Advertisement

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

02:23 AM Nov 23, 2024 | Team Udayavani |

ಮಂಗಳೂರು: ವಕ್ಫ್ ಬೋರ್ಡ್‌ ಕಬಳಿಸಿದ ಆಸ್ತಿಯನ್ನು ಮರು ಪಡೆದುಕೊಳ್ಳಬೇಕು ಎಂದು ಆಗ್ರಹಿಸಿ “ನಮ್ಮ ಭೂಮಿ ನಮ್ಮ ಹಕ್ಕು’ ಘೋಷವಾಕ್ಯದಡಿ ಬಿಜೆಪಿ ದ.ಕ. ಜಿಲ್ಲಾ ಸಮಿತಿ ವತಿಯಿಂದ ಮಂಗಳೂರು ಪುರಭವನ ಮುಂಭಾಗದ ಗಾಂಧಿ ಪ್ರತಿಮೆಯಡಿ ಶುಕ್ರವಾರ ಬೆಳಗ್ಗೆ 9ರಿಂದ ಸಂಜೆ 5ರ ವರೆಗೆ ಬೃಹತ್‌ ಧರಣಿ ಸತ್ಯಾಗ್ರಹ ನಡೆಯಿತು.

Advertisement

ಸಾವಿರಾರು ಬಿಜೆಪಿ ಕಾರ್ಯಕರ್ತರು, ರೈತರು, ಜನಪ್ರತಿನಿಧಿಗಳು ಭಾಗವಹಿಸಿದ್ದರು. ಪುರಭವನದ ಎದುರಿನ ರಾಜಾಜಿ ಪಾರ್ಕ್‌ನಲ್ಲಿ ಚಿಣಿಹತ್‌ ಪೆಂಡಾಲ್‌ ಹಾಕಿ ಭಜನೆ ಸಂಕೀರ್ತನೆ ಜತೆಗೆ ಧರಣಿ ಪ್ರತಿಭಟನೆ ನಡೆಸಲಾಯಿತು. ಪುರಭವನ ಎದುರು ಅಂಬೇಡ್ಕರ್‌ ಹಾಗೂ ಮಹಾತ್ಮಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಧರಣಿಗೆ ಚಾಲನೆ ನೀಡಲಾಯಿತು.

ಸಂಸದ ಬ್ರಿಜೇಶ್‌ ಚೌಟ ಮಾತನಾಡಿ, ಹಿಂದೂ ಧರ್ಮ, ತುಳುನಾಡಿನ ದೈವ ದೇವರ ಜಾಗ ಉಳಿಸಲು ಹಾಗೂ ರಾಜ್ಯದಲ್ಲಿರುವ ಟಿಪ್ಪು ಮಾದರಿ ಆಡಳಿತಕ್ಕೆ ಮುಕ್ತಾಯ ಬರೆಯಲು ಬಿಜೆಪಿ ಅವಿರತ ಹೋರಾಟ ನಡೆಸಲಿದೆ. ಲ್ಯಾಂಡ್‌ ಜೆಹಾದ್‌ಗೆ ಪ್ರೋತ್ಸಾಹ ನೀಡುತ್ತಿರುವ ಕಾಂಗ್ರೆಸ್‌ ವಿರುದ್ಧ ಜನಜಾಗೃತಿ ಮೂಡಿಸಲು ಬಿಜೆಪಿ ಶಕ್ತವಾಗಿದೆ ಎಂದರು.

ಜಮೀರ್‌ ಖಾನ್‌ ಎಲ್ಲ ಜಿಲ್ಲಾಧಿ ಕಾರಿಗಳಿಗೆ ಸೂಚನೆ ನೀಡಿ ವಕ್ಫ್ಗೆ ಭೂಮಿ ಸ್ವಾಧೀನ ಮಾಡುವ ನೀತಿಯನ್ನು ಅನುಸರಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರಿಂದ ಟಿಪ್ಪು ಆಡಳಿತ ಅನುಷ್ಠಾನ ವಾಗುತ್ತಿದೆ. ಇದರ ವಿರುದ್ಧ ಬಿಜೆಪಿ ಮನೆ ಮನೆಗೆ ಭೇಟಿ ನೀಡಿ ಆರ್‌ಟಿಸಿ ಪರಿಶೀಲಿಸಲಿದೆ ಎಂದರು.

ತಾಕತ್ತು ಪ್ರದರ್ಶಿಸಲಿ: ಕಾಮತ್‌
ಶಾಸಕ ವೇದವ್ಯಾಸ ಕಾಮತ್‌ ಮಾತನಾಡಿ, 1.40 ಲಕ್ಷ ಎಕ್ರೆ ಇದ್ದ ವಕ್ಫ್ ಆಸ್ತಿ ಕೆಲವೇ ವರ್ಷದಲ್ಲಿ 9 ಲಕ್ಷ ಎಕ್ರೆಗೆ ವಿಸ್ತರಣೆ ಆಗಿದ್ದು ಹೇಗೆ? ವಕ್ಫ್ಗೆ ಭೂಮಿ ಹೋದ ಬಳಿಕ ಯಾವ ನ್ಯಾಯಾಲಯದಲ್ಲೂ ಇದನ್ನು ಪ್ರಶ್ನಿಸುವಂತಿಲ್ಲ. ಹೀಗಾಗಿ ಸಿಎಂ ಅವರು ನೋಟಿಸನ್ನು ಹಿಂಪಡೆಯುತ್ತೇನೆ ಎನ್ನುವುದು ಉತ್ತರವಲ್ಲ. ನೋಟಿಫಿ
ಕೇಶನ್‌ ಆದದ್ದನ್ನು ಬಿಡಿಸುವ ತಾಕತ್ತು ಸಿಎಂ ಪ್ರದರ್ಶಿಸಲಿ ಎಂದರು.

Advertisement

ಕಾಂಗ್ರೆಸ್‌ ಆಡಳಿತದಿಂದ ದುರಂತ: ಡಾ| ಭರತ್‌ ಶೆಟ್ಟಿ
ಶಾಸಕ ಡಾ| ಭರತ್‌ ಶೆಟ್ಟಿ ಮಾತನಾಡಿ, ವಕ್ಫ್ಗೆ ಬಿಜೆಪಿಯವರ ಭೂಮಿ ಮಾತ್ರ ಹೋಗುವುದಲ್ಲ. ಕಾಂಗ್ರೆಸ್‌ನ ರಮಾನಾಥ ರೈ, ಐವನ್‌ ಡಿ’ ಸೋಜಾ ಅವರದ್ದೂ ಹೋಗಬಹುದು. ಕೇರಳದಲ್ಲಿ ಆದಂತೆ ಇಲ್ಲೂ ಚರ್ಚ್‌ನ ಭೂಮಿಯೂ ವಕ್ಫ್ ಪಾಲಾಗಬಹುದು. ರಾಜ್ಯದಲ್ಲಿ ಕಾಂಗ್ರೆಸ್‌ ಆಡಳಿತದಿಂದ ಆದ ದುರಂತವಿದು. ಕೇಂದ್ರದಲ್ಲೂ ಕಾಂಗ್ರೆಸ್‌ ಆಡಳಿತ ಇರುತ್ತಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು ಎಂದು ಪ್ರಶ್ನಿಸಿದರು.

ಕೇಮಾರು ಶ್ರೀ ಈಶವಿಠಲದಾಸ ಸ್ವಾಮೀಜಿ, ಓಂಶ್ರೀ ಮಠದ ಶ್ರೀವಿದ್ಯಾ ನಂದ ಸರಸ್ವತಿ ಸ್ವಾಮೀಜಿ, ಮಾತಾಶ್ರೀ ಶಿವಜ್ಞಾನಮಯಿ ಸರಸ್ವತಿ, ಬಿಜೆಪಿ ಜಿಲ್ಲಾಧ್ಯಕ್ಷ, ಸತೀಶ್‌ ಕುಂಪಲ, ಮಾಜಿ ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕರಾದ ರಾಜೇಶ್‌ ನಾೖಕ್‌, ಹರೀಶ್‌ ಪೂಂಜ, ಭಾಗೀರಥಿ ಮುರುಳ್ಯ, ವಿಧಾನ ಪರಿಷತ್‌ ಸದಸ್ಯರಾದ ಪ್ರತಾಪ್‌ಸಿಂಹ ನಾಯಕ್‌, ಕಿಶೋರ್‌ ಕುಮಾರ್‌, ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ಸಂಜೀವ ಮಠಂದೂರು, ಮೋನಪ್ಪ ಭಂಡಾರಿ, ಬಾಲಕೃಷ್ಣ ಭಟ್‌, ಮೇಯರ್‌ ಮನೋಜ್‌ ಕುಮಾರ್‌, ಉಪಮೇಯರ್‌ ಭಾನುಮತಿ, ಮಾಜಿ ಮೇಯರ್‌ಗಳಾದ ಪ್ರೇಮಾನಂದ ಶೆಟ್ಟಿ, ಸುಧೀರ್‌ ಶೆಟ್ಟಿ, ದಿವಾಕರ ಪಾಂಡೇಶ್ವರ, ಜಯಾನಂದ ಅಂಚನ್‌, ಕವಿತಾ ಸನಿಲ್‌ ಮುಂತಾದವರಿದ್ದರು.

ವಕ್ಫ್ ಭೂಮಿ ಕಮರ್ಷಿಯಲ್‌ ಬಳಕೆ ಬಗ್ಗೆ ಸಿಬಿಐ ತನಿಖೆಯಾಗಲಿ: ಚೌಟ
ಬೆಂಗಳೂರಿನಲ್ಲಿ ವಕ್ಫ್ ಹೆಸರಿನಲ್ಲಿ ಕಟ್ಟಡಗಳು ಇವೆ. ಅದರ ಹಣ ಯಾರಿಗೆ ಹೋಗಿದೆ? ವಕ್ಫ್ ಭೂಮಿಯನ್ನು ವಾಣಿಜ್ಯಕ್ಕೆ ಬಳಸಲು ಅವಕಾಶ ಇದೆಯೇ? ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗುತ್ತಿರುವುದರ ಬಗ್ಗೆ ಸಿಬಿಐ ತನಿಖೆಯಾಗಲಿ ಎಂದು ಸಂಸದ ಕ್ಯಾ| ಬ್ರಿಜೇಶ್‌ ಚೌಟ ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next