Advertisement

ಮಂಗಳೂರು ಐಟಿ ಕಚೇರಿ ಎತ್ತಂಗಡಿ; ಜಿಲ್ಲೆಯ ಆರ್ಥಿಕತೆ ಸರ್ವನಾಶ ಯತ್ನ: ಜೆ.ಆರ್‌. ಲೋಬೋ

11:19 PM Sep 05, 2020 | mahesh |

ಮಂಗಳೂರು: ಆದಾಯ ತೆರಿಗೆಯ ಮಂಗಳೂರು ಪ್ರಧಾನ ಆಯುಕ್ತರ ಕಚೇರಿ(ಪಿಸಿಐಟಿ)ಯನ್ನು ಗೋವಾ ಕಚೇರಿ ಜತೆ ವಿಲೀನಕ್ಕೆ ಮುಂದಾಗಿ ಬಿಜೆಪಿ ಸರಕಾರವು ದ.ಕ. ಜಿಲ್ಲೆಯ ಆರ್ಥಿಕತೆಯನ್ನು ಸರ್ವನಾಶ ಮಾಡಲು ಹೊರಟಿದೆ ಎಂದು ಮಾಜಿ ಶಾಸಕ ಲೋಬೋ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ಶ್ರೀನಿವಾಸ ಮಲ್ಯ, ಟಿಎಂಎ ಪೈ, ಜನಾರ್ದನ ಪೂಜಾರಿ, ಆಸ್ಕರ್‌, ಜಾರ್ಜ್‌, ವೀರಪ್ಪ ಮೊಲಿ ಅವರಂತಹ ಜನಪ್ರತಿನಿಧಿಗಳು ಕಾರ್ಯ ನಿರ್ವಹಿಸಿದ್ದಾರೆ. ಆದರೆ ಬಿಜೆಪಿ ಸರಕಾರ ನಗರದ ಅಭಿವೃದ್ಧಿಗೆ ಪೂರಕವಾಗಿದ್ದ ಐಟಿ ಕಚೇರಿಯನ್ನೇ ಸ್ಥಳಾಂತರಿಸುತ್ತಿದೆ ಎಂದರು.

Advertisement

ಜಿಲ್ಲೆಗೆ ನಿರಂತರ ಅನ್ಯಾಯ
ದ.ಕ. ಜಿಲ್ಲೆ ಅಭಿವೃದ್ಧಿಯಾಗಬೇಕಾದರೆ ಐಟಿ ಕಚೇರಿ ವಿಭಾಗ ಮಂಗಳೂರಿನಲ್ಲೇ ಇರಬೇಕು. ಗೋವಾಕ್ಕೆ ಹೋಲಿಕೆ ಮಾಡಿದರೆ ದ.ಕ. ಜಿಲ್ಲೆ ಕೈಗಾರಿಕೆ, ವ್ಯಾಪಾರದಲ್ಲಿ ಮುಂದಿದೆ. ಕೇಂದ್ರ ಸರಕಾರದ ಆರ್ಥಿಕ ಸಚಿವಾಲಯದಿಂದ ನಮ್ಮ ಜಿಲ್ಲೆಗೆ ನಿರಂತರ ಅನ್ಯಾಯವಾಗುತ್ತಿದೆ. ಜಿಲ್ಲೆಯ ಪ್ರಮುಖ ಬ್ಯಾಂಕ್‌ಗಳಾಗಿದ್ದ ವಿಜಯ ಬ್ಯಾಂಕ್‌, ಕಾರ್ಪೊರೇಶನ್‌ ಬ್ಯಾಂಕ್‌, ಸಿಂಡೀಕೇಟ್‌ ಬ್ಯಾಂಕ್‌ ಮೊದಲಾದವುಗಳನ್ನು ವಿಲೀನಗೊಳಿಸಿ ಹಿರಿಯರು ಕಟ್ಟಿ ಬೆಳೆಸಿದ ವಾಣಿಜ್ಯ ಕೇಂದ್ರಗಳನ್ನೇ ಸಂಪೂರ್ಣ ನಾಶ ಮಾಡಲಾಗಿದೆ ಎಂದು ಆರೋಪಿಸಿದರು.

ಮಂಗಳೂರು ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸುವ ಬದಲು ಅದಾನಿಗೆ ಮಾರಾಟ ಮಾಡಲಾಗಿದೆ. ಮಂಗಳೂರು-ಬೆಂಗಳೂರು ನಡುವಿನ ಪ್ರಯಾಣವನ್ನು ಅತ್ಯಂತ ಕಡಿಮೆಗೊಳಿಸುವ ಸುರಂಗ ಮಾರ್ಗದ ಬಗ್ಗೆ ಮಾಜಿ ಸಚಿವ ಆಸ್ಕರ್‌ ಫೆರ್ನಾಂಡಿಸ್‌ ರೂಪಿಸಿದ್ದ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ. ಮಂಗಳೂರು ಕೇಂದ್ರ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಭರವಸೆಯನ್ನು ಹುಸಿಗೊಳಿಸಲಾಗಿದೆ. ಹೀಗಿರುವಾಗ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದರೂ ದ.ಕ. ಜಿಲ್ಲೆಗೆ ನೀಡಿರುವ ಕೊಡುಗೆ ಏನು? ಎಂದು ಪ್ರಶ್ನಿಸಿದರು.  ಕಾಂಗ್ರೆಸ್‌ ನಾಯಕರಾದ ಪ್ರಭಾಕರ ಶ್ರೀಯಾನ್‌, ಪ್ರಕಾಶ್‌ ಸಾಲ್ಯಾನ್‌, ವಿಶ್ವಾಸ್‌ ಕುಮಾರ್‌ದಾಸ್‌, ಟಿ.ಕೆ. ಸುಧೀರ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

ಕೆಸಿಸಿಐ ವಿರೋಧ
ಮಂಗಳೂರು: ಆದಾಯ ತೆರಿಗೆ ಪ್ರಧಾನ ಆಯುಕ್ತರ ಕಚೇರಿಯನ್ನು ಯಾವುದೇ ಕಾರಣಕ್ಕೂ ಗೋವಾ ಕಚೇರಿಯೊಂದಿಗೆ ವಿಲೀನ ಮಾಡಬಾರದು ಎಂದು ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ವತಿಯಿಂದ ಹೊಸದಿಲ್ಲಿಯ ಸೆಂಟ್ರಲ್‌ ಬೋರ್ಡ್‌ ಆಫ್‌ ಡೈರೆಕ್ಟ್ ಟ್ಯಾಕ್ಸ್‌ನ ಅಧ್ಯಕ್ಷ ಪ್ರಮೋದ್‌ ಚಂದ್ರ ಎಂ. ಅವರಿಗೆ ಗುರುವಾರ ಮನವಿ ಸಲ್ಲಿಸಿದ್ದಾರೆ. ಕೇಂದ್ರ ಸಚಿವರಾದ ನಿರ್ಮಲಾ, ಡಿ.ವಿ., ಸಂಸದರಾದ ನಳಿನ್‌, ಶೋಭಾ, ಅನಂತ್‌ ಕುಮಾರ್‌ ಹೆಗಡೆ, ದ.ಕ. ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೂ ಮನವಿ ಸಲ್ಲಿಸಲಾಗಿದೆ.

ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮನವಿ
ಉಡುಪಿ, ಸೆ. 5: ಪಿಸಿಐಟಿ ಕಚೇರಿಯನ್ನು ಮಂಗಳೂರಿನಲ್ಲೇ ಉಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ರಾಸಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. , ಸಂಸದರಾದ ನಳಿನ್‌, ಶೋಭಾ ಕರಂದ್ಲಾಜೆ ಅವರಿಗೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ವಿನಂತಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next