Advertisement

ಮನಪಾ: 270.67 ಕೋಟಿ ರೂ. ಮಿಗತೆ ಬಜೆಟ್‌

05:11 AM Jan 31, 2019 | |

ಮಹಾನಗರ : ಮಹಾನಗರ ಪಾಲಿಕೆಯು 2019-20ನೇ ಸಾಲಿಗೆ ಎಲ್ಲ ಮೂಲಗಳಿಂದ ನಿರೀಕ್ಷಿತ ಆದಾಯ 642.90 ಕೋಟಿ ರೂ. ಹಾಗೂ ಒಟ್ಟು 677.27 ಕೋಟಿ ರೂ.ಗಳ ನಿರೀಕ್ಷಿತ ವೆಚ್ಚವನ್ನು ಒಳಗೊಂಡ ಬಜೆಟ್ ಅನ್ನು ಮಂಡಿಸಿದೆ. ಕಳೆದ ವರ್ಷದಂತೆ ಈ ಬಾರಿಯೂ ಇದು ಒಟ್ಟು 270.67 ಕೋಟಿ ರೂ.ಗಳ ಮಿಗತೆ ಮುಂಗಡಪತ್ರವಾಗಿದೆ.

Advertisement

ಮೇಯರ್‌ ಭಾಸ್ಕರ ಕೆ. ಅಧ್ಯಕ್ಷತೆಯಲ್ಲಿ ಮನಪಾ ಸಭಾಂಗಣದಲ್ಲಿ ಬುಧವಾರ ನಡೆದ ವಿಶೇಷ ಸಭೆಯಲ್ಲಿ ತೆರಿಗೆ, ಹಣ ಕಾಸು ಮತ್ತು ಅಪೀಲು ಸ್ಥಾಯೀ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಅವರು 2019-20ನೆ ಸಾಲಿನ ಬಜೆಟ್ ಮಂಡನೆ ಮಾಡಿದರು.

ಪಾಲಿಕೆಯಲ್ಲಿನ ಹಿಂದಿನ ಉಳಿಕೆ ಮೊತ್ತ 305.04 ಕೋಟಿ ರೂ.ಗಳಾಗಿದ್ದು, 2019-20ನೇ ಸಾಲಿಗೆ ಎಲ್ಲ ಮೂಲ ಗಳಿಂದ ಒಟ್ಟು 642.90 ಕೋಟಿ ರೂ. ಆದಾಯವನ್ನು ನಿರೀಕ್ಷೆ ಮಾಡಲಾಗಿದೆ. ಅದೇರೀತಿ, ನಾನಾ ರೀತಿಯ ಅಭಿವೃದ್ಧಿ ಕಾಮಗಾರಿಗಳು ಸೇರಿದಂತೆ ಈ ಅವಧಿಯಲ್ಲಿ ಒಟ್ಟು 677.27 ಕೋಟಿ ರೂ. ಖರ್ಚು-ವೆಚ್ಚವನ್ನು ನಿರೀಕ್ಷಿಸಲಾಗಿದೆ.

ಹೊಸ ಘೋಷಣೆ
ಪಾಲಿಕೆಯ ಎಲ್ಲ ಪ್ರಮುಖ ಕಟ್ಟಡಗಳಲ್ಲಿ ಮಳೆನೀರು ಕೊಯ್ಲು ಅಳವಡಿಸಲು 100 ಲಕ್ಷ ರೂ. ಅನುದಾನ ಕಾಯ್ದಿರಿಸಲಾಗಿದೆ. ಅಲ್ಲದೆ, ಪಾಲಿಕೆ ವ್ಯಾಪ್ತಿಯಲ್ಲಿ 100 ಚ.ಮೀಟರ್‌ ವಿಸ್ತೀರ್ಣದ ಹೆಚ್ಚಿನ ಕಟ್ಟಡಗಳಲ್ಲಿ ಕಡ್ಡಾಯವಾಗಿ ಮಳೆನೀರು ಕೊಯ್ಲು ಪದ್ಧತಿ ಜಾರಿಗೊಳಿಸಲು ತೀರ್ಮಾನಿಸಲಾಗಿದೆ. ಎಲ್ಲ ಪಾರ್ಕ್‌, ಸಾರ್ವಜನಿಕ ಪ್ರದೇಶಗಳ ಅಭಿವೃದ್ಧಿ ಮತ್ತು ಹಸಿರೀಕರಣಕ್ಕೆ 300 ಲಕ್ಷ ರೂ. ಮೀಸಲಿರಿಸಲಾಗಿದೆ.

ಪಾಲಿಕೆ ವ್ಯಾಪ್ತಿಯ ಆರ್ಥಿಕ ಹಿಂದುಳಿದ ಕುಟುಂಬಗಳಿಗೆ ಪ್ರಾಕೃತಿಕ ವಿಕೋಪದಲ್ಲಿ ಹಾನಿಗೀಡಾದವರಿಗೆ ವೈದ್ಯಕೀಯ ವೆಚ್ಚ ಇದುವರೆಗೆ ನೀಡುತ್ತಿರಲಿಲ್ಲ. ಆದರೆ ಈ ಬಾರಿಯ ಬಜೆಟ್‌ನಲ್ಲಿ ಶೇ.7.25 ಯೋಜನೆಯಡಿ 5 ಲಕ್ಷ ರೂ. ಇದಕ್ಕಾಗಿ ಕಾಯ್ದಿರಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಪಾಲಿಕೆ ವತಿಯಿಂದ ಮನೆ ದುರಸ್ತಿಗೆ ಸ್ವಸ್ಥ ಕುಟೀರ ಯೋಜನೆಯಡಿ ಈ ಬಾರಿ ಹಳೆ ಮುನ್ಸಿಪಾಲಿಟಿ ವ್ಯಾಪ್ತಿಯ ವಾರ್ಡ್‌ಗಳನ್ನು ಹೊರತುಪಡಿಸಿ ಇತರ ವಾರ್ಡ್‌ಗಳಲ್ಲಿ ತಲಾ 5 ಮಂದಿ ಫ‌ಲಾನುಭವಿಗಳಿಗೆ ಯೋಜನೆ ವಿಸ್ತರಿಸಲು ಉದ್ದೇಶಿಸಲಾಗಿದೆ.

Advertisement

ಮನೆಗಳಲ್ಲೇ ಹಸಿ ತ್ಯಾಜ್ಯ ಸಂಸ್ಕರಣೆ
ಮನೆಗಳ ಹಂತದಲ್ಲೇ ಹಸಿ ತ್ಯಾಜ್ಯ ಸಂಸ್ಕರಿಸುವ ಯೋಜನೆಯಡಿ ಮೊದಲ ಹಂತದಲ್ಲಿ 5 ಸಾವಿರ ಮನೆಗಳಲ್ಲಿ ಹಸಿತ್ಯಾಜ್ಯ ಸಂಸ್ಕರಣೆಗೆ ಕಾರ್ಯಕ್ರಮ ಹಮ್ಮಿಕೊಳ್ಳುವುದರೊಂದಿಗೆ ಉತ್ಪಾದನೆ ಹಂತದಲ್ಲೇ ತ್ಯಾಜ್ಯ ಪ್ರಮಾಣ ಕಡಿತಗೊಳಿಸಲು ನಾಗರಿಕರಿಗೆ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ.

ಸ್ಮಾರ್ಟ್‌ ರಸ್ತೆ
ಲೇಡಿಹಿಲ್‌ನಿಂದ ಕೊಟ್ಟಾರ ಚೌಕಿವರೆಗಿನ ರಸ್ತೆಯನ್ನು ಹಂತಹಂತವಾಗಿ ಸ್ಮಾರ್ಟ್‌ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವುದು, ಹೊಸದಾಗಿ ನಿರ್ಮಿಸಿರುವ ಮಾರುಕಟ್ಟೆಗಳ ಬಾಡಿಗೆ ಪರಿಷ್ಕರಿಸುವ ಪ್ರಸ್ತಾವವನ್ನು ಬಜೆಟ್‌ನಲ್ಲಿ ಉಲ್ಲೇಖೀಸಲಾಗಿದೆ. ಈ ಹಿಂದೆ ಪಿವಿಎಸ್‌-ಲಾಲ್‌ಬಾಗ್‌ ರಸ್ತೆಯನ್ನು ಸ್ಮಾರ್ಟ್‌ ರಸ್ತೆಯಾಗಿ ಘೋಷಣೆ ಮಾಡಲಾಗಿತ್ತು. ಆ ಯೋಜನೆ ಸಮರ್ಪಕವಾಗಿ ಕಾರ್ಯಗತವಾಗಿಲ್ಲ. ಈ ನಡುವೆ ಮತ್ತೂಂದು ರಸ್ತೆಯನ್ನು ಸ್ಮಾರ್ಟ್‌ರಸ್ತೆಯಾಗಿ ಅಭಿವೃದ್ಧಿಪಡಿಸುವ ಬಗ್ಗೆ ವಿಪಕ್ಷದ ನಾಯಕರು ಆಕ್ಷೇಪ ವ್ಯಕ್ತಪಡಿಸಿದರು.

5 ವರ್ಷ- 5 ಬಜೆಟ್
ಮಹಾನಗರ ಪಾಲಿಕೆಯ ಕಾಂಗ್ರೆಸ್‌ ಸಮಯದ 2015-16ರಲ್ಲಿ ಮೇಯರ್‌ ಮಹಾಬಲ ಮಾರ್ಲ ಅವರ ಅಧ್ಯಕ್ಷತೆಯಲ್ಲಿ ಮನಪಾ ತೆರಿಗೆ ಮತ್ತು ಹಣಕಾಸು ಸ್ಥಾಯೀ ಸಮಿತಿ ಅಧ್ಯಕ್ಷೆ ಜೆಸಿಂತಾ ಆಲ್ಫ್ರೆಡ್‌ ಅವರು ಮೊದಲ ಬಜೆಟ್ ಮಂಡಿಸಿದ್ದರು.

2016-17ರಲ್ಲಿ ಮೇಯರ್‌ ಜೆಸಿಂತಾ ಆಲ್ಫ್ರೆಡ್‌ ಅವರ ಅಧ್ಯಕ್ಷತೆಯಲ್ಲಿ ತೆರಿಗೆ ಸ್ಥಾಯೀ ಸಮಿತಿ ಅಧ್ಯಕ್ಷ ಹರಿನಾಥ್‌, 2017-18ರಲ್ಲಿ ಮೇಯರ್‌ ಹರಿನಾಥ್‌ ಅವರ ಅಧ್ಯಕ್ಷತೆಯಲ್ಲಿ ತೆರಿಗೆ ಸ್ಥಾಯೀ ಸಮಿತಿ ಅಧ್ಯಕ್ಷೆ ಅಪ್ಪಿ, 2018-19ಅರ್ಥಿಕ ಸಾಲಿನ ಬಜೆಟ್ ಅನ್ನು ಕಳೆದ ಫೆ. 26ರಂದು ಮೇಯರ್‌ ಕವಿತಾ ಸನಿಲ್‌ ಅಧ್ಯಕ್ಷತೆಯಲ್ಲಿ ಆಗಿನ ತೆರಿಗೆ ಸ್ಥಾಯೀ ಸಮಿತಿ ಅಧ್ಯಕ್ಷೆಯಾಗಿದ್ದ ಪ್ರತಿಭಾ ಕುಳಾಯಿ ಮಂಡಿಸಿದ್ದರು. ಪ್ರಸಕ್ತ ಸಾಲಿನಲ್ಲಿ ಮೇಯರ್‌ ಭಾಸ್ಕರ್‌ ಕೆ. ಅಧ್ಯಕ್ಷತೆಯಲ್ಲಿ ತೆರಿಗೆ ಸ್ಥಾಯೀ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬಜೆಟ್ ಮಂಡಿಸಿದರು.

ಎಸ್‌.ಎಫ್‌.ಸಿ. ಅನುದಾನ
2019-10ನೇ ಸಾಲಿಗೆ ಎಸ್‌.ಎಫ್.ಸಿ. ಮುಕ್ತ ನಿಧಿಯ ಅನುದಾನದಡಿಯಲ್ಲಿ 25 ಕೋಟಿ ರೂ. ನಿರೀಕ್ಷಿಸಲಾಗಿದ್ದು, ಈ ಅನುದಾನವನ್ನು ಸರಕಾರದ ಮಾರ್ಗಸೂಚಿಯಂತೆ ಕ್ರಿಯಾ ಯೋಜನೆ ತಯಾರಿಸಿ ಕ್ರಮ ವಹಿಸಲಾಗುವುದು. ಈ ಅನುದಾನದಲ್ಲಿ ಪ.ಜಾತಿ, ಪ.ಂಗಡ, ಆರ್ಥಿಕವಾಗಿ ಹಿಂದುಳಿದ ಮತ್ತು ಅಂಗವಿಕಲರ ಅಭಿವೃದ್ಧಿಗಾಗಿ ಅನುದಾನದ ಮೀಸಲಿಟ್ಟು ಬಾಕಿ ಉಳಿದ ಅನುದಾನವನ್ನು ಈ ಎಸ್‌ಸಿಆರ್‌ಒಡಬ್ಲ್ಯು ಖಾತೆಗೆ ವರ್ಗಾಹಿಸಿ ಸ್ವಚ್ಛತೆ ಕೆಲಸಗಳಿಗೆ ಆದ್ಯತೆ ನೀಡಲಾಗಿದೆ.

ಸಂಸತ್‌ ಸದಸ್ಯರ, ಶಾಸಕರ ಅನುದಾನ
2019-20ನೇ ಸಾಲಿಗೆ ಸಂಸತ್‌ ಸದಸ್ಯರ ಅನುದಾನದಡಿಯಲ್ಲಿ 35 ಲಕ್ಷ ರೂ., ಶಾಸಕರ ಅನುದಾನದಡಿಯಲ್ಲಿ 50ಲಕ್ಷ ರೂ. ನಿರೀಕ್ಷಿಸಲಾಗಿದ್ದು, ಇದನ್ನು ಸಂಸತ್‌ ಸದಸ್ಯರ ಹಾಗೂ ಶಾಸಕರ ನಿರ್ದೇಶನದಂತೆ ಕಾಮಗಾರಿಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ.

14ನೇ ಹಣಕಾಸು ಯೋಜನೆ
14ನೇ ಹಣಕಾಸು ಯೋಜನೆಯಡಿಯಲ್ಲಿ ಮಂಗಳೂರು ಮಹಾನಗರಪಾಲಿಕೆಗೆ 2019-20ನೇ ಸಾಲಿಗೆ 21 ಕೋಟಿ ರೂ. ಅನುದಾನ ನಿರೀಕ್ಷಿಸಲಾಗಿದ್ದು, ಕಾರ್ಯಾಧಾರಿತ ಅನುದಾನ 7 ಕೋಟಿ ರೂ. ನಿರೀಕ್ಷಿಸಲಾಗಿದೆ. ಹಣಕಾಸು ಆಯೋಗದ ಮಾರ್ಗ ಸೂಚಿಯಂತೆ ಕ್ರಿಯಾ ಯೋಜನೆಯನ್ನು ತಯಾರಿಸಿ ಪಾಲಿಕೆಯ ಸರ್ವತೋಮುಖ ಅಭಿವೃದ್ಧಿಗೆ ವ್ಯಯ ಮಾಡಲಾಗುವುದು.

ಪೌರ ಕಾರ್ಮಿಕರ ಗೃಹ ಭಾಗ್ಯ ಯೋಜನೆ ಪೌರ ಕಾರ್ಮಿಕ ವಸತಿ ಸೌಕರ್ಯಕ್ಕಾಗಿ ಪೌರ ಕಾರ್ಮಿಕ ಗೃಹ ಭಾಗ್ಯ ಯೋಜನೆಗೆ 2019-20ರಲ್ಲಿ 1.50 ಕೋಟಿ ರೂ.ಅನುದಾನ ಮೀಸಲಿಡಲಾಗಿದೆ.

ಪಾಲಿಕೆ 2018-19ನೇ ಸಾಲಿನಲ್ಲಿ ಒಟ್ಟು 698.40 ಕೋಟಿ ರೂ. ಆದಾಯ, 714.46 ಕೋ.ರೂ.ಗಳನ ನಿರೀಕ್ಷಿತ ವೆಚ್ಚವನ್ನು ಒಳಗೊಂಡ ಬಜೆಟ್ ಮಂಡಿಸಲಾಗಿತ್ತು. ಅದು 269.55 ಕೋ.ರೂ.ಗಳ ಮಿಗತೆ ಬಜೆಟ್ ಆಗಿತ್ತು.

ಕೊನೆಯ ಬಜೆಟ್‌
ಪಾಲಿಕೆಯ ಪರಿಷತ್‌ನ ಈ ಅವಧಿಯ ಕೊನೆಯ ಬಜೆಟ್‌ ಮಂಗಳವಾರ ಮಂಡನೆಯಾಗಿದೆ. ಪರಿಷತ್‌ನ ಈ ಬಾರಿಯ ಆಡಳಿತದ ಅವಧಿ ಮಾರ್ಚ್‌ 7ಕ್ಕೆ ಕೊನೆಗೊಳ್ಳಲಿದೆ. ಸಾಮಾನ್ಯವಾಗಿ ಮುಂದಿನ ಸಾಲಿನ ಬಜೆಟ್‌ ಮಾರ್ಚ್‌ನೊಳಗೆ ಮಂಡನೆಯಾಗಿ ಅನುಮೋದನೆ ಪಡೆಯಬೇಕಾಗುತ್ತದೆ. ಮಹಾನಗರ ಪಾಲಿಕೆಗೆ ಮುಂದೆ ನಡೆಯಲಿರುವ ಚುನಾವಣೆಯ ಹಿನ್ನೆಲೆಯಲ್ಲಿ ಈ ಬಾರಿಯ ಬಜೆಟ್‌ ಹೆಚ್ಚು ಪ್ರಾಮುಖ್ಯವನ್ನು ಪಡೆದುಕೊಂಡಿತ್ತು.

ನಿರಾಶಾದಾಯಕ ಬಜೆಟ್‌
ಬಜೆಟ್‌ನಲ್ಲಿ ಯಾವುದೇ ಹೊಸ ಯೋಜನೆಗಳನ್ನು ಪ್ರಕಟಿಸಲಾಗಿಲ್ಲ. ವೈಯಕ್ತಿಕ ಸೌಲಭ್ಯದ ಯೋಜನೆ, ಕಾಲನಿಗಳ ಅಭಿವೃದ್ಧಿ, ಆದಾಯದ ಬಗ್ಗೆ ಸ್ಪಷ್ಟತೆಯನ್ನು ಒದಗಿಸಲಾಗಿಲ್ಲ.
– ಪ್ರೇಮಾನಂದ ಶೆಟ್ಟಿ , ವಿಪಕ್ಷ ನಾಯಕ

ಉಪಯುಕ್ತ ಬಜೆಟ್‌
ಜನಸಾಮಾನ್ಯರ ಹಿತದೃಷ್ಟಿ , ನಗರದ ಸರ್ವತೋಮುಖ ಅಭಿವೃದ್ಧಿಯನ್ನು ಗಮನಿಸಿ ಈ ಬಜೆಟ್‌ ಮಂಡಿಸಲಾಗಿದೆ. ಬಜೆಟ್‌ ಬಗ್ಗೆ ಸ್ಪಷ್ಟತೆ ಇಲ್ಲದೆ ವಿರೋಧ ಪಕ್ಷದವರು ಪ್ರತಿಕ್ರಿಯಿಸುವುದು ತಪ್ಪು.
– ಭಾಸ್ಕರ್‌ ಕೆ., ಮೇಯರ್‌

ಪಾಲಿಕೆಗೆ ಸರಕಾರದಿಂದ ಬರುವ ಅನುದಾನಗಳು
ಅಮೃತ್‌ ಯೋಜನೆ 
ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಸಂಸ್ಥೆಗಳ ಸಹಭಾಗಿತ್ವದಲ್ಲಿ ಈ ಯೋಜನೆಯನ್ನು ರೂಪಿಸಲಾಗಿದ್ದು, 2019-20ನೇ ಸಾಲಿಗೆ ಒಟ್ಟು 3 ಕೋಟಿ ರೂ. ವೆಚ್ಚ ಮಾಡಲಾಗುವುದು. ಈ ಅನುದಾನದಲ್ಲಿ ಸರಕಾರದ ಯೋಜನೆಯಂತೆ ಮಳೆ ನೀರು ಚರಂಡಿ ಮತ್ತು ಪಾರ್ಕ್‌ ಅಭಿವೃದ್ಧಿಗೆ ಸರಕಾರದ ಮಾರ್ಗ ಸೂಚಿಯಂತೆ ಅನುದಾನವನ್ನು ಹಂಚಿಕೆ ಮಾಡಲಾಗಿದೆ. ಕೆ.ಯು.ಐ.ಡಿ.ಎಫ್‌.ಸಿ. ಮುಖಾಂತರ ನಿರ್ವಹಿಸುತ್ತಿರುವ ಅಮೃತ್‌ ಮತ್ತು ಎ.ಡಿ.ಬಿ. 2ನೇ ಹಂತದಲ್ಲಿ ಅನುಷ್ಠಾನವಾಗುತ್ತಿರುವ ಯೋಜನೆಗಳಾದ ಒಳಚರಂಡಿ ಅಭಿವೃದ್ಧಿ ಮತ್ತು ಕುಡಿಯುವ ನೀರಿನ ಮಾರ್ಗಗಳ ಅಳವಡಿಕೆ 2019-20ನೇ ಸಾಲಿನಲ್ಲಿ ರೂ.75 ಕೋಟಿ ರೂ. ವೆಚ್ಚ ಮಾಡಲಾಗುವುದು.

ಮುಖ್ಯಮಂತ್ರಿಗಳ ವಿಶೇಷ ನಗರೋತ್ಥಾನ 
ಅನುದಾನ ಇದರಲ್ಲಿ 2ನೇ ಹಂತ ಮತ್ತು 3ನೇ ಹಂತ ಕಾಮಗಾರಿಗಳಿಗೆ ಈಗಾಗಲೇ ಕ್ರಿಯಾ ಯೋಜನೆಯು ಸರಕಾರದಿಂದ ಅನುಮೋದನೆಗೊಂಡಿದ್ದು, ಹೆಚ್ಚಿನ ಕಾಮಗಾರಿಗಳು ಪೂರ್ಣಗೊಂಡಿದೆ. ಬಹುಪಾಲು ಕಾಮಗಾರಿಗಳು ಪ್ರಗತಿಯಲ್ಲಿವೆ. 2ನೇ ಹಂತದಲ್ಲಿ 15 ಕೋಟಿ ರೂ., 3ನೇ ಹಂತದಲ್ಲಿ 10 ಕೋಟಿ ರೂ. ಬಿಡುಗಡೆಗೆ ಬಾಕಿ ಇದ್ದು, ಈ ಹಣವನ್ನು ಪೂರ್ಣವಾಗಿ ಸರಕಾರದಿಂದ ಪಡೆಯಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, 4ನೇ ಹಂತದ ನಗರೋತ್ಥಾನ ಅನುದಾನ ಪಡೆಯಲು ಕ್ರಮ ವಹಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next