Advertisement

Mangaluru ಮರಳುಗಾರಿಕೆ ತತ್‌ಕ್ಷಣ ಆರಂಭಕ್ಕೆ ಒತ್ತಾಯ

12:16 AM Nov 11, 2023 | Team Udayavani |

ಮಂಗಳೂರು: ದಕ್ಷಿಣ ಕನ್ನಡದಲ್ಲಿ ಎರಡು ವರ್ಷಗಳಿಂದ ಸಿಆರ್‌ಝಡ್‌ ವಲಯ ಮತ್ತು ಆರು ತಿಂಗಳಿನಿಂದ ನಾನ್‌ ಸಿಆರ್‌ಝಡ್‌ ವಲಯಗಳಲ್ಲಿ ಸ್ಥಗಿತಗೊಂಡ ಮರಳುಗಾರಿಕೆಯನ್ನು ತತ್‌ಕ್ಷಣದಿಂದ ಆರಂಭಿಸಲು ಜಿಲ್ಲಾಡಳಿತ ಅನುಮತಿ ನೀಡಬೇಕು; ಇಲ್ಲವಾದರೆ ಮುಂಬರುವ ದಿನದಲ್ಲಿ ಮತ್ತಷ್ಟು ಉಗ್ರ ಪ್ರತಿಭಟನೆ ನಡೆಸಲು ನಿರ್ಮಾಣ ಕ್ಷೇತ್ರಕ್ಕೆ ಸಂಬಂಧಿಸಿದ ದ.ಕ. ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಎಚ್ಚರಿಕೆ ನೀಡಿದ್ದಾರೆ.

Advertisement

ಸಿವಿಲ್‌ ಗುತ್ತಿಗೆದಾರರ ಸಂಘದ ನೇತೃತ್ವದಲ್ಲಿ ನಗರದ ಪುರಭವನದ ಮುಂಭಾಗ ಶುಕ್ರವಾರ ಜರಗಿದ ಪ್ರತಿಭಟನೆಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಮಹಾಬಲ ಕೊಟ್ಟಾರಿ ಅವರು, ಮರಳು ಲಭ್ಯವಿಲ್ಲದೆ ಸರ್ವ ವಲಯಕ್ಕೂ ಸಂಕಷ್ಟ ಎದುರಾಗಿದೆ. ಹೊರ ರಾಜ್ಯ, ಜಿಲ್ಲೆಗಳಿಂದ ದುಡಿಮೆಗಾಗಿ ಬಂದಿರುವ ಕಾರ್ಮಿಕರು ವಲಸೆ ಹೋಗುತ್ತಿದ್ದಾರೆ. ಗುತ್ತಿಗೆದಾರರಿಗೆ, ಎಂಜಿನಿಯರ್ಸ್‌, ಸೂಪರ್‌ವೈಸರ್ಸ್‌, ಮರದ ಕೆಲಸಗಾರರು, ಕಬ್ಬಿಣದ ಕೆಲಸಗಾರರು, ವಿದ್ಯುತ್‌, ಪ್ಲಂಬಿಂಗ್‌ ಕೆಲಸಗಾರರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದರು.

ಸ್ಪೀಕರ್‌ ಯು.ಟಿ.ಖಾದರ್‌ಗೆ ಮನವಿ
ಸಂಘದ ನಿಯೋಗ ಸ್ಪೀಕರ್‌ ಯು.ಟಿ. ಖಾದರ್‌ ಅವರನ್ನು ಭೇಟಿಯಾಗಿ ಮರಳು ಪೂರೈಕೆಗೆ ಶೀಘ್ರ ಅವಕಾಶ ಮಾಡಿಕೊಡುವಂತೆ ಮನವಿ ಸಲ್ಲಿಸಿದರು. ಡಿ.ಸಿ. ಜತೆಗೆ ಚರ್ಚಿಸುವ ಬಗ್ಗೆ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಜಿಲ್ಲೆಯಲ್ಲಿ ಮರಳು ಅಭಾವವಿಲ್ಲ : ಗಣಿ ಇಲಾಖೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ನಾನ್‌ ಸಿಆರ್‌ಝಡ್‌ ಪ್ರದೇಶದ ನದಿ ಪಾತ್ರಗಳಲ್ಲಿ 25 ಮರಳು ಗಣಿ ಗುತ್ತಿಗೆಗಳನ್ನು ಮಂಜೂರು ಮಾಡಲಾಗಿದ್ದು, ಆ ಪೈಕಿ 24 ಮರಳು ಗಣಿ ಗುತ್ತಿಗೆಗಳು ಚಾಲ್ತಿಯಲ್ಲಿವೆ. ದ.ಕ. ಜಿಲ್ಲೆಯಲ್ಲಿ ಮರಳಿನ ಅಭಾವವಿಲ್ಲ ಎಂದು ಗಣಿ ಇಲಾಖೆ ಸ್ಪಷ್ಟನೆ ನೀಡಿದೆ.

ಮುಂಗಾರಿನ ಹಿನ್ನೆಲೆಯಲ್ಲಿ ಪರಿಸರ ವಿಮೋಚನ ಪತ್ರದಲ್ಲಿ ನಿರ್ದಿಷ್ಟ ಷರತ್ತುಗಳಡಿ ಜೂನ್‌ನಿಂದ ಅ. 15ರ ವರೆಗೆ ಮರಳು ತೆಗೆಯಲು ನಿರ್ಬಂಧವಿದೆ. ಆದರೆ ಮಾನ್ಸೂನ್‌ ಅವಧಿಯಲ್ಲಿ ಈ ಮರಳು ಬ್ಲಾಕ್‌ ಗುತ್ತಿಗೆ ಪ್ರದೇಶಗಳ ಸ್ಟಾಕ್‌ಯಾರ್ಡ್‌ ಗಳಲ್ಲಿ ಸುಮಾರು 1,02,467 ಮೆಟ್ರಿಕ್‌ ಟನ್‌ ಮರಳು ದಾಸ್ತಾನು ಲಭ್ಯವಿದೆ. ಇಲ್ಲಿಯವರೆಗೆ 27,023 ಮೆ.ಟನ್‌ ಪ್ರಮಾಣದ ಮರಳು ಜಿಲ್ಲೆಯಲ್ಲಿನ ಕಾಮಗಾರಿಗಳಿಗೆ ಪೂರೈಕೆಯಾಗಿದ್ದು, ಇನ್ನೂ 75,444 ಮೆ.ಟನ್‌ ಪ್ರಮಾಣದ ಮರಳು ಸ್ಟಾಕ್‌ ಯಾರ್ಡ್‌ಗಳಲ್ಲಿ ಲಭ್ಯವಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

Advertisement

ಅಭಿವೃದ್ಧಿ ಕಾಮಗಾರಿಗಳಿಗೆ ಅಡಚಣೆ ಉಂಟಾಗಬಾರದೆಂದು ಮರಳು ಗುತ್ತಿಗೆದಾರರಿಗೆ ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮ ಗಳಂತೆ 30 ದಿನಗಳ ಕಾಲಾವಕಾಶ ನೀಡಲಾಗಿದೆ. ಜಿಲ್ಲೆಯಲ್ಲಿ 16 ಎಂ-ಸ್ಯಾಂಡ್‌ ಘಟಕಗಳು ಇದ್ದು, ಈ ಘಟಕಗಳಿಂದ ವಾರ್ಷಿಕವಾಗಿ 3,36,400 ಮೆ.ಟನ್‌ ಎಂ-ಸ್ಯಾಂಡ್‌ ಉತ್ಪಾದಿಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next