Advertisement

Mangaluru: ದಂಡಕ್ಕೆ ಬಗ್ಗದ ಚಾಲಕರು; ಲೆಕ್ಕಕ್ಕಿಲ್ಲದ ‘ನೋ ಹಾರ್ನ್ ಝೋನ್‌’

02:45 PM Sep 26, 2024 | Team Udayavani |

ಮಹಾನಗರ: ನಗರದಲ್ಲಿ ಕರ್ಕಶ ಹಾರ್ನ್ ಹಾವಳಿ ಮುಂದುವರಿದಿದ್ದು ಚಾಲಕರು ಪೊಲೀಸರ ಕೇಸು, ದಂಡಕ್ಕೆ ಕ್ಯಾರೇ ಅನ್ನುತ್ತಿಲ್ಲ !

Advertisement

ಕರ್ಕಶ ಹಾರ್ನ್ ಬಳಕೆ ಯಲ್ಲಿ ಸಿಟಿ, ಸರ್ವಿಸ್‌, ಎಕ್ಸ್‌ಪ್ರೆಸ್‌ ಸಹಿತ ಖಾಸಗಿ ಬಸ್‌ಗಳ ಕೊಡುಗೆ ಹೆಚ್ಚು. ಸಮಯದ ಅಭಾವ, ಟ್ರಾಫಿಕ್‌ ಜಾಮ್‌ ಮೊದಲಾದ ಕಾರಣಗಳನ್ನು ಮುಂದಿಟ್ಟು ಬಸ್‌ಗಳ ಚಾಲಕರು ಕರ್ಕಶ ಹಾರ್ನ್ ಬಳಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಅದು ಅನಿವಾರ್ಯ ಎಂಬುದು ಅವರ ವಾದ. ಆದರೆ ಕೆಲವು ಚಾಲಕರಿಗೆ ಈ ರೀತಿಯ ಕರ್ಕಶ ಹಾರ್ನ್ ಬಳಕೆ ಚಾಳಿಯಾಗಿದೆ. ಸ್ವಲ್ಪವೂ ವ್ಯವಧಾನ ಇಲ್ಲದೆ ಕರ್ಕಶ ಹಾರ್ನ್ನ್ನೇ ಬಳಕೆ ಮಾಡುತ್ತಾರೆ. ಬಸ್‌ ಮಾತ್ರವಲ್ಲದೆ, ಇತರ ಕೆಲವು ವಾಹನಗಳಲ್ಲಿಯೂ ಕರ್ಕಶ ಹಾರ್ನ್ ಬಳಕೆ ನಿರಾತಂಕವಾಗಿ ಮುಂದುವರಿದಿದೆ ಎನ್ನುವುದು ಅನೇಕ ಮಂದಿ ಇತರ ವಾಹನ ಸವಾರರು, ಚಾಲಕರು, ಸವಾರರ ದೂರು.

ಪೊಲೀಸರ ಕಣ್ತಪ್ಪಿಸಿ ಬಳಕೆ
ಕೆಲವು ಚಾಲಕರು ರಾಜಾರೋಷವಾಗಿ ಯಾವುದೇ ಅಂಜಿಕೆ ಹಿಂಜರಿಕೆ ಇಲ್ಲದೆ ಎಲ್ಲೆಡೆಯೂ ಕರ್ಕಶ ಹಾರ್ನ್ ಬಳಕೆ ಮಾಡುತ್ತಿದ್ದರೆ, ಇನ್ನು ಕೆಲವು ಚಾಲಕರು ಸಾಮಾನ್ಯವಾಗಿ ಪೊಲೀಸರು ಇರಬಹುದಾದ ಸ್ಥಳದಲ್ಲಿ ಎಚ್ಚರ ವಹಿಸುತ್ತಾರೆ. ಉಳಿದ ಕಡೆಗಳಲ್ಲಿ ಬಳಕೆ ಮಾಡುತ್ತಾರೆ.

ಕಿತ್ತೆಸೆದರೆ ಸಿಕ್ಕಿಸುತ್ತಾರೆ!
ಕರ್ಕಶ ಹಾರ್ನ್ಗಳನ್ನು ಬಳಕೆ ಮಾಡುವವರ ವಿರುದ್ಧ ಆಗಾಗ್ಗೆ ಸಂಚಾರಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ದಂಡ ವಿಧಿಸುವ ಜತೆಗೆ ಕರ್ಕಶ ಹಾರ್ನ್ಗಳನ್ನು ತೆಗೆಸುತ್ತಾರೆ. ಆದರೆ ಅದೇ ಬಸ್‌ಗಳು ಮರುದಿನ ಅದೇ ರೀತಿಯ ಕರ್ಕಶ ಹಾರ್ನ್ಗಳನ್ನು ಅಳವಡಿಸಿರುತ್ತವೆ.

ಕಡಿಮೆ ಬೆಲೆಗೆ ಇಂತಹ ಹಾರ್ನ್ಗಳು ದೊರೆಯುತ್ತಿರುವುದು ಕೂಡ ಚಾಲಕರಿಗೆ ಅನುಕೂಲವಾಗಿದೆ.

Advertisement

ಹೆಸರಿಗಷ್ಟೇ ಹಾರ್ನ್ ನಿಷೇಧಿತ ಪ್ರದೇಶ
ನಗರದ ಸ್ಟೇಟ್‌ಬ್ಯಾಂಕ್‌ನ ರಾವ್‌ ಆ್ಯಂಡ್‌ ರಾವ್‌ ವೃತ್ತ, ಲೇಡಿಗೋಶನ್‌ ಆಸ್ಪತ್ರೆಯಿಂದ ಕ್ಲಾಕ್‌ಟವರ್‌, ಲೇಡಿಗೋಶನ್‌ನಿಂದ ಕಲ್ಪನಾ ಸ್ವೀಟ್ಸ್‌ ವರೆಗೆ, ಹಂಪನಕಟ್ಟೆ ಜಂಕ್ಷನ್‌ನಿಂದ ಮಿಲಾಗ್ರಿಸ್‌ ಚರ್ಚ್‌ವರೆಗೆ, ಅಂಬೇಡ್ಕರ್‌ ವೃತ್ತ, ಬಾವುಟಗುಡ್ಡೆ ಸಹಿತ 10ಕ್ಕೂ ಅಧಿಕ ಸ್ಥಳಗಳಲ್ಲಿ ಹಾರ್ನ್ ಬಳಕೆಯನ್ನು ನಿಷೇಧಿಸಿ ಕಳೆದ ವರ್ಷದ ನವೆಂಬರ್‌ನಲ್ಲಿ ಪೊಲೀಸ್‌ ಆಯುಕ್ತರು ಆದೇಶ ಹೊರಡಿಸಿದ್ದರು. ಆದೇಶ ಉಲ್ಲಂ ಸಿದರೆ ಭಾರತೀಯ ಮೋಟಾರು ವಾಹನ ಅ ಧಿನಿಯಮ (ತಿದ್ದುಪಡಿ) 2019ರ ಕಲಂ 194 (ಎಫ್‌)ರಂತೆ ಹಾರ್ನ್ ನಿಷೇ ಧಿಸಿದ ಸಂಚಾರ ಸೂಚನ ಫಲಕ ಇರುವ ಪ್ರದೇಶದಲ್ಲಿ ಹಾರ್ನ್ ಬಳಸಿದ್ದಲ್ಲಿ ಅಂತಹ ವಾಹನ ಚಾಲಕರ ಮೇಲೆ ಮೊದಲನೆಯ ಉಲ್ಲಂಘನೆಗೆ 1,000 ರೂ., ಎರಡನೇಯ ಹಾಗೂ ತದನಂತರದ ಪ್ರತಿ ಉಲ್ಲಂಘನೆಗೆ 2,000 ರೂ. ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದ್ದರು. ಆದರೆ ಆದೇಶ ಇನ್ನೂ ಕೂಡ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿಲ್ಲ.

3 ತಿಂಗಳಲ್ಲಿ 382 ಕೇಸು; 1.91 ಲಕ್ಷ ರೂ. ದಂಡ ಸಂಗ್ರಹ
ಸಂಚಾರ ಪೊಲೀಸರು ಕರ್ಕಶ ಹಾರ್ನ್ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಈ ವರ್ಷದ ಜುಲೈಯಿಂದ ಸೆ. 25ರ ವರೆಗೆ 382 ಪ್ರಕರಣಗಳನ್ನು ದಾಖಲಿಸಿ 1,91,600 ರೂ. ದಂಡ ಸಂಗ್ರಹಿಸಿ ದ್ದಾರೆ. 130 ಕರ್ಕಶ ಹಾರ್ನ್ಗಳನ್ನು ತೆಗೆಸಿದ್ದಾರೆ. ಈ ವರ್ಷದಲ್ಲಿ ಒಟ್ಟು 1,083 ಪ್ರಕರಣಗಳನ್ನು ದಾಖಲಿಸಿ 5,39,700 ರೂ. ದಂಡ ವಿಧಿಸಿದ್ದಾರೆ. 368 ಹಾರ್ನ್ಗಳನ್ನು ತೆಗೆಸಿದ್ದಾರೆ. ಆದಾಗ್ಯೂ ಕರ್ಕಶ ಹಾರ್ನ್ ಬಳಕೆ ಮುಂದುವರಿದಿದೆ!

ನಗರದಲ್ಲಿ ಕರ್ಕಶ ಹಾರ್ನ್ ಬಳಕೆಗೆ ಬಿದ್ದಿಲ್ಲ ಬ್ರೇಕ್‌ !
ಕೆಲವು ಸ್ಥಳಗಳಲ್ಲಿ ಯಾವುದೇ ರೀತಿಯ ಹಾರ್ನ್ ಬಳಕೆ ಮಾಡುವಂತಿಲ್ಲ ಎಂಬುದಾಗಿ ಹಾರ್ನ್ ನಿಷೇಧ ಪ್ರದೇಶಗಳನ್ನು ಗುರುತಿಸಿ ಆದೇಶ ಮಾಡಿರುವುದು ಉತ್ತಮ ಕ್ರಮ. ಇದರ ಪರಿಣಾಮಕಾರಿ ಅನುಷ್ಠಾನ ಸಾಧ್ಯವಾಗದಿದ್ದರೂ ಕರ್ಕಶ ಹಾರ್ನ್ ಬಳಕೆಗಾದರೂ ಕಡಿವಾಣ ಹಾಕಬೇಕು ಎಂಬುದು ನಗರದ ಸಾರ್ವಜನಿಕರ ಆಗ್ರಹ.

Advertisement

Udayavani is now on Telegram. Click here to join our channel and stay updated with the latest news.

Next