ಮಂಗಳೂರು: ಶೋಷಣೆ ಎಲ್ಲ ರಂಗದಲ್ಲೂ ಇದೆ. ಸಿನೆಮಾಕ್ಕೆ ಮಾತ್ರ ಸಮಿತಿ ರಚಿಸುವುದರಲ್ಲಿ ಅರ್ಥವಿಲ್ಲ. ಪ್ರತಿಯೊಂದಕ್ಕೂ ಸಮಿತಿ ಮಾಡಿದ್ದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ. ಅಲ್ಲಿಂದ ಸಮಸ್ಯೆಗಳು ಶುರುವಾಗುತ್ತವೆ. ಕೆಲಸ ಇದ್ದವರು ಯಾರೂ ಇಂತಹ ಒತ್ತಾಯ ಮಾಡುವುದಿಲ್ಲ ಎಂದು ಖ್ಯಾತ ಹಿನ್ನೆಲೆ ಗಾಯಕ ಹಾಗೂ ಸಂಗೀತ ನಿರ್ದೇಶಕ ಡಾ| ಗುರುಕಿರಣ್ ಹೇಳಿದರು.
ಮಂಗಳೂರಿನಲ್ಲಿ ಶುಕ್ರವಾರ ಪತ್ರಕರ್ತರ ಜತೆಗೆ ಮಾತನಾಡಿದ ಅವರು, ದೌರ್ಜನ್ಯ ನಡೆಯದ ಕ್ಷೇತ್ರ ಯಾವುದಿದೆ? ಉಳಿದ ಕ್ಷೇತ್ರಗಳಲ್ಲಿ ಯಾವ ಕ್ರಮ ಕೈಗೊಂಡಿದ್ದಾರೆ? ಸಿನೆಮಾ ರಂಗ ಮೊದಲೇ ಸಂಕಷ್ಟದಲ್ಲಿದೆ. ವಿಪರೀತ ನಿಯಮಗಳಿಂದಾಗಿ ಸಿನೆಮಾ ಕ್ಷೇತ್ರ ಕಂಗೆಟ್ಟಿದೆ. ಸಿನೆಮಾ ಕ್ಷೇತ್ರವನ್ನು ಬೆಳೆಯಲು ಬಿಡಿ ಎಂದರು.
ದರ್ಶನ್ ಪ್ರಕರಣವು ಸಿನೆಮಾ ರಂಗದ ಮೇಲೆ ಪರಿಣಾಮ ಬೀರೀತೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ದರ್ಶನ್ ಬಂಧನವಾಗಿರುವುದು ವೈಯುಕ್ತಿಕ ವಿಷಯಕ್ಕೆ. ಅದಕ್ಕೂ ಸಿನೆಮಾ ರಂಗಕ್ಕೂ ಯಾವುದೇ ಸಂಬಂಧವಿಲ್ಲ. ದರ್ಶನ್ ಸಿನೆಮಾ ನಟ ಎಂದು ಆ ರೀತಿ ಮಾಡಿದ್ದಲ್ಲ. ವೈಯಕ್ತಿಕ ವಿಚಾರಕ್ಕೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ರಾಜಕುಮಾರ್ ಒಂದು ಸಿದ್ಧಾಂತ ಹೊಂದಿದ್ದರು. ಆ ಕಾರಣದಿಂದ ಅವರಿಗೆ ಜನ ಇಂದಿಗೂ ಗೌರವ ನೀಡುತ್ತಾರೆ. ಎಲ್ಲರೂ ರಾಜಕುಮಾರ್ ಆಗಲು ಅಸಾಧ್ಯ ಎಂದರು.
ಘಟನೆ ಸಂದರ್ಭ ಅಲ್ಲಿ ಏನು ನಡೆದಿದೆ ಎಂದು ಗೊತ್ತಿಲ್ಲ. ಕಾನೂನು, ತನಿಖೆ ಮೂಲಕ ಸತ್ಯ ಹೊರ ಬರಲಿದೆ. ಪೊಲೀಸರು ಸೆಲೆಬ್ರಿಟಿ ಎಂದು ನೋಡದೆ ಉತ್ತಮ ಕೆಲಸ ಮಾಡಿದ್ದಾರೆ. ದರ್ಶನ್ ಬಿಡುಗಡೆಯಾದಲ್ಲಿ ನಮಗೂ ಖುಷಿ. ತಪ್ಪಿತಸ್ಥ ಎಂದು ತೀರ್ಪು ಬಂದರೆ ಈ ಮಣ್ಣಿನ ಕಾನೂನಿಗೆ ಗೌರವಿಸಬೇಕು ಎಂದರು.
ಇದನ್ನೂ ಓದಿ: Bengaluru: ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್ ಫೋನ್ ಅಂಗಡಿ!