ಪುತ್ತೂರು: ಮಂಗಳೂರು ಮತ್ತು ಬೆಂಗಳೂರು ನಡುವೆ ರಸ್ತೆ ಮತ್ತು ರೈಲು ಸಂಪರ್ಕ ಸುಗಮವಾಗಿ ಸಾಗಲು ಪ್ರಥಮ ಆದ್ಯತೆ ನೀಡುವುದಾಗಿ ಸಂಸದ ಕ್ಯಾ| ಬ್ರಿಜೇಶ್ ಚೌಟ ಹೇಳಿದರು.
ಪತ್ರಕರ್ತರ ಜತೆ ಮಾತನಾಡಿದ ಅವರು, ಕಾನೂನು ಹಾಗೂ ಅರಣ್ಯ ಸಂಬಂಧಿ ತೊಡಕುಗಳನ್ನು ಅಧ್ಯಯನ ಮಾಡಿ ವೈಜ್ಞಾನಿಕ ವರದಿಯನ್ನು ಸಿದ್ಧಪಡಿಸಲಾಗುವುದು.
ಕೇಂದ್ರದ ಹೆದ್ದಾರಿ ಮತ್ತು ರೈಲ್ವೇ ಸಚಿವರೊಂದಿಗೆ ಜಂಟಿ ಸಭೆ ನಡೆಸಿ ರೈಲ್ವೇ ಮತ್ತು ರಸ್ತೆಯ ಅಭಿವೃದ್ದಿಗೆ ಸಹಕಾರ ಕೇಳಲಾಗುವುದು ಎಂದರು.
ಜೂ.19ರಂದು ಜಿಲ್ಲಾಧಿಕಾರಿಗಳ ಸಭೆಯನ್ನು ಕರೆದಿದ್ದೇನೆ. ಜಿಲ್ಲೆಯಲ್ಲಿ ಅನುಷ್ಠಾನ ಹಂತದಲ್ಲಿರುವ ಕೇಂದ್ರ ಸರಕಾರದ ಯೋಜನೆಗಳ ಕುರಿತು ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು ಯಾವ ಯಾವ ಯೋಜನೆಗಳು ಯಾವ ಯಾವ ಹಂತದಲ್ಲಿದೆ ಎನ್ನುವ ಬಗ್ಗೆ ಪರಿಶೀಲಿಸಲಾಗುವುದು. ಆ ಯೋಜನೆಗಳಿಗೆ ವೇಗ ನೀಡುವ ಕಾರ್ಯ ನಡೆಯಲಿದೆ ಎಂದರು.
ಶಿರಾಡಿ ಸುರಂಗ ಯೋಜನೆ ಅಧಿಕಾರಿಗಳಿಂದ ಮಾಹಿತಿ
ಬಿ.ಸಿ.ರೋಡ್‌ನಿಂದ ಅಡ್ಡಹೊಳೆ ತನಕ ಚತುಷ್ಪಥ ಕಾಮಗಾರಿ ಪ್ರಗತಿಯಲ್ಲಿದೆ. ಸಕಲೇಶಪುರದಲ್ಲೂ ರಸ್ತೆ ಅಭಿವೃದ್ಧಿ ಆಗುತ್ತಿದೆ. ಶಿರಾಡಿ ಸುರಂಗ ಯೋಜನೆಯು ಯಾವ ಹಂತದಲ್ಲಿದೆ ಎಂದು ಅಧಿಕಾರಿಗಳ ಸಭೆ ಕರೆದು ವಿಚಾರಿಸುತ್ತೇನೆ. ಶಿರಾಡಿಯ ಸುರಂಗ ಯೋಜನೆ ನನೆಗುದಿಗೆ ಬಿದ್ದಿಲ್ಲ ಎಂದರು.