಾನಿಕ ಹೆಸರು. ಕನ್ನಡದಲ್ಲಿ ಮಾವಿನ ಶುಂಠಿ, ನೆಲಮಾವು, ಅಂಬೆಅರಶಿಣ, ಅಂಬೆಕೊಂಬು, ತಮಿಳು ಹಾಗೂ ಮಲಯಾಳದಲ್ಲಿ ಮಾಂಙಯಿಂಜಿ. ಇಂಗ್ಲಿಷ್‌ನಲ್ಲಿ ಮ್ಯಾಂಗೋ ಜಿಂಜರ್ ಎನ್ನುವರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾಂಙನ್ನಾರಿ ಎಂದು ಕರೆಯಲಾಗುತ್ತದೆ.
ಸಾಮಾನ್ಯವಾಗಿ ಮಾವಿನಶುಂಠಿ ತೋಟ, ಗುಡ್ಡಗಳಲ್ಲಿ ತನ್ನಷ್ಟಕ್ಕೆ ಹುಟ್ಟಿ ಬೆಳೆಯುವ ಸಸ್ಯ. ಆದರೆ ಈಗ ಇದಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಇರುವುದರಿಂದ ನಾಟಿ ಮಾಡಿ ಕೃಷಿ ಮಾಡಲಾಗುತ್ತದೆ. ಉಷ್ಣ ಹಾಗೂ ಸಮಶೀತೋಷ್ಣ ವಲಯದಲ್ಲಿ ಬೆಳೆಯುವ ಸಸ್ಯ. ಕೆಂಪು, ಕಪ್ಪು, ಮರಳು ಮಿಶ್ರಿತ ಗೊಡ್ಡು ಮಣ್ಣು ಇದಕ್ಕೆ ಸೂಕ್ತ.
ಕೃಷಿ ಹೇಗೆ ?
ನೀರು ನಿಲ್ಲುವ ಗದ್ದೆಯಂತಹ ತೋಟ ಮಾವಿನಶುಂಠಿ ಕೃಷಿಗೆ ಸೂಕ್ತವಲ್ಲ. ಸ್ವಲ್ಪವಾದರೂ ಬಿಸಿಲು ಬೀಳುವಂತಿರಬೇಕು. ಮೇ ತಿಂಗಳಿನಲ್ಲಿ ಒಂದೆರಡು ಮಳೆ ಸುರಿದಾಗ ಇದರ ಗೆಡ್ಡೆಯನ್ನು ನಾಟಿ ಮಾಡಬಹುದು.
ಅಡಿಕೆ, ತಂಗಿನ ತೋಟಗಳಲ್ಲಿ ಮರಗಳ ನಡುವೆ ಖಾಲಿ ಜಾಗ ಇರುವಲ್ಲೆಲ್ಲ 15-20 ಉದ್ದದ, ಮುಕ್ಕಾಲು ಅಡಿ ಎತ್ತರ, 3 ಅಡಿ ಅಗಲದ ಸಾಲು (ಮಡಿ)ಗಳನ್ನು ಮಾಡಬೇಕು. ಬೀಜದಿಂದ ಬೀಜಕ್ಕೆ ಒಂದು ಅಡಿ ಅಂತರದಲ್ಲಿ ನಾಟಿ ಮಾಡಬೇಕು. ನಿಯಮಿತವಾಗಿ ಮಳೆಯಾಗದಿದ್ದರೆ ಕನಿಷ್ಠ 8 ದಿನಕ್ಕೊಮ್ಮೆಯಾದರೂ ನೀರು ಕೊಡಬೇಕಾಗುತ್ತದೆ. ಆದರೆ ನೀರು ಸಾಲಿನಲ್ಲಿ ಹೆಚ್ಚು ನಿಲ್ಲದೆ ಹರಿದು ಹೋಗುವಂತಿರಬೇಕು. ಆದ್ದರಿಂದ ಸಾಲುಗಳು ಹತ್ತಿರದಲ್ಲಿದ್ದರೆ ನೀರು ಹರಿಯಲು ಸಣ್ಣ ಕಾಲುವೆಗಳನ್ನು ಮಾಡಬೇಕು. ಮಡಿಯ ಬದಲು ಒಂದೊಂದು ಬುಡ ಮಾಡಿಯೂ ಫಸಲು ಪಡೆಯಬಹುದು. ಬಿತ್ತನೆ ಮಾಡಿದ 15ನೇ ದಿನದಿಂದ ಜೀವಾಮೃತ ಉಣಿಸಬೇಕು. 45ನೇ ದಿನಗಳಲ್ಲಿ ಗಿಡ ಮೇಲೆದ್ದು ಬರುತ್ತದೆ. ಬಳಿಕ ಅದಕ್ಕೆ ತರಗೆಲೆ, ಸುಡುಮಣ್ಣು, ಹಟ್ಟಿಗೊಬ್ಬರ, ಕಾಂಪೋ, ಎರೆಗೊಬ್ಬರ, ದ್ರವರೂಪಿ ಗೊಬ್ಬರಗಳು, ಸ್ಲರಿ, ಜೈವಿಕ ಗೊಬ್ಬರಗಳನ್ನು ಕಾಲ ಕಾಲಕ್ಕೆ ನೀಡಿದರೆ ಉತ್ತಮ ಇಳುವರಿ ಲಭಿಸಲಿದೆ. ನೆಲದೊಳಗೆ ಇದ್ದ ಮಾವಿನ ಶುಂಠಿಯನ್ನು ತೆಗೆಯುವಾಗಲೇ ಮೊಳಕೆಯೊಡೆದ ಕಣ್ಣನ್ನು ಬೀಜಕ್ಕಾಗಿ ತೆಗೆದಿಡಬೇಕು. ಮೊಳಕೆ ದೊಡ್ಡದಾದರೆ ನೆಡುವ ಹಂತದಲ್ಲಿ ಮುರಿಯದಂತೆ ಜಾಗ್ರತೆ ವಹಿಸುವುದು ಅಗತ್ಯ. ಔಷಧವಾಗಿ, ಆಹಾರ ಪದಾರ್ಥಗಳ ತಯಾರಿಯಲ್ಲೂ ಇದನ್ನು ಬಳಸಲಾಗುತ್ತದೆ.
– ಗಣೇಶ ಕುಳಮರ್ವ