ಕೂಳೂರು: ಒಂದೆಡೆ ಕೂಳೂರಿನ ಹಳೆ ಸೇತುವೆಯ ಮೇಲ್ಭಾಗದಲ್ಲಿ ಡಾಮರು ಹಾಕುವ ಕಾಮಗಾರಿ ನಡೆಯುತ್ತಿದೆ. ಆದರೆ ಅದರ ಸಮೀಪದಲ್ಲಿರುವ ಹೊಸ ಸೇತುವೆಯ ಕೆಳಭಾಗದಲ್ಲಿ ನಿರ್ವಹಣೆ ಕೊರತೆಯಿಂದ ಬಿರುಕು ಹೆಚ್ಚಾಗುತ್ತಿದೆ. ಕೆಲವು ಭಾಗದಲ್ಲಿ ಪ್ಲಾಸ್ಟರಿಂಗ್ ಎದ್ದು ಹೋಗಿ ಕಬ್ಬಿಣ ಕಾಣುತ್ತಿದೆ. ಇದು ಸೇತುವೆಯ ಸುರಕ್ಷೆಯ ಬಗ್ಗೆ ದೊಡ್ಡ ಪ್ರಶ್ನೆ ಏಳುವಂತೆ ಮಾಡಿದೆ.
ಕೂಳೂರಿನ ಹೊಸ ಸೇತುವೆಯನ್ನು 1971ರಲ್ಲಿ ನಿರ್ಮಿಸಲಾಗಿದ್ದು, ಅದರ ಬಳಿಕ ತಳ ಭಾಗದಲ್ಲಿ ಇದುವರೆಗೆ ನಿರ್ವಹಣೆ ಕಾರ್ಯ ನಡೆಸಿಲ್ಲ. ಆದಕಾರಣ ಬೀಮ್ ಹಾಗೂ ಸೇತುವೆಯ ಅಡಿ ಭಾಗದಲ್ಲಿ ಪ್ಲಾಸ್ಟರಿಂಗ್ ಎದ್ದು ಹೋಗುತ್ತಿದೆ. ಹೆಚ್ಚೆಚ್ಚು ಘನ ವಾಹನಗಳು ಓಡಾಡುವ ಸೇತುವೆಯಲ್ಲಿ ಕಂಪನ ಹೆಚ್ಚಾಗಿ ತಳಭಾಗದಲ್ಲಿ ಇಂತಹ ಸಮಸ್ಯೆ ಕಾಣಿಸಿಕೊಳ್ಳುತ್ತಿವೆ. ಆದ್ದರಿಂದ ಪ್ರತಿ ವರ್ಷ ನಿರ್ವಹಣೆ ಮಾಡುವುದು ಅಗತ್ಯ. ಆದರೆ ಇಲ್ಲಿ ನಿರ್ವಹಣೆ ಮಾಡದಿರುವುದೇ ಸಮಸ್ಯೆ ಜೀವಂತವಿರಲು ಕಾರಣ ಎಂದು ಹೇಳಲಾಗುತ್ತಿದೆ.
ಹೊಸ ಸೇತುವೆಯ ಎರಡನೇ ಪಿಲ್ಲರ್ ಹಾಗೂ ಮೂರನೇ ಸ್ಲ್ಯಾಬ್ ನ ಅಡಿ ಭಾಗದಲ್ಲಿ ಮಳೆ ನೀರು ಸೋರಿಕೆಯಾದ ಕಡೆಯಲ್ಲೆಲ್ಲ ಕಬ್ಬಿಣದ ರಾಡ್‌ಗಳು ಮೇಲೆದ್ದಿವೆ. ತಳಭಾಗದಲ್ಲೂ ಇಂಥ ಸಮಸ್ಯೆ ಕಾಣಿಸಿಕೊಂಡಿದೆ.
ಕಳೆದ ಮಳೆಗಾಲದಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಸೇತುವೆಯ ಕಾಮಗಾರಿಗೆ ಹಾಕಲಾದ ಮಣ್ಣನ್ನು ತೆಗೆಯದ ಪರಿಣಾಮ ಕೆಲವು ಪಿಲ್ಲರ್‌ಗಳಿಗೆ ನದಿ ನೀರು ರಭಸವಾಗಿ ಹೊಡೆದಿತ್ತು. ಆ ಒತ್ತಡವೂ ಗಾರೆ ಕರಗಿ ಹೋಗಲು ಕಾರಣ ಎಂದು ಹೇಳಲಾಗುತ್ತಿದೆ.
ಸೇತುವೆಯ ಸುರಕ್ಷೆಗಾಗಿ ತುರ್ತು ನಿರ್ವಹಣೆ ಕಾಮಗಾರಿ ನಡೆಸಬೇಕಾಗಿದ್ದು, ಈ ಬಗ್ಗೆ ಜಿಲ್ಲಾಡಳಿತ ಹೆದ್ದಾರಿ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.