ಮಂಗಳೂರು: ಇಲ್ಲಿನ ವಿಮಾನ ನಿಲ್ದಾಣ (ಎಂಐಎ)ದಲ್ಲಿ ದೇಶಿಯ ಹಾಗೂ ವಿದೇಶಿಯಾನಕ್ಕೆ ಸಂಬಂಧಿಸಿ 2022-23ನೇ ಸಾಲಿನಲ್ಲಿ ಪ್ರಯಾಣಿಕರ ಓಡಾಟದಲ್ಲಿ ಶೇ.76ರಷ್ಟು ಪ್ರಗತಿ ದಾಖಲಾಗಿದೆ.
ದೇಶದ ವಿಮಾನಯಾನ ಕ್ಷೇತ್ರ ಮತ್ತೆ ಚುರುಕುಗೊಳ್ಳುತ್ತಿದ್ದು ಅದರಂತೆ ಮಂಗಳೂರು ವಿಮಾನ ನಿಲ್ದಾಣದಲ್ಲೂ ಈ ಪ್ರಗತಿ ಕಂಡು ಬಂದಿದೆ. ಮಾತ್ರವಲ್ಲದೆ ಈ ಅವಧಿಯಲ್ಲಿ ಏರ್ ಟ್ರಾಫಿಕ್‌ನಲ್ಲೂ ಶೇ. 42ರಷ್ಟು ಹೆಚ್ಚಳವಾಗಿದೆ.
2022-23ನೇ ಆರ್ಥಿಕ ವರ್ಷದಲ್ಲಿ ಐಎಂಎ 17,94,054 ಪ್ರಯಾಣಿಕರನ್ನು ನಿಭಾಯಿಸಿದ್ದು, ಹಿಂದಿನ ಆರ್ಥಿಕ ವರ್ಷಕ್ಕಿಂತ ಶೇ.76ರಷ್ಟು ಪ್ರಗತಿಯಾಗಿದೆ. 2021-22ರಲ್ಲಿ ವಿಮಾನ ನಿಲ್ದಾಣ 10,16,559 ಪ್ರಯಾಣಿಕರನ್ನು ನಿಭಾಯಿಸಿದೆ. 17.94 ಲಕ್ಷ ಪ್ರಯಾಣಿಕರಲ್ಲಿ, 12.08 ಲಕ್ಷ ಪ್ರಯಾಣಿಕರು ದೇಶೀಯರು, ಉಳಿದ 5.86 ಲಕ್ಷ ಮಂದಿ ಸಾಗರೋತ್ತರ ಪ್ರಯಾಣಿಕರಾಗಿದ್ದಾರೆ.
ಈ ಅವಧಿಯಲ್ಲಿ 14,475 ಏರ್ ಟ್ರಾಫಿಕ್ ಮೂವ್‌ಮೆಂಟ್ (ವಿಮಾನಗಳ ಸಂಚಾರ)ಗಳನ್ನು ನಿರ್ವಹಣೆ ಮಾಡಲಾಗಿದ್ದು, ಶೇ.42ರಷ್ಟು ಬೆಳವಣಿಗೆ ದಾಖಲಾಗಿದೆ. ಇದರಲ್ಲಿ 10,060 ದೇಶೀಯ ವಿಮಾನಗಳಾಗಿದ್ದು, 4,150 ಅಂತಾರಾಷ್ಟ್ರೀಯ ವಿಮಾನಗಳು. 265 ಚಾರ್ಟರ್ಡ್ ಫ್ಲೆ$çಟ್. 2021-22ರಲ್ಲಿ 7792 ದೇಶೀಯ, 2122 ಅಂತರಾಷ್ಟ್ರೀಯ ಮತ್ತು 298 ಚಾರ್ಟರ್ಡ್ ವಿಮಾನಗಳು ಸೇರಿದಂತೆ 10,212 ವಿಮಾನಗಳನ್ನು ನಿರ್ವಹಿಸಲಾಗಿದೆ.
ಫೆಬ್ರವರಿ ತಿಂಗಳಿಗೆ ಹೋಲಿಸಿದರೆ ವಿಮಾನ ನಿಲ್ದಾಣವು ಮಾರ್ಚ್ ತಿಂಗಳಲ್ಲಿ ಪ್ರಯಾಣಿಕರ ದಟ್ಟಣೆಯಲ್ಲಿ ಶೇ.7ರಷ್ಟು ಬೆಳವಣಿಗೆ ಕಂಡಿದೆ. ಮಾರ್ಚ್ ತಿಂಗಳಲ್ಲಿ 98,191 ದೇಶೀಯ ಪ್ರಯಾಣಿಕರು ಸೇರಿದಂತೆ 1,43,788 ಪ್ರಯಾಣಿಕರನ್ನು ನಿರ್ವಹಿಸಲಾಗಿದ್ದು, ಫೆಬ್ರವರಿ ತಿಂಗಳಲ್ಲಿ ಈ ಸಂಖ್ಯೆ 1,34,583 ಇತ್ತು. ವಿಮಾನಗಳ ಓಡಾಟವೂ ಮಾರ್ಚ್‌ನಲ್ಲಿ ಶೇ.7ರಷ್ಟು ಹೆಚ್ಚಾಗಿದೆ ಎಂದು ವಿಮಾನ ನಿಲ್ದಾಣದ ಪ್ರಕಟನೆ ತಿಳಿಸಿದೆ.