Advertisement

ಸೀತಾದೇವಿ ಪ್ರತಿಮೆ ಮೇಲಿದ್ದ ಮಾಂಗಲ್ಯ ಕದ್ದ ಖದೀಮರು

06:53 AM Jan 10, 2019 | |

ಬೆಂಗಳೂರು: ಸರಸ್ವತಿ ನಗರದಲ್ಲಿರುವ ಶ್ರೀ ವೀರಾಂಜನೇಯ ದೇವಾಲಯಕ್ಕೆ ಕನ್ನ ಹಾಕಿರುವ ಖದೀಮರು ಸೀತಾದೇವಿ ಪ್ರತಿಮೆಯ ಎರಡು ಮಾಂಗಲ್ಯ ಸೇರಿ ಮೂರು ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

Advertisement

ಈ ಕುರಿತು ದೇವಾಲಯದ ಸಮಿತಿ ಕಾರ್ಯದರ್ಶಿ ವೈ.ಎ.ಸುಬ್ರಾಮಯ್ಯ ವಿಜಯನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸೋಮವಾರ 8.30ರ ಸುಮಾರಿಗೆ ಅರ್ಚಕ ರಾಘವೇಂದ್ರ ಅವರು ಬೀಗ ಹಾಕಿಕೊಂಡು ಹೋಗಿದ್ದಾರೆ. ಅದೇ ದಿನ ರಾತ್ರಿ ದೇವಾಲಯದ ಬಾಗಿಲಿನ ಬೀಗ ಒಡೆದು ಗರ್ಭಗುಡಿ ಪ್ರವೇಶಿಸಿರುವ ಕಳ್ಳರು, ಆಂಜನೇಯ ವಿಗ್ರಹದ ಬೆಳ್ಳಿ ಗದೆ, ಶ್ರೀರಾಮ ಹಾಗೂ ಸೀತೆ, ಲಕ್ಷ್ಮಣ ವಿಗ್ರಹಗಳ ಬೆಳ್ಳಿಯ ಕಿರೀಟಗಳು, ಎರಡು ಮಾಂಗಲ್ಯ, ಚಿನ್ನದ ನಾಮ, ಚಿನ್ನದ ಕಣ್ಣು, 13 ಬೆಳ್ಳಿ ಲೋಟ, ಬೆಳ್ಳಿ ತಟ್ಟೆ ಸೇರಿ ಸುಮಾರು ಮೂರು ಲಕ್ಷ ರೂ. ಮೌಲ್ಯದ ಆಭರಣಗಳನ್ನು ಕದ್ದೊಯ್ದಿದ್ದಾರೆ. ಮಂಗಳವಾರ ಮುಂಜಾನೆ 5.30ರ ಸುಮಾರಿಗೆ ಅರ್ಚಕ ರಾಘವೇಂದ್ರ ಅವರು ಎಂದಿನಂತೆ ದೇವಾಲಯದ ಬೀಗ ತೆರೆಯಲು ಬಂದಾಗ ಕೃತ್ಯ ಬೆಳಕಿಗೆ ಬಂದಿದೆ.

ದೇವಾಲಯದ ಕಳವು ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ದೇವಾಲಯಕ್ಕೆ ಸಿಸಿಟಿವಿ ಅಳವಡಿಕೆಯಾಗಿಲ್ಲ. ದೇವಾಲಯದ ಕಟ್ಟಡದ ದುರಸ್ಥಿ ಕಾರ್ಯ ನಡೆಯುತ್ತಿದ್ದು, ಈ ಹಿಂದೆ ಇದ್ದ ಭದ್ರತಾ ಸೈರನ್‌ ಕೂಡ ತೆಗೆಯಲಾಗಿತ್ತು, ಸಮೀಪದಲ್ಲಿಯೇ ಇದ್ದ ಪೊಲೀಸ್‌ ಹೊರಠಾಣೆ ನೆಲಸಮಗೊಳಿಸಲಾಗಿದ್ದು, ಪುನರ್‌ ನಿರ್ಮಾಣ ಆಗಬೇಕಿತ್ತು. ಈ ಸಂಧರ್ಭವನ್ನೇ ದುರುಪಯೋಗ ಪಡಿಸಿಕೊಂಡಿರುವ ಕಳ್ಳರು ಕೃತ್ಯ ನಡೆಸಿರುವ ಶಂಕೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next