Advertisement

Mangaluru: ವೆನ್ಲಾಕ್‌ನಲ್ಲಿ  ದೊರೆಯಲಿದೆ ಕಿಮೋಥೆರಪಿ

01:12 PM Dec 18, 2024 | Team Udayavani |

ಮಹಾನಗರ: ಕ್ಯಾನ್ಸರ್‌ ರೋಗಿಗಳಿಗೆ ಕಿಮೋಥೆರಪಿ ಚಿಕಿತ್ಸೆ ಪಡೆಯಲು ಅನುಕೂಲವಾಗುವಂತೆ ಮಂಗಳೂರು ವೆನ್ಲಾಕ್‌ ಆಸ್ಪತ್ರೆಯಲ್ಲಿ ಕಿಮೋಥೆರಪಿ ವಿಭಾಗ ತೆರೆಯಲು ಸಿದ್ದತೆ ಮಾಡಿ ಕೊಳ್ಳಲಾಗುತ್ತಿದ್ದು, ಕ್ಯಾನ್ಸರ್‌ ರೋಗಿಗಳಲ್ಲಿ ಆಶಾಕಿರಣ ಮೂಡಿದೆ. ಕ್ಯಾನ್ಸರ್‌ ಚಿಕಿತ್ಸೆಗೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ದುಬಾರಿ ಹಣ ವ್ಯಯ ಮಾಡಬೇಕಾದ ಪರಿಸ್ಥಿತಿ ಇದ್ದು, ಸರಕಾರದಿಂದ ಉಚಿತ ಸೇವೆ ನೀಡಲು ಡೇ ಕೇರ್‌ ಕಿಮೋಥೆರಪಿ ವಿಭಾಗ ಶೀಘ್ರದಲ್ಲೇ ಆರಂಭಿಸಲು ರಾಜ್ಯ ಸರಕಾರ ಮುಂದಾಗಿದೆ.

Advertisement

ವೆನ್ಲಾಕ್‌ ಆಸ್ಪತ್ರೆಯಲ್ಲಿ ಕಿಮೋಥೆರಪಿ ವಿಭಾಗ ತೆರೆಯಬೇಕು ಎಂಬ ಬೇಡಿಕೆ ಈ ಹಿಂದೆಯೇ ಇತ್ತು. ಈ ಪ್ರಸ್ತಾಪ ಇದೀಗ ಸರಕಾರವೂ ಮುಂದೆ ಬಂದಿದೆ. ವೆನ್ಲಾಕ್‌ ಆಸ್ಪತ್ರೆಯ ಹಳೆ ಕಟ್ಟಡದ ಮೊದಲನೇ ಮಹಡಿಯ ಒಪಿಡಿ ಬ್ಲಾಕ್‌ನಲ್ಲಿ ನೂತನ ಕೇಂದ್ರ ತೆರೆಯಲು ಯೋಜನೆ ರೂಪಿಸಲಾಗಿತ್ತು. ಆದರೆ, ಅಲ್ಲಿ ಕ್ಯಾನ್ಸರ್‌ ರೋಗಿಗಳಿಗೆ ತೆರಳು ಕಷ್ಟವಾಗುವ ಕಾರಣ ಆಸ್ಪತ್ರೆ ಕಟ್ಟಡದ ಜೈಲ್‌ ವಾರ್ಡ್‌ನ ಬಳಿಕ ನೂತನ ವಿಭಾಗ ಕಾರ್ಯಾಚರಿಸಲಿದೆ. ಜಿಲ್ಲಾಸ್ಪತ್ರೆಗಳಲ್ಲಿ ಆಂಕಾಲಜಿಸ್ಟ್‌ಗಳು ಇಲ್ಲದ ಕಾರಣ ಖಾಸಗಿ ವೈದ್ಯಕೀಯ ಕಾಲೇಜಿನ ಸಹಕಾರವನ್ನು ಪಡೆಯಲಾಗುತ್ತಿದ್ದು, ಅವರ ಸಹಭಾಗಿತ್ವದಲ್ಲಿ ನೂತನ ವಿಭಾಗಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ವೆನ್ಲಾಕ್‌ ಆಸ್ಪತ್ರೆಯಲ್ಲಿ ತಲಾ 5 ಮಹಿಳೆ ಮತ್ತು ಪುರುಷರ ಹಾಸಿಗೆಯ ಕಿಮೋಥೆರಪಿ ವಿಭಾಗ ಆರಂಭವಾಗಲಿದೆ.

ಕೆಲವೇ ವಾರದಲ್ಲಿ ಚಾಲನೆ
ಕ್ಯಾನ್ಸರ್‌ ರೋಗಿಗಳಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ವೆನ್ಲಾಕ್‌ ಜಿಲ್ಲಾಸ್ಪತ್ರೆಯಲ್ಲಿ ಡೇ ಕೇರ್‌ ಕಿಮೋಥೆರಪಿ ವಿಭಾಗ ಆರಂಭಿಸಲು ರಾಜ್ಯ ಸರಕಾರ ಮುಂದಾಗಿದೆ. ಇದರಿಂದ ಉಚಿತ ಕಿಮೋಥೆರಪಿ ವ್ಯವಸ್ಥೆ ಸಿಗಲಿದ್ದು, ವಿಭಾಗ ಆರಂಭಿಸಲು ಆಸ್ಪತ್ರೆಯಲ್ಲಿ ಈಗಾಗಲೇ ಸ್ಥಳ ನಿಯೋಜನೆ ಮಾಡಲಾಗಿದೆ. ಕೆಲವೇ ವಾರದಲ್ಲಿ ನೂತನ ಯೋಜನೆಗೆ ಚಾಲನೆ ಸಿಗುವ ನಿರೀಕ್ಷೆ ಇದೆ.
-ಡಾ| ಶಿವಕುಮಾರ್‌, ವೆನ್ಲಾಕ್‌ ಆಸ್ಪತ್ರೆ ಅಧೀಕ್ಷಕ

ಕ್ಯಾಥ್‌ ಲ್ಯಾಬ್‌ ನಿರ್ಮಾಣ
ಹೃದಯ ಸಂಬಂಧಿಸಿದ ರೋಗಗಳ ಅತ್ಯಾಧುನಿಕ ತಪಾಸಣೆ ಮತ್ತು ಚಿಕಿತ್ಸೆಗೆ ಸಂಬಂಧಿಸಿದಂತೆ ಇರುವ ಕಾರ್ಡಿಯಾಕ್‌ ಕ್ಯಾಥಟರೈಜೇಶನ್‌ ಲ್ಯಾಬ್‌ (ಕ್ಯಾಥ್‌ ಲ್ಯಾಬ್‌) ಸ್ಥಾಪಿಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಸಿದ್ದತೆ ನಡೆಸುತ್ತಿದೆ. ವೆನ್ಲಾಕ್‌ನಲ್ಲಿ ಈಗಾಗಲೇ ನಿರ್ಮಾಣ ಆಗಿರುವ ಅತ್ಯಾಧುನಿಕ ಸರ್ಜಿಕಲ್‌ ಬ್ಲಾಕ್‌ ಕಟ್ಟಡದ ಅಂತಸ್ತಿನಲ್ಲಿಯೇ ಲ್ಯಾಬ್‌ ಆರಂಭವಾಗುವ ಸಾಧ್ಯತೆ ಇದೆ. ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಯಾವ ದರದಲ್ಲಿ ಸೇವೆ ಸಿಗುತ್ತದೆಯೋ ಅದೇ ರೀತಿಯ ಸೇವೆ ಇಲ್ಲಿಯೂ ಸಿಗಲಿದೆ.

Advertisement

-ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next