Advertisement

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

12:19 AM Dec 21, 2024 | Team Udayavani |

ಮಂಗಳೂರು: ಬಾಲಕಿ ಮತ್ತು ವಿವಾಹಿತ ಮಹಿಳೆ ಬಚ್ಚಲು ಮನೆಯಲ್ಲಿ ಸ್ನಾನ ಮಾಡುತ್ತಿದ್ದುದನ್ನು ತನ್ನ ಮೊಬೈಲ್‌ನಲ್ಲಿ ವೀಡಿಯೋ ಮಾಡಿದ ತೋಟ ಬೆಂಗ್ರೆ ನಿವಾಸಿ ರಂಶೀದ್‌ನಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್‌ಟಿಎಸ್‌ಸಿ -1 (ಪೋಕ್ಸೋ) ಐದು ವರ್ಷಗಳ ಕಾರಾಗೃಹ ಶಿಕ್ಷೆ ಮತ್ತು 15 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.

Advertisement

ಬಾಲಕಿ ಹಾಗೂ ವಿವಾಹಿತ ಮಹಿಳೆ ಮನೆಯಲ್ಲಿ ಬಾತ್‌ರೂಂನಲ್ಲಿ ಸ್ನಾನ ಮಾಡುತ್ತಿದ್ದುದನ್ನು ರಂಶೀದ್‌ 2024ರ ಜುಲೈ 5 ಮತ್ತು 7ರಂದು ರಾತ್ರಿ 8-9 ಗಂಟೆಯ ನಡುವೆ ತನ್ನ ಮೊಬೈಲ್‌ನಲ್ಲಿ ವೀಡಿಯೋ ಮಾಡಿಕೊಂಡಿದ್ದ. ಜು. 16ರಂದು ಇನ್ನೊಂದು ಮನೆಯ ಟೆರೇಸ್‌ ಮೇಲೆ ವೀಡಿಯೋ ಮಾಡುವ ಉದ್ದೇಶದಿಂದ ಹೋಗಿದ್ದು, ಇದನ್ನು ಮನೆಯವರು ಗಮನಿಸಿ ಆತನನ್ನು ಯಾರೆಂದು ಕೂಗಿದಾಗ ಆತ ಅಲ್ಲಿಂದ ಹಾರಿ ಹೋಗಿದ್ದ. ಈ ವೇಳೆ ಆತನ ಮೊಬೈಲ್‌ ಕೆಳಗೆ ಬಿದ್ದಿದೆ. ಮೊಬೈಲ್‌ ವಶಪಡಿಸಿಕೊಂಡ ಮನೆಯವರು ಆತನನ್ನು ಪತ್ತೆ ಹಚ್ಚಿ ಆತನ ಮೂಲಕವೇ ಮೊಬೈಲ್‌ನ ಲಾಕ್‌ ತೆಗೆಸಿ ನೋಡಿದಾಗ ಬಾತ್‌ರೂಂನಲ್ಲಿ ಸ್ನಾನ ಮಾಡುತ್ತಿದ್ದ ವೀಡಿಯೋ ಇತ್ತು. ಈ ಬಗ್ಗೆ ಜು. 17ರಂದು ಪಣಂಬೂರು ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪ್ರಕರಣದ ಭಾಗಶಃ ತನಿಖೆಯನ್ನು ಪಣಂಬೂರು ಠಾಣೆಯ ಪಿಎಸ್‌ಐ ರಾಘವೇಂದ್ರ ಅವರು ಮಾಡಿದ್ದು, ಪಿಎಸ್‌ಐ ಶ್ರೀಕಲಾ ಅವರು ತನಿಖೆ ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ಕೈಗೆತ್ತಕೊಂಡ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್‌ಟಿಎಸ್‌ಸಿ -1 (ಪೋಕ್ಸೋ)ಯ ನ್ಯಾಯಾಧೀಶ ವಿನಯ್‌ ದೇವರಾಜ್‌ ಅವರು, ರಂಶೀದ್‌ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಪ್ರಕರಣದ ಸಂತ್ರಸ್ತರಿಗೆ 1 ಲಕ್ಷ ರೂ. ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನ್ಯಾಯಾಧೀಶರು ನಿರ್ದೇಶನ ನೀಡಿದ್ದಾರೆ. ಸರಕಾರದ ಪರ ವಿಶೇಷ ಸರಕಾರಿ ಅಭಿಯೋಜಕಿ ಸಹನಾ ದೇವಿ ಬೋಳೂರು ವಾದಿಸಿದ್ದರು.

5 ತಿಂಗಳಲ್ಲೇ ತೀರ್ಪು ಪ್ರಕಟ
ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾದ 5 ತಿಂಗಳಲ್ಲಿಯೇ ತೀರ್ಪು ಪ್ರಕಟವಾಗಿದೆ. ಸಂತ್ರಸ್ತ ಬಾಲಕಿಯ ತಾಯಿ ಪ್ರಕರಣದಲ್ಲಿ ತನ್ನ ಮಗಳಿಗೆ ನ್ಯಾಯವೊದಗಿಸುವ ನಿಟ್ಟಿನಲ್ಲಿ ನ್ಯಾಯಾಲಯದಲ್ಲಿ ಹೋರಾಟ ನಡೆಸಿ ಜಯಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯ ಮೊಬೈಲನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಪ್ರಯೋಗಾಲಯದ ವರದಿಯಲ್ಲಿ ಮೊಬೈಲ್‌ನಲ್ಲಿ ಆತನೇ ವೀಡಿಯೋ ಮಾಡಿರುವುದು, ವೀಡಿಯೋದಲ್ಲಿರುವ ಸಂತ್ರಸ್ತೆಯ ಚಿತ್ರಗಳು ಹೊಂದಿಕೆಯಾಗುತ್ತದೆ ಎಂದು ಉಲ್ಲೇಖಿಸಲಾಗಿದೆ.

Advertisement

ಜಾಗೃತಿ ಮೂಡಿಸುವುದು ಅಗತ್ಯ
ಜಿಲ್ಲೆಯಲ್ಲಿ ಕಳೆದ 6 ತಿಂಗಳಲ್ಲಿ ನ್ಯಾಯಾಲಯದ ಮುಂದೆ ಇಂತಹದ್ದೆ 14 ಪೋಕ್ಸೋ ಪ್ರಕರಣಗಳು ವಿಚಾರಣೆ ಬಂದಿದ್ದು ಇದೊಂದು ಆತಂಕಕಾರಿ ಬೆಳವಣಿಗೆ. ಯುವ ಜನತೆ ಮೊಬೈಲ್‌ನಲ್ಲಿ ಅಶ್ಲೀಲ ವೀಡಿಯೋ ಚಿತ್ರೀಕರಣ ಮಾಡುವುದರಿಂದ ಆಗುವ ಪರಿಣಾಮಗಳು ಕುರಿತಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ತಾಲೂಕು ಮಟ್ಟದಲ್ಲಿ ತಾಲೂಕು ವಕೀಲರನ್ನೊಳಗೊಂಡಂತೆ ವಿವಿಧ ಕ್ಷೇತ್ರಗಳ 6 ಮಂದಿಯ ಸಮಿತಿ ರಚಿಸಿ ತಾಲೂಕು ಮಟ್ಟದಲ್ಲಿ ಪ್ರತೀ ಆರು ತಿಂಗಳಿಗೊಮ್ಮೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ನ್ಯಾಯಧೀಶರು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next