Advertisement

ರಜತ ಸಂಭ್ರಮ ಸಹಕಾರ ಕ್ಷೇತ್ರಕ್ಕೆ ಸ್ಪೂರ್ತಿ: ಖಾದರ್‌

05:28 AM Jan 02, 2019 | |

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಅವರ ಸಾರ್ಥಕ ಸೇವೆಯ ರಜತ ಸಂಭ್ರಮವು ಸಹಕಾರ ಕ್ಷೇತ್ರ ಮತ್ತು ಸಹಕಾರಿಗಳಿಗೆ ಸ್ಫೂರ್ತಿ ಹಾಗೂ ಪ್ರೇರಣದಾಯಿ ಎಂದು ಸಚಿವ ಯು.ಟಿ. ಖಾದರ್‌ ಹೇಳಿದರು.

Advertisement

ಡಾ| ರಾಜೇಂದ್ರ ಕುಮಾರ್‌ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರಾಗಿ ನಿರಂತರ 25 ವರ್ಷಗಳ ಸೇವೆಯ ಹಿನ್ನೆಲೆಯಲ್ಲಿ ನಗರದ ನೆಹರೂ ಮೈದಾನದಲ್ಲಿ ಜ. 19ರಂದು ಆಯೋಜಿಸಿರುವ ರಜತ ಸಂಭ್ರಮ ಮತ್ತು ನವೋದಯ ಸ್ವ-ಸಹಾಯ ಸಂಘಗಳ ವಿಂಶತಿ ಸಮಾವೇಶದ ಆಮಂತ್ರಣ ಪತ್ರಿಕೆಯನ್ನು ಎಸ್‌ ಸಿಡಿಸಿಸಿ ಬ್ಯಾಂಕಿನ ಸಭಾಂಗಣದಲ್ಲಿ ಮಂಗಳವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು. 

ಸಹಕಾರ ಕ್ಷೇತ್ರದಲ್ಲಿ ನಿಸ್ವಾರ್ಥ ಮತ್ತು ಪ್ರಾಮಾಣಿಕ ಸೇವೆ ಮೂಲಕ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಅವರು ಸಹಕಾರ ರತ್ನ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಸಾಮಾಜಿಕ ಕ್ಷೇತ್ರದಲ್ಲೂ ಅವರು ನೀಡಿರುವ ಕೊಡುಗೆ ಮಹತ್ತರವಾದುದು. ಅವರ ಸೇವೆ ಹಾಗೂ ಸಾಧನೆಯನ್ನು ಗುರುತಿಸಿ ಅಭಿನಂದಿಸುವ ನಿಟ್ಟಿನಲ್ಲಿ ಸಮಾರಂಭ ಆಯೋಜಿಸಿರುವುದು ಅಭಿನಂದನೀಯ ಎಂದರು. ಸಮಾರಂಭದ ಯಶಸ್ಸಿಗೆ ಸರ್ವ ರೀತಿಯ ಸಹಕಾರ ನೀಡುವುದಾಗಿ ಅವರು ಭರವಸೆ ನೀಡಿದರು.

ಮುಖ್ಯ ಅತಿಥಿಯಾಗಿದ್ದ ಶಾಸಕ ವೇದವ್ಯಾಸ ಕಾಮತ್‌ ಮಾತನಾಡಿ, ನಿರಂತರ 25 ವರ್ಷಗಳಿಂದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕೊಂದರ ಅಧ್ಯಕ್ಷರಾಗಿರುವ ಡಾ| ರಾಜೇಂದ್ರ ಕುಮಾರ್‌ ಅವರ ಸೇವೆ ಸಹಕಾರ ಕ್ಷೇತ್ರದಲ್ಲಿ ದಾಖಲೆಯಾಗಿದೆ. ಎಸ್‌ಸಿಡಿಸಿಸಿ ಬ್ಯಾಂಕನ್ನು ಉತ್ತುಂಗಕ್ಕೇರಿಸುವಲ್ಲಿ ಅವರ ಪಾತ್ರ ಹಾಗೂ ನೇತೃತ್ವ ಮಹತ್ತರವಾದುದು ಎಂದರು. ಅಧ್ಯಕ್ಷತೆ ವಹಿಸಿದ್ದ ಅಭಿನಂದನ ಸಮಿತಿಯ ಗೌರವಾಧ್ಯಕ್ಷ, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಅವರು ರಜತ ಸಂಭ್ರಮದ ಯಶಸ್ಸಿಗೆ ಎಲ್ಲ ಸಹಕಾರಿಗಳು ಸಹಭಾಗಿತ್ವ ನೀಡಬೇಕು ಎಂದರು.

ಸಹಕಾರಿ ಮ್ಯೂಸಿಯಂ, ಗ್ರಂಥಾಲಯ
ಅಭಿನಂದನ ಸಮಿತಿ ಅಧ್ಯಕ್ಷ ಐಕಳಬಾವ ದೇವಿ ಪ್ರಸಾದ್‌ ಶೆಟ್ಟಿ ಪ್ರಸ್ತಾವನೆಗೈದು, ರಜತ ಸಂಭ್ರಮದ ಅಂಗವಾಗಿ ಸಹಕಾರಿ ಮ್ಯೂಸಿಯಂ, ಸಹಕಾರಿ ಗ್ರಂಥಾಲಯ ಉದ್ಘಾಟನೆಗೊಳ್ಳಲಿವೆ. ಸಹಕಾರ ವಿಚಾರಗೋಷ್ಠಿ ಆಯೋಜಿಸಲಾಗಿದೆ ಎಂದರು. ದ.ಕ. ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ, ಕರ್ನಾಟಕ ಮೀನು ಮಾರಾಟ ಮಹಾಮಂಡಲದ ಅಧ್ಯಕ್ಷ ಯಶ್‌ಪಾಲ್‌ ಸುವರ್ಣ, ಹಿರಿಯ ಸಹಕಾರಿಗಳಾದ ಸವಣೂರು ಸೀತಾರಾಮ ರೈ, ಸರಳಾ ಕಾಂಚನ್‌, ಅಭಿನಂದನ ಸಮಿತಿಯ ಕಾರ್ಯಾಧ್ಯಕ್ಷ ಭಾಸ್ಕರ ಎಸ್‌. ಕೋಟ್ಯಾನ್‌, ಪ್ರಧಾನ ಕಾರ್ಯದರ್ಶಿ ಸದಾಶಿವ ಉಳ್ಳಾಲ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಎಸ್‌ಸಿಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ವಿನಯ ಕುಮಾರ್‌ ಸೂರಿಂಜೆ, ಬ್ಯಾಂಕಿನ ನಿರ್ದೇಶಕರು ಉಪಸ್ಥಿತರಿದ್ದರು. ಕಾರ್ಯಾಧ್ಯಕ್ಷ ಶಶಿ ಕುಮಾರ್‌ ರೈ ಸ್ವಾಗತಿಸಿ ನಿರೂಪಿಸಿದರು. 

Advertisement

2 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ
ರಜತ ಸಂಭ್ರಮ ಮತ್ತು ವಿಂಶತಿ ಸಮಾವೇಶದಲ್ಲಿ ದ.ಕ., ಉಡುಪಿ ಹಾಗೂ ನೆರೆಯ ಜಿಲ್ಲೆಗಳಿಂದ 2 ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಬೆಳಗ್ಗೆ 9 ಗಂಟೆಗೆ ಎಸ್‌ಸಿಡಿಸಿಸಿ ಬ್ಯಾಂಕಿನ ಆವರಣದಿಂದ ಮೆರವಣಿಗೆ ನಡೆಯಲಿದ್ದು 10.30ಕ್ಕೆ ನೆಹರೂ ಮೈದಾನದಲ್ಲಿ ಸಮಾವೇಶ ಆರಂಭಗೊಳ್ಳಲಿದೆ. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಶ್ರೀ ಕ್ಷೇತ್ರ ಧರ್ಮಸœಳದ ಡಾ| ಡಿ. ವೀರೇಂದ್ರ ಹೆಗ್ಗಡೆ, ರಾಜ್ಯ ಹಾಗೂ ಕೇಂದ್ರ ಸಚಿವರು ಭಾಗವಹಿಸುವರು. ಕಾರ್ಯಕ್ರಮಕ್ಕೆ ಆಗಮಿಸುವ ವಾಹನಗಳಿಗೆ ಸಾಸ್ತಾನ, ಹೆಜಮಾಡಿ, ಮುಕ್ಕ ಟೋಲ್‌ಗೇಟ್‌ಗಳಲ್ಲಿ ಒಂದೊಂದು ಗೇಟನ್ನು ಮುಕ್ತವಾಗಿಡಲಾಗುವುದು. ಅಲ್ಲಲ್ಲಿ ಉಪಾಹಾರ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಭಾಗವಹಿಸುವ ಎಲ್ಲರಿಗೂ ಮಧ್ಯಾಹ್ನದ ಭೋಜನ ವ್ಯವಸ್ಥೆ ಮಾಡಲಾಗಿದೆ ಎಂದು ಐಕಳಬಾವ ದೇವಿಪ್ರಸಾದ್‌ ಶೆಟ್ಟಿ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next